ಹುಬ್ಬಳ್ಳಿ: ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಮೀಸಲಾತಿ (SC ST Reservation) ಪರಿಷ್ಕರಣೆ ಮಾಡಲಾಗಿದೆ. ಆ ಮೂಲಕ ಲಿಂಗಾಯತರು, ಒಕ್ಕಲಿಗರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿದ್ದೇವೆ. ಬಹು ವರ್ಷಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಕಾಲದಲ್ಲಿಯೇ ಆಯೋಗ ರಚಿಸಲಾಗಿತ್ತು. ಆದರೆ, ಅವರ ಅಧಿಕಾರದಲ್ಲಿ ಜಾರಿಗೆ ತರಲಿಲ್ಲ.. ನಾವು ಮೀಸಲಾತಿ ಬದಲಾಯಿಸಿದ್ದಕ್ಕೆ ಕೈ ನಾಯಕರಿಗೆ ಹೊಟ್ಟೆಕಿಚ್ಚು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ತಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪರಿಷ್ಕರಣೆ ರದ್ದು ಮಾಡುತ್ತೇವೆ ಎಂದು ಕೈ ನಾಯಕರು ಹೇಳುತ್ತಾರೆ. ಅದರ ಅರ್ಥ ಒಕ್ಕಲಿಗರು, ಲಿಂಗಾಯತರಿಗೆ ಮೀಸಲಾತಿ ಹೆಚ್ಚಳ ಮಾಡಿರುವುದಕ್ಕೆ ಕಾಂಗ್ರೆಸ್ ಸಹಮತ ಇಲ್ಲ. ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾತ್ರ ಕಾಂಗ್ರೆಸ್ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಎಲ್ಲರಿಗೂ ಮೀಸಲಾತಿ ಹೆಚ್ಚಿಸುವ ತಾಕತ್ತು ಕಾಂಗ್ರೆಸ್‌ಗೆ ಇರಲಿಲ್ಲ ಎಂದು ಕಿಡಿಕಾರಿದರು.
ಅವೈಜ್ಞಾನಿಕ, ಅಸಾಂವಿಧಾನಿಕವಾಗಿ ಮುಸ್ಲಿಮರಿಗೆ ಇವರು ಮೀಸಲಾತಿ ಕೊಟ್ಟಿದ್ದರು. ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಸಾಧ್ಯವಿಲ್ಲ. ಹೀಗಾಗಿ ಮುಸ್ಲಿಮರ ಮೀಸಲಾತಿಯನ್ನು ನಾವು ರದ್ದು ಮಾಡಿದ್ದೇವೆ. ಬಿಜೆಪಿ ಸರ್ಕಾರ ನಿರ್ಣಾಯಕ ಸರ್ಕಾರ, ಈ ನಿರ್ಣಯ ತೆಗೆದುಕೊಂಡ ಮೇಲೆ ಅವರು ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಆದರೆ ಬಿಜೆಪಿ ಸರ್ವರೂ ಸಮಾನರು ಎಂಬ ತತ್ವದಡಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳ ಮೇಲೆ ಒತ್ತಡ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಹೇಳಿಕೆ ಅತ್ಯಂತ ಬಾಲಿಶ, ಧಮ್ಕಿ ಹಾಕುವುದು ಡಿಕೆಶಿ ಸಂಸ್ಕೃತಿ. ನಾವು ಯಾರ ಮೇಲೂ ಒತ್ತಡ ಹೇರಿಲ್ಲ. ಕಾರ್ಯಕರ್ತರಿಗೆ ಹೊಡೆಯುವುದು ಸಿದ್ದರಾಮಯ್ಯ ಸಂಸ್ಕೃತಿ. ಡಿ.ಕೆ.ಶಿವಕುಮಾರ್ ಅವರದ್ದು ಗೂಂಡಾ ಸಂಸ್ಕೃತಿ ಆಗಿರುವುದರಿಂದ ಧಮ್ಕಿ ಹಾಕುತ್ತಾರೆ. ನಾವು ಯಾಕೆ ಶ್ರೀಗಳಿಗೆ ಧಮ್ಕಿ ಹಾಕೋಣ. ಈ ಹೇಳಿಕೆ ಮೂಲಕ ಶ್ರೀಗಳಿಗೆ ಡಿಕೆಶಿ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಎಸ್‌ವೈ ಮೇಲೆ ಕಲ್ಲು ತೂರಾಟ ರಾಜಕೀಯ ಪ್ರೇರಿತ
ಮಾಜಿ ಸಿಎಂ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ಎಸೆತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪನವರ ಮನೆ ಮೇಲೆ ದಾಳಿ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಸದಾಶಿವ ಆಯೋಗ ವರದಿ ಯಾರು ವಿರೋಧ ಮಾಡುತ್ತಾರೋ ಅವರಿಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರೂ ಒಪ್ಪುವಂತಹ ರೀತಿಯಲ್ಲಿ ತೀರ್ಮಾನ ತೆಗೆದುಕೊಂಡಿರುವುದಾಗಿ ಸಿಎಂ ಹೇಳಿದ್ದು, ಸಂಬಂಧಪಟ್ಟವರನ್ನು ಕರೆದು ಮಾತನಾಡಿ ಎಲ್ಲರಿಗೂ ಮನವರಿಕೆ ಮಾಡುತ್ತಾರೆ ಎಂದು ತಿಳಿಸಿದರು.
ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ನಾನು ಮನವಿ ಮಾಡುತ್ತೇನೆ. ಯಡಿಯೂರಪ್ಪನವರು ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ಹಿರಿಯ ರಾಜಕಾರಣಿ. ಅವರ ಮನೆ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಎಲ್ಲರನ್ನೂ ಕರೆದು ಸದಾಶಿವ ಆಯೋಗದ ಬಗ್ಗೆ ಮಾತನಾಡಿದ್ದಾರೆ. ಅಧಿಕಾರಿಗಳು, ಪ್ರಮುಖರ ಜತೆ ಸಿಎಂ ಮಾತನಾಡಿದ್ದಾರೆ. ಇದನ್ನೆಲ್ಲ ಮಾಡದೇ ವರದಿ ಜಾರಿಗೆ ತರಲು ಸಾಧ್ಯವಿಲ್ಲ. ಈ ಪ್ರತಿಭಟನೆ, ಗಲಾಟೆ ರಾಜಕೀಯ ಪ್ರೇರಿತ ಕೂಡ ಆಗಿರಬಹುದು. ಅದರ ಬಗ್ಗೆ ನಾನೂ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಮತ್ತೊಮ್ಮೆ ಸೋಲಿನ ಭೀತಿ ಕಾಡುತ್ತಿದೆ
ಹುಬ್ಬಳ್ಳಿ: ಸೋಲಿನ ಭೀತಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಈಗ ಅವರಿಗೆ ಮತ್ತೊಮ್ಮೆ ಸೋಲಿನ ಭೀತಿ ಕಾಡುತ್ತಿದೆ. ಕೋಲಾರ ಆಯ್ತು, ರಾಜ್ಯದ ವಿವಿಧ ಕ್ಷೇತ್ರಗಳಾಯ್ತು, ಈಗ ವರುಣಾ ಟಿಕೆಟ್ ಅಂತಿಮವಾಗಿದೆ. ಮುಂದೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ನಡೆದುಕೊಂಡ ರೀತಿಯೇ ಕಾರಣ ಎಂದರು.
ಇದನ್ನೂ ಓದಿ | Karnataka Election: ಕಾಂಗ್ರೆಸ್‌ನಲ್ಲಿ ಸಿಎಂ ಆಗೋಕೆ ಮೂರು ಜನ ಚಡ್ಡಿ ಹೊಲಿಸ್ಕೊಂಡು ಕೂತಾರ: ಗೋವಿಂದ ಕಾರಜೋಳ ವ್ಯಂಗ್ಯ
ಕೆ.ಎಚ್.ಮುನಿಯಪ್ಪ, ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಸಿದ್ದರಾಮಯ್ಯ ಕಾರಣ. ಹೀಗಾಗಿ ಅವರೆಲ್ಲರೂ ಸಿದ್ದರಾಮಯ್ಯರನ್ನು ಸೋಲಿಸುವ ಪಣತೊಟ್ಟಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ, ಐದು ವರ್ಷ ಸಿಎಂ ಆಗಿದ್ದವರಿಗೆ ನಿಲ್ಲುವುದಕ್ಕೆ ಒಂದು ಕ್ಷೇತ್ರವಿಲ್ಲ. ಅವರು ಯಾವ ಕ್ಷೇತ್ರದಲ್ಲಿಯೂ ಗೆಲ್ಲುವುದಿಲ್ಲ. 25 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಬೇಡಿಕೆ ಇದೇ ಎಂಬುವುದು ಡ್ರಾಮಾ. ನಮ್ಮ ಸಿಎಂ ಸೇರಿ ಉಳಿದ ನಾಯಕರು ಒಂದೇ ಕಡೆ ಸ್ಪರ್ಧಿಸುತ್ತಾರೆ. ಗೆಲ್ಲುತ್ತಾರೆ ಎಂಬುದಾದರೆ ಒಂದು ಕಡೆ ಫೈನಲ್ ಮಾಡಲಿ ಎಂದು ಹೇಳಿದರು.