Site icon Vistara News

Praveen Murder| ಕೇಂದ್ರವೂ ನಮ್ಮದೇ, ರಾಜ್ಯವೂ ನಮ್ಮದೇ ಕೊನೆಗೆ ಸಾವೂ ನಮ್ಮದೇ: ಕಾರ್ಯಕರ್ತರ ಆಕ್ರೋಶ

Praveen Nettaru Murder

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರವೀಣ್‌ ನೆಟ್ಟಾರು ಅವರ ಭೀಕರ ಹತ್ಯೆ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ. ಇಡೀ ಕರಾವಳಿಯಲ್ಲಿ ರಾಜ್ಯ ಸರಕಾರ ಮತ್ತು ಗೃಹ ಸಚಿವರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದರೂ ದುಷ್ಕರ್ಮಿಗಳು ಹಿಂದೂ ಕಾರ್ಯಕರ್ತರನ್ನು ಹೀಗೆ ನಡುಬೀದಿಯಲ್ಲಿ ಕೊಲೆ ಮಾಡುತ್ತಿರುವುದು ಸರಕಾರದ ವೈಫಲ್ಯಕ್ಕೆ ಮತ್ತು ಹಿಂದೂ ಕಾರ್ಯಕರ್ತರ ಬಗೆಗಿನ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಹಲವರು ನೇರವಾಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮಾತ್ರವಲ್ಲದೆ ಸ್ಥಳೀಯ ಬಿಜೆಪಿ ನಾಯಕರನ್ನು ಗುರಿಯಾಗಿಟ್ಟು ಜನಾಕ್ರೋಶ ಜೋರಾಗಿದೆ. ನಮ್ಮದೇ ಸರಕಾರ ಇದ್ದರೂ ನಮ್ಮ ಕಾರ್ಯಕರ್ತರಿಗೆ ಭದ್ರತೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಪ್ರವೀಣ್‌ ನೆಟ್ಟಾರು ಅವರು ಮಂಗಳವಾರ ರಾತ್ರಿ ೯ ಗಂಟೆ ಹೊತ್ತಿಗೆ ತಮ್ಮ ಕೋಳಿ ಅಂಗಡಿಗೆ ಬೀಗ ಹಾಕಿ ಹೊರಡುವ ವೇಳೆ ಬೈಕ್‌ನಲ್ಲಿ ಬಂದಿದ್ದ ಮುಸುಕುಧಾರಿ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದರು. ಪ್ರವೀಣ್‌ ಅವರು ಅಪಾಯವನ್ನು ಗ್ರಹಿಸಿ ಪಕ್ಕದ ಅಂಗಡಿಯತ್ತ ಓಡಲು ಯತ್ನಿಸಿದರೂ ದುಷ್ಕರ್ಮಿಗಳು ಬೆನ್ನಟ್ಟಿ ತಲೆಗೆ ಹೊಡೆದು ಕೊಲೆ ಮಾಡಿದ್ದರು. ವಸ್ತುಶಃ ಇದು ನಡು ರಸ್ತೆಯಲ್ಲೇ ಭೀಕರವಾಗಿ ಕೊಚ್ಚಿ ಹಾಕಲಾಗಿದೆ. ಅವರನ್ನು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟು ಹೊತ್ತಿಗೆ ಪ್ರಾಣ ಪಕ್ಷಿ ಹಾರಿಹೋಗಿತ್ತು. ಒಂದು ವರ್ಷದ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ೩೦ ವರ್ಷದ ಹಿಂದೂ ಕಾರ್ಯಕರ್ತ ಶವವಾಗಿ ಮಲಗಿದ್ದರು.

ದುಷ್ಕರ್ಮಿಗಳು ಇಷ್ಟೊಂದು ರಾಜಾರೋಷವಾಗಿ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲು ರಾಜ್ಯ ಸರಕಾರದ ಬಗ್ಗೆ, ಗೃಹ ಸಚಿವರ ಬಗ್ಗೆ ಯಾವುದೇ ಭಯ ಇಲ್ಲದಿರುವುದೇ ಕಾರಣ ಎನ್ನುವುದು ಹಲವರ ನೇರ ಆರೋಪ. ಬಿಜೆಪಿ ಸರಕಾರಕ್ಕೆ ಹಿಂದೂಗಳ ಮತಗಳ ಮೇಲಷ್ಟೇ ಕಣ್ಣು ಹೊರತು, ಹಿಂದೂ ಕಾರ್ಯಕರ್ತರ ಜೀವ ರಕ್ಷಣೆ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಆಪಾದಿಸಲಾಗುತ್ತಿದೆ.

ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ಆರೋಪ, ಅದನ್ನು ಪ್ರಶ್ನಿಸಿದ ಹರ್ಷನ ಸಹೋದರಿಯ ಜತೆ ಗೃಹ ಸಚಿವರು ಒರಟಾಗಿ ವರ್ತಿಸಿರುವುದು ಮೊದಲಾದ ಘಟನೆಗಳಿಂದ ಈಗಾಗಲೇ ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶ ಮಡುಗಟ್ಟಿತ್ತು. ಹಿಂದೆಲ್ಲ ಹಿಂದೂ ಕಾರ್ಯಕರ್ತರ ಕೊಲೆ ನಡೆದಾಗ ಅದಕ್ಕೆ ಕಾಂಗ್ರೆಸ್‌ ಸರಕಾರ ನೀಡುತ್ತಿರುವ ಕುಮ್ಮಕ್ಕು ಮತ್ತು ರಕ್ಷಣೆಯೇ ಕಾರಣ ಎಂದು ಕೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಈಗ ಬಿಜೆಪಿ ಸರಕಾರವಿದ್ದರೂ ಹೆಣಗಳು ಉರುಳುತ್ತಿರುವುದನ್ನು ಅಸಹಾಯಕರಾಗಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಕಾರ್ಯಕರ್ತರಿಗೆ ಬೇಸರ ಮೂಡಿಸಿದೆ.

ಎಲ್ಲ ಕಡೆ ನಾವೇ? ಕೊನೆಗೆ ಸಾವೇ!
ʻಕೇಂದ್ರವೂ ನಮ್ಮದೇ ರಾಜ್ಯವೂ ನಮ್ಮದೇ ಕೊನೆಗೆ ಸಾವೂ ನಮ್ಮದೇʼ ಎನ್ನುವ ಹತಾಶ ನುಡಿಗಳು ಎಲ್ಲೆಡೆ ಕೇಳಿಬರುತ್ತಿದೆ. ʻಕೊಂದವರಿಗೆ ಒಂದು ಕೊಲೆ, ಮನೆಯವರಿಗೆ ಒಂದು ಬದುಕು, ಪೊಲೀಸರಿಗೆ ಒಂದು ಹೆಣ, ಪಕ್ಷಕಕೆ ಒಬ್ಬ ಕಾರ್ಯಕರ್ತ, ಓಂ ಶಾಂತಿ ಹೇಳುವವರಿಗೆ ಒಂದು ಫೋಟೊ, ಮತ್ತೇನಿಲ್ಲ ಇಷ್ಟೇ ನಮ್ಮ ಕತೆ, ನಿನ್ನೆ ಹರ್ಷ, ಇಂದು ಪ್ರವೀಣ.. ನಾಳೆ..??ʼ ಎಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ನರಸತ್ತ ಬಿಜೆಪಿ ನಾಯಕರು

ʻನರಸತ್ತ ಬಿಜೆಪಿ ನಾಯಕರಿಗೆ ಅಧಿಕಾರ ಕೊಟ್ಟರೂ ಏನೂ ಪ್ರಯೋಜನವಿಲ್ಲ. ಇವರ ನಿಷ್ಕಾಳಜಿಗೆ ಅಮಾಯಕ ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕಾರ್ಯಕರ್ತರು. ಬಿಜೆಪಿ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆಯನ್ನು ಗೇಲಿ ಮಾಡಿರುವ ನೆಟ್ಟಿಗರು ʻಕಠಿಣ ಕ್ರಮಕ್ಕೆ ಇನ್ನೊಂದು ಬಲಿʼ ಎಂದು ಸಚಿವ ಆರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದೆ ಇರುವಾಗ ಪಕ್ಷದಲ್ಲಿ ಹೆಣಗಳ ಸಂಖ್ಯೆ ಎಣಿಸಬೇಕಾ ಎಂದು ಬೊಮ್ಮಾಯಿ ಸರಕಾರವನ್ನು ಪ್ರಶ್ನಿಸಲಾಗುತ್ತಿದೆ.

ಅಟಲ್‌ ಹೇಳಿದ್ದೂ ಸುಳ್ಳಾಗುತ್ತಿದೆ
ʻʻಅಟಲ್ ಜಿ ಒಂದು ಕಾಲದಲ್ಲಿ ಹೇಳಿದ್ರು ಬಿಜೆಪಿ ನಾಯಕರು ಸೋಲಬಹುದು ಆದರೆ ಬಿಜೆಪಿ ಕಾರ್ಯಕರ್ತರು ಸೋಲುವುದಿಲ್ಲ ಅಂತ. ಆದರೆ ಅದು ಯಾಕೋ ಇವತ್ತಿಗೆ ಅಕ್ಷರಶಃ ಸುಳ್ಳು ಅನಿಸ್ತಾ ಇದೆ, ಬಿಜೆಪಿ ನಾಯಕರೇ ಕಾರ್ಯಕರ್ತನ್ನು ಸೋಲಿಸ್ತಾ ಇದ್ದರೇನೋ ಅನಿಸ್ತಾ ಇದೆ..ʼʼ ಎಂದು ಕಾರ್ಯಕರ್ತರೊಬ್ಬರು ಬರೆದುಕೊಂಡಿದ್ದಾರೆ.

ಇವರಿಗೆ ಹೆಣ ಬಿದ್ದರೇ ಖುಷಿ
ಬಿಜೆಪಿ ನಾಯಕರು ಎಲ್ಲ ಪಕ್ಷಗಳ ನಾಯಕರ ಜತೆ ಹೊಂದಾಣಿಕೆ ಮಾಡಿಕೊಂಡು ಆರಾಮವಾಗಿದ್ದಾರೆ. ಕಾರ್ಯಕರ್ತರು ಮಾತ್ರ ಪಕ್ಷ, ಧರ್ಮ ಎಂದು ಪ್ರಾಣ ಬಿಡುತ್ತಿರುವುದು. ಅವರಿಗೆಲ್ಲ ಹಿಂದೂ ಕಾರ್ಯಕರ್ತರ ಹೆಣ ಬಿದ್ದರೇ ಸಂತೋಷ. ಅವರಿಗೆ ಮುಂದಿನ ಚುನಾವಣೆ ಎದುರಿಸಲು ಈ ಹೆಣಗಳೇ ಮೆಟ್ಟಿಲು ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

iಇದನ್ನೂ ಓದಿ| Praveen Nettaru Murder | ಹುಟ್ಟೂರಿನತ್ತ ಪ್ರವೀಣ್‌ ಮೃತ ದೇಹ, ಅಂತ್ಯಕ್ರಿಯೆಗೆ ಸಿದ್ಧತೆ

Exit mobile version