ಹುಬ್ಬಳ್ಳಿ: ಮನೆಯನ್ನೇ ನಿರ್ವಹಿಸಲಾಗದವರು ಇನ್ನು ದೇಶ, ರಾಜ್ಯವನ್ನು ಹೇಗೆ ನಿರ್ವಹಣೆ ಮಾಡುತ್ತೀರಿ? ಮನೆಯಲ್ಲಿ 10-12 ಜನವಿದ್ದು, ಎಲ್ಲರೂ ಎಲೆಕ್ಷನ್‌ಗೆ ನಿಂತರೂ ನಿಮಗೆ ಸಮಾಧಾನ ಇಲ್ಲವೇ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ (HD Devegowda) ಕುಟುಂಬಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರಶ್ನಿಸಿದ್ದಾರೆ.
ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಮಾತನ್ನು ಹೇಳಿದ್ದರು. ಮನೆಯಲ್ಲಿ ಇರುವವರೆಲ್ಲರೂ ಎಲೆಕ್ಷನ್‌ಗೆ ಸ್ಪರ್ಧೆ ಮಾಡಿದರೆ ಮನೆಯನ್ನು ಯಾರು ನಿರ್ವಹಣೆ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದ್ದರು. ನಾನು ಇದನ್ನು ಮುಂದುವರಿಸಿ ಹೇಳುವುದಾದರೆ, “ನಿಮ್ಮ ಕುಟುಂಬ, ಮನೆಯನ್ನು ನಿರ್ವಹಣೆ ಮಾಡಲು ಆಗದವರು, ದೇಶ ಹಾಗೂ ರಾಜ್ಯವನ್ನು ಹೇಗೆ ನಿರ್ವಹಣೆ ಮಾಡುತ್ತೀರಿ ಎಂದು ವ್ಯಂಗ್ಯವಾಡಿದ್ದಾರೆ.
ಕೆಲವು ರಾಷ್ಟ್ರಗಳಲ್ಲಿ ಜಾತಿ, ಜಾತಿಗಳ ಮಧ್ಯೆ ಹೊಡೆದಾಟ ಆಗುತ್ತದೆ. ಕೆಲವು ಕಡೆ ಒಂದೇ ಜಾತಿಯವರು ಇದ್ದರೂ ಹೊಡೆದಾಟ ಆಗುತ್ತದೆ. ಹಾಗೇ ಮನೆಯವರಿಗೆಲ್ಲ ಟಿಕೆಟ್ ಕೊಟ್ಟರೂ ಯಾಕೆ ಬಡಿದಾಟ ಮಾಡಿಕೊಳ್ಳುತ್ತಿದ್ದಾರೆ? ಇಡೀ ದೇಶದಲ್ಲಿ ಒಂದೇ ಸಮಾಜದವರು ಇದ್ದರೂ ದಂಗೆ, ಬಡಿದಾಟ ಆಗುತ್ತದೆ. ಮನೆಯವರಿಗೆ ಎಲ್ಲರಿಗೂ ಟಿಕೆಟ್ ಕೊಟ್ಟರೂ ಯಾಕೆ ಬಡಿದಾಡುತ್ತಿದ್ದಾರೋ ಅರ್ಥ ಆಗುತ್ತಿಲ್ಲ. ಮೊದಲು ಮನೆಯನ್ನು ಸರಿ ಮಾಡಿಕೊಳ್ಳಿ, ಆಮೇಲೆ ರಾಜ್ಯವನ್ನು ಆಳೋಕೆ ಬನ್ನಿ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
58 ವರ್ಷ ಆಳಿದ ಕಾಂಗ್ರೆಸ್‌ನವರು ಪ್ರಧಾನಿ ನರೇಂದ್ರ ಮೋದಿ ಅವರಂತಹ ಯೋಜನೆಯನ್ನು ಕೊಟ್ಟಿಲ್ಲ. 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇನೆ ಎಂದು ಭಾಷಣ ಮಾಡಿಕೊಂಡು ಓಡಾಡುತ್ತಿದ್ದಾರೆ. ಇವರ ಕಾಲದಲ್ಲಿ ವಿದ್ಯುತ್ ಇರಲೇ ಇಲ್ಲ. ನಾವೆಲ್ಲ ವಿದ್ಯುತ್ ಉತ್ಪಾದನೆ ಮಾಡಿಟ್ಟಿದ್ದೇವೆ. ಇದೀಗ ಬಂದು ನಾವು ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳುತ್ತಾರೆ. ಸುಳ್ಳು ಹೇಳುವವರನ್ನು ನಂಬಬೇಡಿ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರ ಕುಟುಂಬದ ಬಗ್ಗೆ ಜೋಶಿ ಮಾಡಿದ ಟೀಕೆಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: PM Modi: ದೆಹಲಿ ಕನ್ನಡಿಗರಿಗೆ ಮೋಡಿ ಮಾಡಿದ ಮೋದಿ; ಕನ್ನಡದ ಅಸ್ಮಿತೆ, ಸಂಸ್ಕೃತಿ ಹೊಗಳಿದ ನಮೋ; ಹೇಗಿತ್ತು ಪ್ರಧಾನಿ ಮತಬೇಟೆ?
ಧಾರವಾಡ ಜಿಲ್ಲೆಯ ಪ್ರತಿ ಮನೆಗೂ ಇನ್ನು ಕೆಲವೇ ದಿನಗಳಲ್ಲಿ ನೀರು ಬರುತ್ತದೆ. ಕಾಂಗ್ರೆಸ್ ಕಾಲದಲ್ಲಿ ಐದು ವರ್ಷದಲ್ಲಿ 16 ಲಕ್ಷ ಮನೆ ಕೊಡುತ್ತಿದ್ದರು. ನಾವು ಎಂಟು ಕೋಟಿ ಮನೆಯನ್ನು ಕೊಟ್ಟಿದ್ದೇವೆ. ಕೆಲವೇ ದಿನಗಳಲ್ಲಿ ನಾವು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತೇವೆ. ಕಳೆದ ಎಂಟು ವರ್ಷದಲ್ಲಿ ದೇಶ ಬದಲಾವಣೆಯಾಗಿದೆ ಎಂದು ಜೋಶಿ ಹೇಳಿದರು.