Site icon Vistara News

Prakash Raj: ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದುಕೊಂಡಿರಲಿಲ್ಲ; ಸುದೀಪ್‌ಗೆ ಪ್ರಕಾಶ್‌ ರಾಜ್‌ ಮತ್ತೆ ಕ್ಲಾಸ್

Prakash Raj yet again questions Kichcha Sudeep's decision to Support BJP

Prakash Raj yet again questions Kichcha Sudeep's decision to Support BJP

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ್‌ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಒಬ್ಬ ನಟನಾಗಿ ಸುದೀಪ್‌ ಅವರು ರಾಜಕಾರಣಿಗಳ ಪರ ನಿಲ್ಲಬಾರದಿತ್ತು ಎಂದು ಹೇಳಲಾಗುತ್ತಿದೆ. ಅದರಲ್ಲೂ, ಬಹುಭಾಷಾ ನಟ ಪ್ರಕಾಶ್‌ ರಾಜ್‌ (Prakash Raj) ಅವರಂತೂ ಸುದೀಪ್‌ ಅವರ ನಿರ್ಧಾರವನ್ನು ಖಂಡಿಸುತ್ತಲೇ ಇದ್ದಾರೆ. ಸುದೀಪ್‌ ಅವರ ತೀರ್ಮಾನದಿಂದ ನನಗೆ ಶಾಕ್‌ ಆಗಿದೆ ಎಂದಿದ್ದ ಪ್ರಕಾಶ್‌ ರಾಜ್‌ ಅವರೀಗ ಮತ್ತೆ ಸುದೀಪ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. “ನೀವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ” ಎಂದು ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.

“ಸುದೀಪ್, ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ, ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ. ನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ” ಎಂದು ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ. ಇದೇ ಅರ್ಥವಿರುವ ಟ್ವೀಟ್‌ಅನ್ನು ಇಂಗ್ಲಿಷ್‌ನಲ್ಲಿಯೂ ಮಾಡಿದ್ದಾರೆ ಆ ಮೂಲಕ ಸುದೀಪ್‌ ನಿರ್ಧಾರದ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್‌ ರಾಜ್‌ ಟ್ವೀಟ್‌

ಬಿಜೆಪಿಗೆ ಸುದೀಪ್ ಮಾರಿಕೊಳ್ಳಲ್ಲ ಎಂದಿದ್ದ ಬಹುಭಾಷಾ ನಟ

ಬುಧವಾರ ಕಿಚ್ಚ ಸುದೀಪ್ (Kichcha Sudeep) ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ, ಬಿಜೆಪಿ ಸೇರುತ್ತಾರೆ ಎಂಬಿತ್ಯಾದಿ ಸುದ್ದಿ ಹರಿದಾಡುತ್ತಿದ್ದವು. ಏಪ್ರಿಲ್‌ 5ರಂದು ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಸುದ್ದಿಗೋಷ್ಠಿ ನಡೆಸಲಿದ್ದು ಸುದೀಪ್ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ ನೀಡಿದ್ದು, ಟ್ವೀಟ್‌ನಲ್ಲಿ ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿ ʻʻಇದು ಕರ್ನಾಟಕದಲ್ಲಿ ಹತಾಶ, ಸೋತ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಎಂದು ನಾನು ಬಲವಾಗಿ ನಂಬುತ್ತೇನೆ. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲʼʼ ಎಂದು ಬರೆದುಕೊಂಡಿದ್ದರು.

ಮಾನ್ಯ ಮುಖ್ಯಮಂತ್ರಿಗಳನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನನ್ನ ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ಮಾತ್ರ ನನ್ನೊಟ್ಟಿಗೆ ನಿಂತಿದ್ದರು, ಅವರಲ್ಲಿ ಬಸವರಾಜ ಬೊಮ್ಮಾಯಿ ಮಾಮ ಅವರೂ ಒಬ್ಬರು. ನಾವು ಬೆಳೆದು ಬಂದ ಹಾದಿಯಲ್ಲಿ ಪ್ರತಿ ವಿಷಯದಲ್ಲೂ ಗಾಡ್‌ ಫಾದರ್‌ ಯಾರೂ ಇರಲಿಲ್ಲ. ಮಾಮ ಆಗ ತಾನೆ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದರು. ಅವರು ಇಂದು ಸಿಎಂ ಆಗಿದ್ದಾರೆ. ಆ ವ್ಯಕ್ತಿಗೆ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದು ಬುಧವಾರ ಸುದೀಪ್‌ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಸುದೀಪ್‌ ಅವರು ಬಿಜೆಪಿಗೆ ಬೆಂಬಲ ಘೋಷಿಸುತ್ತಲೇ ಪ್ರಕಾಶ್‌ ರಾಜ್‌ ಅವರು ಅಸಮಾಧಾನ ಹೊರಹಾಕಿದ್ದರು. ನಟನ ನಿರ್ಧಾರದಿಂದ ನನಗೆ ದಿಗ್ಭ್ರಮೆಯಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Prakash Raj: ಬಿಜೆಪಿಗೆ ಸುದೀಪ್ ಬೆಂಬಲ ನೀಡಿದ್ದಕ್ಕೆ ನೋವಾಯ್ತು, ಶಾಕ್ ಆಯ್ತು ಎಂದ ನಟ ಪ್ರಕಾಶ್ ರಾಜ್

Exit mobile version