Site icon Vistara News

Prajwal Revanna Case: ದುಬೈ ವಿಮಾನದಲ್ಲೂ ರಾಜ್ಯಕ್ಕೆ ಬಾರದ ಸಂಸದ ಪ್ರಜ್ವಲ್ ರೇವಣ್ಣ

Prajwal Revanna Case

ಮಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊಗಳು, ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ (HD Revanna) ಬಂಧನದ ಬೆನ್ನಲ್ಲೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಕೂಡ ಭಾರತಕ್ಕೆ ಬಂದು ಪೊಲೀಸರಿಗೆ ಶರಣಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ದುಬೈನಿಂದ ಮಂಗಳೂರಿಗೆ ಬಂದ ಮೊದಲ ಏರ್‌ ಇಂಡಿಯಾ ವಿಮಾನದಲ್ಲೂ ಪ್ರಜ್ವಲ್‌ ಬಂದಿಲ್ಲ ಎಂಬುದು ಖಚಿತವಾಗಿದೆ.

ಇಂದು ಬೆಳಗ್ಗೆ 7.55ಕ್ಕೆ ದುಬೈನಿಂದ ಮಂಗಳೂರಿಗೆ ಮೊದಲ ವಿಮಾನ ಆಗಮಿಸಿದೆ. ಈ ವಿಮಾನದಲ್ಲೇ ಪ್ರಜ್ವಲ್‌ ಆಗಮಿಸುತ್ತಾರೆ ಎಂಬುದು ಬಹುತೇಕ ಖಚಿತವಾಗಿತ್ತು. ಆದರೆ ಈ ವಿಮಾನದಲ್ಲಿ ಅವರು ಬಂದಿಲ್ಲ ಎಂಬ ಮಾಹಿತಿ ದೊರೆತಿದೆ. ಇನ್ನು ಇಂದು ಸಂಜೆ 4.35ಕ್ಕೆ ದುಬೈನಿಂದ ಮತ್ತೊಂದು ವಿಮಾನ ಆಗಮಿಸಲಿದ್ದು, ಅದರಲ್ಲಿ ಪ್ರಜ್ವಲ್‌ ರಾಜ್ಯಕ್ಕೆ ವಾಪಾಸಾಗಲಿದ್ದಾರೆ ಎನ್ನಲಾಗಿದೆ.

ಅಶ್ಲೀಲ ವಿಡಿಯೊ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್‌ ರೇವಣ್ಣ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹಾರಾಟ ಮುಂದುವರಿಸಿದ್ದಾರೆ ಎಂದು ಅಧಿಕೃತ ಮಾಹಿತಿ ಲಭಿಸಿದೆ. ಅಶ್ಲೀಲ ವಿಡಿಯೊಗಳು ವೈರಲ್‌ ಆಗುತ್ತಲೇ ಜರ್ಮನಿಗೆ ತೆರಳಿದ್ದ ಪ್ರಜ್ವಲ್‌ ರೇವಣ್ಣ ಬಳಿಕ ದುಬೈಗೆ ತೆರಳಿದ್ದಾರೆ ಎನ್ನಲಾಗಿತ್ತು. ಈಗ ಮತ್ತೊಂದು ದೇಶಕ್ಕೆ ಹಾರಿರುವ ಪ್ರಜ್ವಲ್‌ ರೇವಣ್ಣ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಪಾಸ್‌ಪೋರ್ಟ್‌ ಎಂಟ್ರಿ ಮಾಹಿತಿಯ ಮೇರೆಗೆ ಒಂದಷ್ಟು ಸುಳಿವು ಪತ್ತೆಹಚ್ಚಿದ್ದಾರೆ. ಪಾಸ್‌ಪೋರ್ಟ್‌ ಎಂಟ್ರಿ ಆಧಾರದ ಮೇಲೆ ಪ್ರಜ್ವಲ್‌ ರೇವಣ್ಣ ಬುಡಾಫೆಸ್ಟ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಜ್ವಲ್‌ ರೇವಣ್ಣ ಪತ್ತೆಗೆ ಕಸರತ್ತು ನಡೆಸುತ್ತಿರುವ ಎಸ್‌ಐಟಿ ಅಧಿಕಾರಗಳು, ಬ್ಲ್ಯೂ ಕಾರ್ನರ್‌ ನೋಟಿಸ್‌ ಹೊರಡಿಸಬೇಕು ಎಂದು ಸಿಬಿಐಗೆ ಮನವಿ ಕೂಡ ಮಾಡಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A 1) ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಡರಾತ್ರಿವರೆಗೂ ರೇವಣ್ಣ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ರೇವಣ್ಣ ಅವರು ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಇಂದು (ಭಾನುವಾರ) ಬೆಳಗ್ಗೆ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: Prajwal Revanna Case: ಕುಮಾರಸ್ವಾಮಿಯನ್ನು ಭೇಟಿಯಾಗಲು ಒಪ್ಪದ ಅಮಿತ್ ಶಾ; ಹೋಟೆಲ್‌ಗೆ ಬಂದು ವಾಪಸ್ ಹೋದ ಎಚ್ ಡಿ ಕೆ

ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಲಿರುವ ಅಧಿಕಾರಿಗಳು, ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನ್ಯಾಯಾಧೀಶರು ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ರೇವಣ್ಣ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಸಂಜೆವರೆಗೆ ಸಮಯವಿದೆ.

Exit mobile version