Site icon Vistara News

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Prajwal Revanna Case

ಬೆಂಗಳೂರು: ಮಾಜಿ ಸಚಿವ ರೇವಣ್ಣ ಅವರಿಗೆ ಜಾಮೀನು ಮಂಜೂರಾದ ಬೆನ್ನಲ್ಲೇ ಅಮ್ಮ-ಮಗ ಎಸ್ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತಂದೆಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ(Prajwal Revanna Case), ನ್ಯಾಯಾಲಯದ ಮುಂದೆ ಶರಣಾಗುವ ಸಾಧ್ಯತೆ ಇದ್ದು, ಬಹುತೇಕ ಈ ವಾರದಲ್ಲೇ ವಿದೇಶದಿಂದ ಆಗಮಿಸಬಹುದು ಎನ್ನಲಾಗಿದೆ.

ಎಸ್ಐಟಿ ಮುಂದೆ ಬುಧವಾರ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಆದ್ದರಿಂದ ಬುಧವಾರ ಸಂಜೆ ಬೆಂಗಳೂರಿಗೆ ಬಂದು ಗುರುವಾರ ನ್ಯಾಯಾಲಯದ ಮುಂದೆ ಪ್ರಜ್ವಲ್ ಹಾಜರಾಗಲಿದ್ದಾರೆ ಎನ್ನಲಾಗಿದೆ. ರೇವಣ್ಣಗೆ ಜಾಮೀನು ಸಿಕ್ಕ ಬಳಿಕ ನ್ಯಾಯಲಯದ ಮುಂದೆ ಹಾಜರಾಗುವಂತೆ ರೇವಣ್ಣ ಕುಟುಂಬದ ವಕೀಲರು ಸಲಹೆ ನೀಡಿದ್ದು, ಹೀಗಾಗಿ ಈ ವಾರದಲ್ಲಿಯೇ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಬರುವ ಸಾಧ್ಯತೆಗಳಿವೆ.

ಇದನ್ನೂ ಓದಿ | Prajwal Revanna Case: ರೇವಣ್ಣಗೆ ಜಾಮೀನು; ಹೊಳೆನರಸೀಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು ವಶಕ್ಕೆ

ಹಾಸನ, ಹೊಳೆನರಸೀಪುರ ನಿವಾಸದಲ್ಲಿ ಎಫ್ಎಸ್ಎಲ್ ತಜ್ಞರ ಪರಿಶೀಲನೆ

ಹಾಸನ: ಪ್ರಜ್ವಲ್ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಪ್ರಕರಣದ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕಲು ಹಾಸನ ಸಂಸದರ ನಿವಾಸ ಹಾಗೂ ಹೊಳೆನರಸೀಪುರದ ರೇವಣ್ಣ ಅವರ ನಿವಾಸದಲ್ಲಿ ಎಫ್‌ಎಸ್‌ಎಲ್ ತಂಡದೊಂದಿಗೆ ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಹಾಸನದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಲಾಗಿದ್ದು, ಅತ್ಯಾಚಾರ ಆರೋಪ ಕುರಿತು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ನಂತರ ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ಎಸ್ಐಟಿ ತಂಡ ತೆರಳಿದರು. ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇನ್ಸ್‌ಪೆಕ್ಟರ್ ಸ್ಚರ್ಣ ನೇತೃತ್ವದ ತಂಡ ಪರಿಶೀಲನೆ ನಡೆಸಿತು.

ಹಾಸನ ಸಂಸದರ ನಿವಾಸ ಹಾಗೂ ಹೊಳೆನರಸೀಪುರ ನಿವಾಸದಲ್ಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದರಿಂದ ಎರಡೂ ಕಡೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.

Exit mobile version