ಮಂಗಳೂರು: ರಾಜ್ಯಾದ್ಯಂತ ಸುದ್ದಿಯಾದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೊಲೆಗೆ ನಿಜವಾದ ಕಾರಣ ಏನು ಎನ್ನುವ ಬಗ್ಗೆ ತಲೆಗೊಂದು ಮಾತುಗಳು ಕೇಳಿಬಂದಿದ್ದವು. ಇದು ಬೆಳ್ಳಾರೆ ಪ್ರದೇಶದಲ್ಲಿ ನಡೆದ ಕಳಂಜದ ಮಸೂದ್ ಕೊಲೆಗೆ ಪ್ರತೀಕಾರವಾಗಿ ನಡೆದ ಕೃತ್ಯ ಎಂದು, ಪ್ರವೀಣ್ ಹಿಂದು ನಾಯಕನಾಗಿ ಬೆಳೆಯುತ್ತಿರುವುದನ್ನು ತಡೆಯುವ ಕಾರಣದಿಂದ ನಡೆದ ಕೊಲೆ ಎಂದೆಲ್ಲ ಹೇಳಲಾಗಿತ್ತು. ಆದರೆ, ಈ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ ಈ ನಿಟ್ಟಿನಲ್ಲಿ ಹೊಸ ಕಾರಣವೊಂದನ್ನು ಕಂಡುಕೊಂಡಿದೆ.
ಎನ್ಐಎ ಅಧಿಕಾರಿಗಳು ದಾಖಲಿಸಿರುವ ಎಫ್ ಐಆರ್ ಪ್ರಕಾರ ಈ ಕೊಲೆ ನಡೆದಿರುವುದು ಯಾವುದೇ ದ್ವೇಷಕ್ಕಲ್ಲ. ಬದಲಾಗಿ ಒಂದು ಬರ್ಬರ ಕೊಲೆಯ ಮೂಲಕ ಪ್ರದೇಶದಲ್ಲಿ ಭಯ ಹುಟ್ಟಿಸುವುದು, ಒಂದು ಸಮುದಾಯಕ್ಕೆ, ಜನರಿಗೆ ಸಂದೇಶವನ್ನು ರವಾನಿಸುವುದು. ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯಕ್ಕೆ ಸಂಚು ನಡೆಸಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು
ಈ ಪ್ರಕರಣಕ್ಕೆ ಸಂಬಂಧಿಸಿದ ಏಳು ಮಂದಿಯನ್ನು ಬಂಧಿಸಲಾಗಿದ್ದರೂ ಎನ್‌ಐಎ ಮೊದಲ ಹಂತದಲ್ಲಿ ನಾಲ್ವರ ವಿರುದ್ಧ ಮಾತ್ರ ಎಫ್‌ಐಆರ್ ದಾಖಲಿಸಿದೆ. ಆರಂಭದಲ್ಲಿ ಬಂಧಿಸಲಾದ ಬೆಳ್ಳಾರೆಯ ಮಹಮ್ಮದ್ ಶಫೀಕ್, ಸವಣೂರಿನ ಝಾಕಿರ್, ಬೆಂಗಳೂರಿನಲ್ಲಿ ಬಂಧಿತರಾದ ಶೇಕ್ ಸದ್ದಾಂ ಮತ್ತು ಅಬ್ದುಲ್ ಹ್ಯಾರಿಸ್ ಮೇಲೆ ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಯುಎಪಿಎ ಕಲಂ ಅಡಿಯಲ್ಲಿ ಕೇಸು
ಪ್ರವೀಣ್ ನೆಟ್ಟಾರು ಆರೋಪಿಗಳ ವಿರುದ್ಧ ಯುಎಪಿಎ ಕಲಂ ಅಡಿಯಲ್ಲಿ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್‌ನ 120ಬಿ, 302, 34 ಹಾಗೂ ಯುಎಪಿಎ ಕಲಂ 16 ಮತ್ತು18 ರಡಿ ಆರೋಪ ಹೊರಿಸಲಾಗಿದೆ. ಎನ್ಐಎ ದೆಹಲಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.
ಕೇಸ್ ವಿವರಗಳು ಬೆಳ್ಳಾರೆ ಠಾಣೆಯಿಂದ
ಎನ್‌ಐಎ ದಿಲ್ಲಿಯಿಂದ ಕಾರ್ಯಾಚರಿಸುತ್ತಿರುವುದರಿಂದ ಅಲ್ಲೇ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಬೆಳ್ಳಾರೆ ಪೊಲೀಸ್ ಠಾಣೆ ಕೇಸ್ ಫೈಲ್ ಪಡೆದು ತನಿಖೆ ಕೈಗೊಂಡಿರುವ ಎನ್‌ಐಎ ಈ ಕಡತಗಳಲ್ಲಿರುವ ಅಂಶಗಳನ್ನು ಎಫ್‌ಐಆರ್ ಉಲ್ಲೇಖಿಸಿದೆ.
ಇದರಲ್ಲಿ ಹತ್ಯೆ ಹಿಂದಿನ ಉದ್ದೇಶ ಏನು ಎಂಬುದು ಉಲ್ಲೇಖಿಸಿದ ಎನ್ಐಎ, ಸ್ಥಳೀಯರಿಗೆ ಭಯ ಹುಟ್ಟಿಸಲು ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದಾರೆ ಎನ್ನುವ ಅಂಶಕ್ಕೆ ಹೆಚ್ಚು ಒತ್ತು ನೀಡಿದೆ. ಇದೇ ಆಧಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ| Praveen Nettaru | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ