ಬೆಳಗಾವಿ: ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಅವರನ್ನು ವಾಯವ್ಯ ಶಿಕ್ಷಕರ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಭೇಟಿಯಾಗಿ ಶುಭಾಶಯ ಕೋರಿದ್ದಾರೆ. ರಾಜಕೀಯ ವಿರೋಧಿಗಳಾಗಿರುವ ಈ ಇಬ್ಬರ ಭೇಟಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರಕಾಶ್ ಹುಕ್ಕೇರಿ ಹಾಗೂ ಪ್ರಭಾಕರ್ ಕೋರೆ ಬಾಲ್ಯದ ಗೆಳೆಯರು. ೮ನೇ ತರಗತಿಯಿಂದ ೧೦ನೇ ತರಗತಿವರೆಗೆ ಇವರಿಬ್ಬರೂ ಒಟ್ಟಿಗೆ ಪ್ರೌಢಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದರು. ಕೋರೆ ಅವರ ನಿವಾಸದಲ್ಲಿ ಭೇಟಿಯಾಗಿ ಶುಭಾಶಯ ಕೋರಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರಪರ ಪ್ರಚಾರದಲ್ಲಿ ಪ್ರಕಾಶ್ ಹುಕ್ಕೇರಿಯನ್ನು 10ನೇ ತರಗತಿ ಫೇಲ್ ಎಂದು ಪ್ರಭಾಕರ್ ಕೋರೆ ಟೀಕಿಸಿದ್ದರು. ಆದರೂ ಪ್ರಕಾಶ್ ಹುಕ್ಕೇರಿ, ಪ್ರಭಾಕರ್ ಕೋರೆ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಕ್ಷೇತ್ರದಲ್ಲಿ ಕೆಎಲ್‌ಇ ಸಂಸ್ಥೆಯ 3 ಸಾವಿರಕ್ಕೂ ಹೆಚ್ಚು ಮತಗಳಿದ್ದವು, ಬಿಜೆಪಿ ಪರ ಕೋರೆ ಪ್ರಚಾರ ಮಾಡಿದ್ದರೂ ಕಾಂಗ್ರೆಸ್ ಅಬ್ಯರ್ಥಿ ಗೆದ್ದು ಬೀಗಿದ್ದರು. ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಹಾಗೂ ಅಭ್ಯರ್ಥಿ ನಡುವೆ ಹೊಂದಾಣಿಕೆ ಕೊರತೆ ಇತ್ತು ಎನ್ನಲಾಗಿತ್ತು. ಪ್ರಭಾಕರ್ ಕೋರೆ ಸೇರಿ ಬಿಜೆಪಿ ನಾಯಕರು ಅರುಣ್ ಶಹಾಪುರಪರ ಸಂಪೂರ್ಣವಾಗಿ ಕೆಲಸ ಮಾಡಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಪ್ರಕಾಶ ಹುಕ್ಕೇರಿ ಹಾಗೂ ಪ್ರಭಾಕರ್ ಕೋರೆ ಅವರ ಭೇಟಿ ಇದಕ್ಕೆ ಪುಷ್ಠಿ ನೀಡುವಂತಿದೆ.
ಇದನ್ನೂ ಓದಿ | ಬಾಯಲ್ಲಿರೋ ಹಲ್ಲು ಮುರೀತೀವಿ: ಎಸಿಪಿಗೆ ಆವಾಜ್ ಹಾಕಿದ ಪ್ರಕಾಶ್ ಹುಕ್ಕೇರಿ