Site icon Vistara News

Prakash Raj : ಪ್ರಕಾಶ್‌ರಾಜ್‌ ಚಹಾ ಅಂಗಡಿ ಚಂದ್ರನಿಂದ ಮಂಗಳ, ಶುಕ್ರನತ್ತ ಶಿಫ್ಟ್ ;‌ ಇನ್ನೂ ಬುದ್ಧಿ ಬಂದಿಲ್ವಾ ಅಂದ್ರು ನೆಟ್ಟಿಗರು!

PrakashRaj Chaiwala tweet

ಬೆಂಗಳೂರು: ಚಂದ್ರಲೋಕದಲ್ಲಿ ಚಹಾ ಮಾಡುವ ಚಿತ್ರವೊಂದನ್ನು ಪೋಸ್ಟ್‌ (Chaiwala Post) ಮಾಡಿ ಏಕಕಾಲದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್‌ (ISRO Ex president K Shivan) ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಪರೋಕ್ಷವಾಗಿ ಗೇಲಿ ಮಾಡಿದ್ದ ಪ್ರಕಾಶ್‌ ರಾಜ್‌ ಅವರು ತಮ್ಮ ʻಹಾಸ್ಯ ಸರಣಿʼಯನ್ನು ಮುಂದುವರಿಸಿದ್ದಾರೆ. ಅವರ ಚಹಾದ ಅಂಗಡಿ ಚಂದ್ರನಿಂದ ಮಂಗಳ (Planet Mars) ಮತ್ತು ಶುಕ್ರ ಗ್ರಹಗಳಿಗೆ (Planet Venus) ಶಿಫ್ಟ್‌ ಆಗಿದೆ!

ಈಗ ಅವರು ತಮ್ಮ ಹೊಸ ಟ್ವಿಟರ್‌ ಪೋಸ್ಟ್‌ (ಈಗಿನ ಎಕ್ಸ್‌)ನಲ್ಲಿ ಹಳೆ ಚಾಯ್‌ವಾಲಾನನ್ನು ನೆನಪು ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ ಓದಿರುವ ಜನರು ಈ ಮನುಷ್ಯನಿಗೆ ಇನ್ನೂ ಬುದ್ಧಿ ಬಂದಿಲ್ವಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಕಂಡ ಕಂಡ ಹಾಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.

ಪ್ರಕಾಶ್‌ ರಾಜ್‌ ಹೊಸ ಟ್ವೀಟ್‌ನಲ್ಲಿ ಏನಿದೆ?

ಮಲಯಾಳಿ #Chaiwala ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ .. ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೆ.. ಅವನು ಬುದ್ದಿವಂತ … ಆತನೀಗ ಮಂಗಳ .. ಶುಕ್ರ ಗ್ರಹಗಳಲ್ಲಿ ಅಂಗಡಿಯಿಟ್ಟಿದ್ದಾನೆ .. ಸಾಧ್ಯವಾದರೆ ಹೋಗಿ #justasking– ಎಂದು ಪ್ರಕಾಶ್‌ ರಾಜ್‌ ಬರೆದುಕೊಂಡಿದ್ದಾರೆ ಮತ್ತು ಹಳೆಯ ಚಿತ್ರವನ್ನೇ ಮತ್ತೆ ಹಾಕಿದ್ದಾರೆ.

ಮೊದಲ ಟ್ವೀಟ್‌ನಲ್ಲಿ ಏನಿತ್ತು ಗೊತ್ತಲ್ವಾ?

ಚಂದ್ರಯಾನ 3 ಲ್ಯಾಂಡ್‌ ಆಗುವ ಎರಡು ದಿನ ಮೊದಲು, ʻಚಂದ್ರಯಾನ ಕಳುಹಿಸಿದ ಫೋಟೊʼ ಎಂದು ಪ್ರಕಾಶ್‌ ರಾಜ್‌ ಒಂದು ಫೋಟೊ ಹಂಚಿಕೊಂಡಿದ್ದರು. “ತಾಜಾ ಸುದ್ದಿ; ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಬರೆದುಕೊಂಡಿದ್ದರು. ಅದರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್‌ (K Sivan) ಅವರು ಚಹಾ ಮಾಡುವ ದೃಶ್ಯದಂತೆ ಕಾಣಿಸುತ್ತಿತ್ತು. ಪ್ರಕಾಶ್‌ ರಾಜ್‌ ಹಂಚಿಕೊಂಡ ಚಿತ್ರದಲ್ಲಿ ಚಾಯ್‌ವಾಲಾ ಎಂಬುದಾಗಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವ್ಯಂಗ್ಯ ಮಾಡಿದಂತೆಯೂ ಇತ್ತು. ಇದನ್ನು ನೋಡಿದ ಜನರು ಪ್ರಕಾಶ್‌ ರಾಜ್‌ ಅವರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದರು.

ನಾನು ಹಾಗೆ ಹೇಳಿದ್ದಲ್ಲ ಎಂದಿದ್ದರು ಪ್ರಕಾಶ್‌ ರಾಜ್‌

ದೇಶವೇ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ಪ್ರಕಾಶ್‌ ರಾಜ್‌ ಆಡಿದ ಅಡ್ಡಮಾತು ಹಲವರನ್ನು ಕೆರಳಿಸಿತ್ತು. ಪ್ರಕಾಶ್‌ ರಾಜ್‌ ಅವರು ಈ ಹಂತದಲ್ಲಿ ಎಚ್ಚೆತ್ತುಕೊಂಡು ನಾನು ಹಾಗೆ ಹೇಳಿದ್ದಲ್ಲ ಎಂದಿದ್ದರು.

ಇದನ್ನೂ ಓದಿ : Chetan Ahimsa : ಯಶಸ್ಸಿನ ಕೀರ್ತಿ ಯಾರಿಗೆ? ಚಂದ್ರಯಾನ ಸಕ್ಸಸ್‌ ಬಗ್ಗೆ ವಿವಾದಾತ್ಮಕ ಟ್ವೀಟ್‌ ಮಾಡಿದ ಚೇತನ್‌ ಅಹಿಂಸಾ

ದ್ವೇಷದಲ್ಲಿ ಎಲ್ಲವೂ ದ್ವೇಷವಾಗಿಯೇ ಕಾಣುತ್ತದೆ. ನಾನು ಆರ್ಮ್‌ಸ್ಟ್ರಾಂಗ್‌ ಕಾಲದ ಜೋಕನ್ನು ಉಲ್ಲೇಖ ಮಾಡಿದ್ದೆ. ಆರ್ಮ್‌ಸ್ಟಾಂಗ್‌ ಚಂದ್ರನಲ್ಲಿಗೆ ಹೋದಾಗ ಒಬ್ಬ ಮಲಯಾಳಿ ಅಲ್ಲಿ ಚಹಾ ಮಾಡುತ್ತಿದ್ದನಂತೆ ಎಂಬ ಜೋಕ್‌ ಹಿಂದಿನಿಂದಲೂ ಇದೆ. ಅದನ್ನು ಉಲ್ಲೇಖಿಸಿದ್ದೇನಷ್ಟೇ. ನಾನು ಕೇರಳದ ಚಾಯ್‌ವಾಲಾನ ಬಗ್ಗೆ ಹೇಳಿದ್ದೇನೆ. ನಿಮಗೆ ಒಂದು ಜೋಕನ್ನು ಜೋಕಾಗಿ ಸ್ವೀಕರಿಸಲು ಸಾಧ್ಯವಾಗದೆ ಇದ್ದರೆ ಏನು ಮಾಡೋಣ, ಬೆಳೆಯಿರಿ ಎಂದಷ್ಟೇ ಹೇಳಬಲ್ಲೆ.. ಎಂದು ಬರೆದಿದ್ದರು. ಆದರೆ, ಚಾಯ್‌ವಾಲಾ ಎಂಬ ಮೋದಿ ಸಂಬಂಧಿತ ಪದ ಮತ್ತು ಶಿವನ್‌ ಮುಖ ಇದರ ಟಾರ್ಗೆಟ್‌ ಬೇರೆಯೇ ಇದೆ ಎಂದು ಹೇಳುತ್ತಿತ್ತು.

ಈ ನಡುವೆ ಚಂದ್ರಯಾನ ಸಕ್ಸಸ್‌ ಆದ ಬಳಿಕ ಅದನ್ನು ಅಭಿನಂದಿಸಿ ಪ್ರಕಾಶ್‌ ರಾಜ್‌ ಒಂದು ಟ್ವೀಟ್‌ ಹಾಕಿದ್ದರು. ಇಲ್ಲಿಗೆ ಪ್ರಕಾಶ್‌ ರಾಜ್‌ಗೆ ಸ್ವಲ್ಪ ಬುದ್ಧಿ ಬಂದಿದೆ ಎಂದು ಜನರು ಮಾತನಾಡಿಕೊಂಡರು. ಆದರೆ, ಇದೀಗ ಅವರು ಮತ್ತೆ ಹಳೆಚಾಳಿಗೆ ಬಿದ್ದಿರುವುದು ಮತ್ತೊಂದು ಟ್ವೀಟ್‌ ಮೂಲಕ ಬಯಲಾಗಿದೆ.

ಇದನ್ನೂ ಓದಿ: Pramod Mutalik : ಪ್ರಕಾಶ್‌ರಾಜ್ ಭಾರತದಲ್ಲಿ ಹುಟ್ಟಿದ್ದೇ ಕಳಂಕ, ಅವರಿಗೆ ಚೀನಾ ಬೆಸ್ಟ್‌ ಎಂದ ಮುತಾಲಿಕ್‌

ಈಗ ಪ್ರಕಾಶ್‌ ರಾಜ್‌ ಹೇಳಿದ್ದರ ಅರ್ಥವೇನು?

ಮಲಯಾಳಿ #Chaiwala ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ .. ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೆ.. ಅವನು ಬುದ್ದಿವಂತ … ಆತನೀಗ ಮಂಗಳ.. ಶುಕ್ರ ಗ್ರಹಗಳಲ್ಲಿ ಅಂಗಡಿಯಿಟ್ಟಿದ್ದಾನೆ .. ಸಾಧ್ಯವಾದರೆ ಹೋಗಿ #justasking– ಎಂದು ಪ್ರಕಾಶ್‌ ರಾಜ್‌ ಬರೆದುಕೊಂಡಿದ್ದಾರೆ. ನೀವೆಲ್ಲ ಹಾಸ್ಯ ಅರ್ಥವಾಗದೆ ಹಾಸ್ಯಾಸ್ಪದರಾಗುತ್ತಿದ್ದೀರಿ. ಚಾಯ್‌ವಾಲಾ ಎಲ್ಲಿ ಎಂದು ಕೇಳುತ್ತಿದ್ದೀರಿ. ಆತ ಆಗಲೇ ಚಂದ್ರನನ್ನು ಬಿಟ್ಟು ಮಂಗಳ, ಶುಕ್ರ ಗ್ರಹದಲ್ಲಿ ಅಂಗಡಿ ಇಟ್ಟಿದ್ದಾನೆ ಎಂದಿದ್ದಾರೆ. ಇದರ್ಥ ಭಾರತ ಮುಂದೆ ಶುಕ್ರ, ಮಂಗಳನಲ್ಲಿ ಕಾಲಿಟ್ಟಾಗಲೂ ಅಲ್ಲಿ ಚಾಯ್‌ವಾಲಾ ಇರುತ್ತಾನೆ ಎಂದೇ ಆಗಿದೆ.

ಆದರೆ, ಪ್ರಕಾಶ್‌ ರಾಜ್‌ ಉಲ್ಲೇಖಿಸುತ್ತಿರುವ ಚಾಯ್‌ ವಾಲಾ (ಪ್ರಧಾನಿ ನರೇಂದ್ರ ಮೋದಿ) ಚಂದ್ರನ ಬಳಿಕ ಶುಕ್ರ ಮತ್ತು ಮಂಗಳನ ಮೇಲೆ ಕಣ್ಣಿಟ್ಟಿದ್ದಾರೆ ಎಂಬಂರ್ಥವೂ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಂದ್ರಯಾನ ಯಶಸ್ವಿಯಾದ ಸಂದರ್ಭದಲ್ಲಿ ಮಾತನಾಡುತ್ತಾ ಭಾರತದ ಮುಂದಿನ ಗುರಿ ಸೂರ್ಯ, ಮಂಗಳ ಮತ್ತು ಶುಕ್ರ ಎಂದಿದ್ದರು. ಹೀಗಾಗಿ ಹೆಚ್ಚಿನವರು ಎರಡನೇ ಅರ್ಥ ಗ್ರಹಿಸಿಕೊಂಡೇ ಪ್ರಕಾಶ್‌ ರೈ ಅವರನ್ನು ತೀವ್ರವಾಗಿ ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಕಾಶ್‌ ರಾಜ್‌ ಅವರು ಏನು ಮಾತನಾಡಿದರೂ ಸುದ್ದಿ ಆಗುತ್ತಿದೆ.

Exit mobile version