ಹುಬ್ಬಳ್ಳಿ: ಮೋದಿ ಸರ್ಕಾರ ಇವತ್ತಿಗೂ 6000 ರೂ. ಕಿಸಾನ್ ಸಮ್ಮಾನ್ ನಿಧಿಯನ್ನು ರೈತರ ಖಾತೆಗೆ ಹಾಕುತ್ತಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ಬಂದ್ ಮಾಡಿದೆ. ಇವರಿಗೆ ರೈತರ ಮೇಲೆ ನಿಜಕ್ಕೂ ಕಾಳಜಿಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದ್ದಾರೆ.
ಕಲಘಟಗಿ ವಿಧಾನಸಭಾ ಕ್ಷೇತ್ರದ ನಿಗದಿ ಗ್ರಾಮದಲ್ಲಿ ಶುಕ್ರವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನೀಡುತ್ತಿದ್ದ 4000 ರೂ. ಕಿಸಾನ್ ಸಮ್ಮಾನ್ ನಿಧಿಯನ್ನು ಈ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಥಗಿತಗೊಳಿಸಿದ್ದಾರೆ. ಗ್ಯಾರಂಟಿ ಗ್ಯಾರಂಟಿ ಎನ್ನುತ್ತಾ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ, ಒಂದೇ ಒಂದು ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಕಡೇ ಪಕ್ಷ ರಸ್ತೆಗಳಿಗೆ ಒಂದು ಬುಟ್ಟಿ ಮಣ್ಣು ಸಹ ಹಾಕಿಲ್ಲ ಎಂದು ಕಿಡಿಕಾರಿದ್ದಾರೆ.
ನಮ್ಮ ಕಾಮಗಾರಿ ಉದ್ಘಾಟಿಸಿ ಫೋಸ್ ಕೊಡುತ್ತಿದ್ದಾರೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾರ್ಯಗತಗೊಳಿಸಿದ್ದ ಕಾಮಗಾರಿಗಳನ್ನು ಕಾಂಗ್ರೆಸ್ಸಿಗರು ಉದ್ಘಾಟನೆ, ಭೂಮಿಪೂಜೆ ಮಾಡಿ ಫೋಟೊಗೆ ಫೋಸ್ ಕೊಡುತ್ತಿದ್ದಾರೆ ಎಂದು ಸಚಿವ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಮಾರಂಭವನ್ನು ಬಾಯ್ಕಾಟ್ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ ಎಂದ ಅವರು, ಕಾಂಗ್ರೆಸ್ ಪಕ್ಷ ಸರ್ಜಿಕಲ್ ಸ್ಟ್ರೈಕ್‌ಗೆ, ರಾಮ ಜನ್ಮ ಸ್ಥಳಕ್ಕೆ ಸಾಕ್ಷಿ ಕೇಳಿತ್ತು. ಇಂಥ ಪಕ್ಷಕ್ಕೆ ನೀವು ಬೆಂಬಲ ನೀಡಬೇಕೇ? ಎಂದು ಮಾರ್ಮಿಕವಾಗಿ ಹೇಳಿದರು.
ಕಾಂಗ್ರೆಸ್ ಪಕ್ಷ ಎಂದೂ ದೇಶದ ಹಿತ ಚಿಂತಿಸಿಲ್ಲ. ಬದಲಿಗೆ ತುಷ್ಟಿಕರಣದ ರಾಜಕಾರಣ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಬಂದಿದೆ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಗೆ ಬದ್ಧತೆಯೇ ಇಲ್ಲ. ಏನು ಮಾತನಾಡುತ್ತೇನೆ ಎಂಬುದು ಅವರಿಗೇ ತಿಳಿಯದು. ಅವರ ಪಕ್ಷದವರಿಗೂ ಅರ್ಥವಾಗದು. ಆ ರೀತಿ ತಾಳ-ಮೇಳ ಇಲ್ಲದಂತೆ ರಾಹುಲ್ ಬಾಬಾ ಮಾತನಾಡುತ್ತಾರೆ. ಹೀಗಿರುವಾಗ ದೇಶ ಆಳುವ ಬದ್ಧತೆ ಇವರಿಗೆಲ್ಲಿ ಬರಬೇಕು? ಎಂದು ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.
ಇದನ್ನೂ ಓದಿ | HD Kumaraswamy: ಡಿಕೆಶಿ ನೋಟು, ಡಾಕ್ಟರ್‌ಗೆ ವೋಟು; ಬಾವನ ಗೆಲ್ಲಿಸಲು ಎಚ್‌ಡಿಕೆ ಪ್ಲಾನ್!
ಮೋದಿ ಮೊದಲ 5 ವರ್ಷ ಕಾಂಗ್ರೆಸ್ ರಾಡಿ ಬಳಿಯಬೇಕಾಯಿತು
ಕಾಂಗ್ರೆಸ್ ಆಡಳಿತದಲ್ಲಿ ಬಂಗಾರ ಒತ್ತೆ ಇಡುವ ಮಟ್ಟಕ್ಕೆ ದೇಶ ತಲುಪಿತ್ತು. ಪ್ರಧಾನಿ ಮೋದಿ ಮೊದಲ 5 ವರ್ಷ ಕಾಂಗ್ರೆಸ್ ಮಾಡಿದ್ದ ರಾಡಿ ಬಳಿಯಬೇಕಾಯಿತು. ನಂತರದ 5 ವರ್ಷದಲ್ಲಿ ದೇಶವನ್ನು ಆರ್ಥಿಕ ಸುಧಾರಣೆಯತ್ತ ತಂದರು. ಈಗ ಭಾರತ ಭಿಕ್ಷೆ ಬೇಡುವ ಪರಿಸ್ಥಿತಿ ಇಲ್ಲ. ಜಗತ್ತಿನ ಹಿರಿಯಣ್ಣ ಅಮೆರಿಕ ಮೋದಿ ಅವರ ಆಟೋಗ್ರಾಫ್ ಕೇಳುವಷ್ಟರ ಮಟ್ಟಿಗೆ ಭಾರತ ಸಶಕ್ತವಾಗಿ ಬೆಳೆದು ನಿಂತಿದೆ. ವಿಶ್ವ ಸಂಸ್ಥೆ ಒತ್ತಡಕ್ಕೂ ಮಣಿಯದೇ ಧೈರ್ಯವಾಗಿ ಪ್ರಶ್ನಿಸುವ ತಾಕತ್ತು ಪ್ರದರ್ಶಿಸುತ್ತಿದೆ ಎಂದು ಜೋಶಿ ಹೇಳಿದರು.