Site icon Vistara News

Prajwal Revanna Case: ಯಾರೂ ಆತಂಕಪಡಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತೆ ಎಂದ ರೇವಣ್ಣ

Prajwal Revanna Case

ಹಾಸನ: ಲೋಕಸಭಾ ಚುನಾವಣೆ ಫಲಿತಾಂಶವನ್ನು ಜನರಿಗೆ ಬಿಟ್ಟಿದ್ದೇನೆ. ಜನತೆಯ ತೀರ್ಪಿಗೆ ತಲೆ ಬಾಗುತ್ತೇವೆ, ನಾವು ಅಧಿಕಾರಕ್ಕೋಸ್ಕರ ಹೋರಾಟ ಮಾಡಲ್ಲ. ಅಧಿಕಾರ ಇದ್ದರೂ ಕೆಲಸ ಮಾಡುತ್ತೇವೆ, ಅಧಿಕಾರ ಇಲ್ಲದ್ದಿದ್ಧರೂ ಕೆಲಸ ಮಾಡುತ್ತೇವೆ. ಯಾರೂ ಆತಂಕಪಡಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತೆ, ಟೈಂ ಬೇಕು ಅಷ್ಟೇ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (Prajwal Revanna Case) ಹೇಳಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ವಿರುದ್ಧ ದಾಖಲಾದ ಎರಡು ಪ್ರಕರಣಗಳ ಬಗ್ಗೆ ಮಾತನಾಡಿ, ನಮ್ಮ ಜಿಲ್ಲೆಯ ಜನರನ್ನು 60 ವರ್ಷ ದೇವೇಗೌಡರು ಕಾಪಾಡಿದ್ದಾರೆ. ನನಗೂ ಜಿಲ್ಲೆಯ ಜನ ಇಪ್ಪತ್ತೈದು ವರ್ಷ ಆಶೀರ್ವಾದ ಮಾಡಿದ್ದಾರೆ. ನಾನೀದ್ದೀನಿ, ಎ.ಮಂಜು, ಸ್ವರೂಪ್‌ಪ್ರಕಾಶ್ ಇದ್ದಾರೆ. ಯಾರೂ ಭಯ, ಆತಂಕಪಡಬೇಕಾಗಿಲ್ಲ ಎಂದು ತಿಳಿಸಿದರು.

48 ಗಂಟೆಗಳಲ್ಲಿ ಪ್ರಜ್ವಲ್‌ ರೇವಣ್ಣ ಬರಬೇಕು ಎಂಬ ಕುಮಾರಸ್ವಾಮಿ ಮನವಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋರ್ಟ್‌ನಲ್ಲಿ ಕೇಸ್‌ ಇದ್ದಾಗ ನಾನು ಮಾತನಾಡಲ್ಲ ಎಂದು ರೇವಣ್ಣ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಎ.ಮಂಜು, ಅವರು ಅದರ ಬಗ್ಗೆ ಈಗ ಮಾತನಾಡಲು ಆಗಲ್ಲ ಎಂದು ಹೇಳಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಬಗ್ಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಪ್ರತಿಕ್ರಿಯಿಸಿ, ನೆನ್ನೆ ಮೈಸೂರಿನಲ್ಲಿ ಸಭೆ ನಡೆಸಲಾಗಿದೆ, ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಹೊಸ ಪದವಿ , ಹೈಸ್ಕೂಲ್, ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡಿದ್ದು ಕುಮಾರಸ್ವಾಮಿ. ಶಾಲಾ ಶಿಕ್ಷಕರು, ಪದವಿ ಉಪನ್ಯಾಸಕರನ್ನು ನೇಮಕ ಮಾಡಿದ್ದರು. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಸೇರಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದ್ದರು ಎಂದು ತಿಳಿಸಿದರು.

ಈ ಹಿಂದೆ ಇದ್ದವರು ಗೆಲ್ಲಿಸಿದ ಬಳಿಕ ತಿರುಗಿ ನೋಡುತ್ತಿರಲಿಲ್ಲ. ಈಗ ನಮ್ಮ ಅಭ್ಯರ್ಥಿ ತಮ್ಮ ಸಂಪೂರ್ಣ ಅನುದಾನ ಶಿಕ್ಷಕರಿಗೆ ಮೀಸಲಿಡುವುದಾಗಿ ಹೇಳಿದ್ದಾರೆ. ತಮ್ಮ ಸಂಬಳ ಕೂಡ ಶಿಕ್ಷಕರ ಏಳಿಗೆಗೆ ಮೀಸಲಿಡುವುದಾಗಿ ಹೇಳಿದ್ದಾರೆ. ಹೀಗೆ ಘೋಷಣೆ ಮಾಡಿದ ವ್ಯಕ್ತಿ ಹಿಂದೆ ಯಾರೂ ಇರಲಿಲ್ಲ ಎಂದು ರೇವಣ್ಣ ಹೇಳಿದರು.

ಇದನ್ನೂ ಓದಿ | MLC Election: ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌ಗೆ ಬೆಂಬಲಿಸಲು ಮಾಜಿ ಸಚಿವ ಎಚ್. ಆಂಜನೇಯ ಮನವಿ

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎ.ಮಂಜು, ಸ್ವರೂಪ್ ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ದಕ್ಷಿಣ ಶಿಕ್ಷಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿವೇಕಾನಂದ ಮತ್ತಿತರರು ಇದ್ದರು.

Exit mobile version