Site icon Vistara News

Prajwal Revanna Case: ಪ್ರಜ್ವಲ್ ರೇವಣ್ಣಗೆ ಹಿನ್ನಡೆ; 4ನೇ ಕೇಸ್‌ನಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

Prajwal Revanna Case

Prajwal Revanna Files Anticipatory Bail Plea Ahead Of His Returing To India

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ನಾಲ್ಕನೇ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.

ಈ ಹಿಂದೆ ಮೂರು ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು. ಇದರಲ್ಲಿ ಒಂದು ಜಾಮೀನು ಅರ್ಜಿ, ಎರಡು ನಿರೀಕ್ಷಣಾ ಜಾಮೀನು ಅರ್ಜಿ ಸೇರಿವೆ. ಇದೀಗ ಮೂರನೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ ಅವರು ಅರ್ಜಿ ವಜಾಗೊಳಿಸಿದ್ದಾರೆ. ಇದರಿಂದ ನಾಲ್ಕನೇ ಕೇಸ್‌ನಲ್ಲಿಯೂ ಪ್ರಜ್ವಲ್‌ಗೆ ಹಿನ್ನಡೆಯಾದಂತಾಗಿದೆ.

ಏನಿದು ಪ್ರಕರಣ?

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾದಾಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪ ಪ್ರಜ್ವಲ್‌ ವಿರುದ್ದ ಕೇಳಿ ಬಂದಿದೆ. ಆರೋಪಿ ಪ್ರಜ್ವಲ್‌ ರೇವಣ್ಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಿಯತಮೆಯ ಕತ್ತು ಹಿಸುಕಿ ಕೊಂದು ಹೂತಿಟ್ಟ ಪ್ರಿಯಕರ

Murder Case

ಶಿವಮೊಗ್ಗ: ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯನ್ನು ಪ್ರಿಯಕರನೇ ಕತ್ತು ಹಿಸುಕಿ ಕೊಂದಿರುವ ಅಮಾನುಷ ಘಟನೆ ಹೊಸನಗರದ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯಾ ಮೃತ ಯುವತಿ. ಕೊಲೆ ಮಾಡಿದವನನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್ ಎಂದು ಗುರುತಿಸಲಾಗಿದೆ (Murder Case).

ಸೌಮ್ಯಾ ಮತ್ತು ಸೃಜನ್ ಕಳೆದ ಎರಡೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ತನ್ನನ್ನು ಮದುವೆಯಾಗುವಂತೆ ಸೌಮ್ಯಾ ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಸೃಜನ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸೃಜನ್ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ. ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸೃಜನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತೀರ್ಥಹಳ್ಳಿಯಲ್ಲಿ ಫೈನಾನ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೃಜನ್‌ ಕೊಪ್ಪಕ್ಕೆ ಹಣ ವಸೂಲಿಗೆ ಹೋಗುತ್ತಿದ್ದ ವೇಳೆ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಸೌಮ್ಯಾಳ ಪರಿಚಯವಾಗಿತ್ತು. ಇಬ್ಬರ ನಡುವಿನ ಪರಿಚಯ ನಂತರ ಪ್ರೀತಿಯಾಗಿ ಬದಲಾಗಿತ್ತು. ಬೇರೆ ಬೇರೆ ಸಮುದಾಯ ಆಗಿದ್ದಕ್ಕೆ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸೃಜನ್‌ ಕ್ರಮೇಣ ಸೌಮ್ಯಾಳಿಂದ ದೂರವಾಗತೊಡಗಿದ್ದ. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಲು ಮುಂದಾಗಿದ್ದ ಸೃಜನ್‌ ಬಳಿ ಸೌಮ್ಯಾ ಮದುವೆಯಾಗುವಂತೆ ಆಗಾಗ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ.

ಘಟನೆ ವಿವರ

ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಹೇಳಿ ಜುಲೈ 2ರಂದು‌ ಸೌಮ್ಯಾ ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು. ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ‌ಕರೆದುಕೊಂಡು‌ ಹೋಗುವಂತೆ ‌ಒತ್ತಡ ಹಾಕಿದ್ದಳು. ನಮ್ಮ ಮನೆಗೆ ಈಗ ಬರಬೇಡ. ನಿಮ್ಮ ಮನೆಗೆ ವಾಪಸ್ ಹೋಗು ಎಂದು ಸೃಜನ್‌ ಸಾಗಹಾಕಲು ಮುಂದಾಗಿದ್ದ. ಇದಕ್ಕಾಗಿ ಇಬ್ಬರ ನಡುವೆ ಜಗಳವೇ ನಡೆದಿತ್ತು. ಬಳಿಕ ಸ್ವಲ್ಪ ಸಮಾಧಾನಗೊಂಡಿದ್ದರು.

ಇದನ್ನೂ ಓದಿ: Murder Case: ಜಮೀನು ವಿವಾದಕ್ಕೆ ಚಿಕ್ಕಬಳ್ಳಾಪುರದಲ್ಲಿ ಹರಿಯಿತು ನೆತ್ತರು; ಸಂಬಂಧಿಕನಿಂದಲೇ ತಂದೆ-ಮಗನ ಕೊಲೆ

ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಬಂದ ಇಬ್ಬರ ನಡುವೆ ಮತ್ತೆ ವಾಗ್ವಾದ ಆರಂಭವಾಗಿತ್ತು. ಸಿಟ್ಟಿನಿಂದ ಸೃಜನ್‌ ಸೌಮ್ಯಾಳ ವೇಳೆ ಬಲವಾಗಿ ಹಲ್ಲೆ ಮಾಡಿದ್ದ. ಬಳಿಕ ಕತ್ತು ಹಿಸುಕಿದ್ದ. ಪರಿಣಾಮವಾಗಿ ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಳು. ನಂತರ ಸೌಮ್ಯಾಳ ಶವವನ್ನು ಮುಂಬಾಳು ಬಳಿ ಹೂತಿಟ್ಟು ಸೃಜನ್‌ ಮನೆಗೆ ತೆರಳಿದ್ದ. ಈ ನಡುವೆ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸೌಮ್ಯಾ ಪೋಷಕರು ಕೊಪ್ಪ ಪೊಲೀಸರಿಗೆ ದೂರು ನೀಡಿದ್ದರು. ಅನುಮಾನ ಬಂದು ಸೃಜನ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸರ ಎದುರು ಸೌಮ್ಯಾಳನ್ನು ಹೂತಿಟ್ಟ ಸ್ಥಳದ ರಹಸ್ಯವನ್ನು ಸೃಜನ್‌ ಬಿಚ್ಚಿಟ್ಟಿದ್ದ. ಇಂದು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿಯೂ ಪ್ರಿಯಕರ ತನ್ನ ಪ್ರಿಯತಮೆಯನ್ನು ಕೊಂದ ಘಟನೆ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ ಮೃತ ಯುವತಿ. ಸದ್ಯ ತಲೆ ಮರೆಸಿಕೊಂಡ ಪ್ರಿಯಕರನಿಗಾಗಿ ಹುಡುಕಾಟ ನಡೆಯುತ್ತಿದೆ.

Exit mobile version