ಶಿವಮೊಗ್ಗ: ಪ್ರತಾಪ್ ಸಿಂಹ ಅಣ್ಣನವರು ಬಹಳ ಬುದ್ಧಿವಂತರು. ಅವರು ಸರ್ವಜ್ಞ ಇದ್ದಂತೆ, ಅವರ ಚಿಂತನೆಗಳಿಗೆ ಸರಿಸಾಟಿ ಆಗುವ ರಾಜಕಾರಣಿಗಳು ರಾಜ್ಯ, ದೇಶದಲ್ಲಿ ಎಲ್ಲೂ ಇಲ್ಲ. ಜನರು ಅವರನ್ನು ಸುಮ್ಮನೆ ಕೂರಿಸುವುದಕ್ಕೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರು ಸ್ವಲ್ಪ ದಿನ ಸುಮ್ಮನಿದ್ದರೆ ಒಳ್ಳೆಯದು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು (Congress Guarantee) ಎಲ್ಲರಿಗೂ ತಲುಪುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕುಟುಂಬಗಳನ್ನು ಒಡೆಯುತ್ತಿವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಭದ್ರಾವತಿಯಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ತಲುಪುತ್ತದೆ. ಯಾವುದೇ ಕುಟುಂಬಗಳನ್ನು ಒಡೆಯುವ ಕೆಲಸ ನಮ್ಮ ಸರ್ಕಾರ ಮಾಡುವುದಿಲ್ಲ. ಈಗಾಗಲೇ ಅರ್ಜಿ ಸಲ್ಲಿಕೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಶೇ. 88 ಜನರು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿದ್ದಾರೆ. ದಾಖಲೆ ಪಡೆದು ಎಲ್ಲರಿಗೂ ಯೋಜನೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರದ ಹಗರಣಗಳ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರವನ್ನು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗುತ್ತದೆ. ನಾವು 40 ಪರ್ಸೆಂಟ್ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಭ್ರಷ್ಟಾಚಾರ, ಬೆಲೆ ಏರಿಕೆ ತೆಗೆಯುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ. ರಾಜ್ಯದ ಜನರ ಮುಖದಲ್ಲಿ ಮಂದಹಾಸ ಮೂಡಿಸುವುದಕ್ಕೆ ನಮ್ಮ ಸರ್ಕಾರದ ಯೋಜನೆಗಳು ಜಾರಿಗೆ ತರುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Karnataka Politics: ಹಿಟ್ಲರ್ ಗಿಟ್ಲರ್ ಅಂದ್ರೆ ಜೈಲು ಗ್ಯಾರಂಟಿ: ಇದು ಚಕ್ರವರ್ತಿ ಸೂಲಿಬೆಲೆಗೆ ಎಂ.ಬಿ. ಪಾಟೀಲ್ ಎಚ್ಚರಿಕೆ ಧಾಟಿ!
ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನಮ್ಮ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಗುಣಮಟ್ಟದ ಆಹಾರ ಪೂರೈಕೆ ಮಾಡುವುದು ನಮ್ಮ ಗುರಿ. ಇಲಾಖೆಯಲ್ಲಿ ಎಲ್ಲೆಲ್ಲಿ ನ್ಯೂನ್ಯತೆಗಳಿವೆ, ಅವುಗಳನ್ನು ಸರಿ ಮಾಡುತ್ತೇವೆ. ಇಲಾಖೆಯಲ್ಲಿ ಪಡಿತರ ಸೋರಿಕೆ ತಡೆಗಟ್ಟಿ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುವತ್ತ ಗಮನ ಹರಿಸುತ್ತೇವೆ. ನಮ್ಮ ಸರ್ಕಾರ ಪೌಷ್ಟಿಕತೆ, ಉತ್ತಮ ಆರೋಗ್ಯ ಕಡೆ ಕೊಡುತ್ತದೆ ಎಂದು ತಿಳಿಸಿದರು.