ಮಂಗಳೂರು: ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು(Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಬಂಧಿತರಾದ ಇಬ್ಬರು ಆರೋಪಿಗಳನ್ನು ಸೋಮವಾರ ಸುಳ್ಯದ ಪಿಎಫ್‌ಐ ಕಚೇರಿಗೆ ಕರೆತಂದು ಮಹಜರು ಮಾಡಲಾಗಿದೆ.
ಸುಳ್ಯದ ನಾವೂರು ನಿವಾಸಿ ಅಬೀದ್(22) ಮತ್ತು ಬೆಳ್ಳಾರೆ ನಿವಾಸಿ ನೌಫಲ್(28) ಅವರನ್ನು ಸುಳ್ಯದ ಕಚೇರಿಗೆ ಕರೆತರಲಾಗಿತ್ತು. ಇದೇ ಕಚೇರಿಯಲ್ಲಿ ಪ್ರವೀಣ್ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆರೋಪಗಳ ನೆಲೆಯಲ್ಲಿ ಕರೆದುಕೊಂಡು ಹೋಗಿ ಸ್ಪಾಟ್ ಮಹಜರು ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಗಾಂಧಿ ನಗರದ ಅಲೆಟ್ಟಿ ರಸ್ತೆಯಲ್ಲಿ ಪಿಎಫ್‌ಐ ಕಚೇರಿ ಇದೆ. ಎಡಿಜಿಪಿ ಅಲೋಕ್ ಕುಮಾರ್ ಅವರೇ ಇಲ್ಲಿಗೆ ಆಗಮಿಸಿ ಆರೋಪಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣವೇ ಬೆಳ್ಳಾರೆಯ ಶಫೀಕ್, ಸವಣೂರಿನ ಮೊಹಮ್ಮದ್ ಝಾಕೀರ್ ನನ್ನು ಬಂಧಿಸಲಾಗಿತ್ತು. ಬಳಿಕ ಬೆಂಗಳೂರಿನಲ್ಲಿ ಸದ್ದಾಂ ಮತ್ತು ಹ್ಯಾರಿಸ್ ಅವರನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಅಬೀದ್ ಮತ್ತು ನೌಫಾಲ್ ಸಿಕ್ಕಿಬಿದ್ದಿದ್ದಾರೆ. ಅಬೀದ್‌ನ್ನು ತಲಶ್ಶೇರಿಯಲ್ಲಿ ಬಂಧಿಸಲಾಗಿದ್ದು, ಆತ ಈ ಕೊಲೆಯನ್ನು ನಡೆಸಿದ ಕೇರಳ ಆರೋಪಿಗಳ ಜತೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗಿದೆ.
ಪ್ರವೀಣ್ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಲ್ಲಿ ನೇರ ಭಾಗಿಯಾದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ| Praveen Nettaru | ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳ ಬಂಧನ