ಮಂಗಳೂರು: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಬೆಳ್ಳಾರೆಯ ಚಿಕನ್ ಸೆಂಟರ್ ಮಾಲೀಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಧಾನ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಜುಲೈ ೨೬ರಂದು ರಾತ್ರಿ ೮ ಗಂಟೆಯ ಹೊತ್ತಿಗೆ ಬೈಕ್‌ನಲ್ಲಿ ಬಂದು ಪ್ರವೀಣ್ ಅವರನ್ನು ಅಟ್ಟಾಡಿಸಿ ಕೊಂದು ಹಾಕಿದ್ದ ಮೂವರು ಪ್ರಧಾನ ಹಂತಕರು ಬಲೆಗೆ ಬಿದ್ದಿರಲಿಲ್ಲ. ಪೊಲೀಸರು ಬಹುಸಾಹಸದಿಂದ ಅವರನ್ನು ಬಂಧಿಸುವಲ್ಲಿ ಈಗ ಯಶಸ್ವಿಯಾಗಿದ್ದಾರೆ.
ಯಾರು ಹಂತಕರು?
ಬಂಧಿತರನ್ನು ಶಿಯಾಬುದ್ದೀನ್, ರಿಯಾಜ್ ಅಂಕತಡ್ಕ ಮತ್ತು ರಶೀದ್ ಎಲಿಮಲೆ ಎಂದು ಗುರುತಿಸಲಾಗಿದೆ. ಎಲ್ಲರೂ ಸುಳ್ಯ ತಾಲೂಕಿನವರು. ಇವರಲ್ಲಿ ಸುಳ್ಯ ನಿವಾಸಿ ಶಿಯಾಬುದ್ದೀನ್ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೆ ಕೊಕೊ ಪೂರೈಕೆ ಮಾಡುತ್ತಿದ್ದ. ರಶೀದ್ ಎಲಿಮಲೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಇವರನ್ನು ಗುರುವಾರ ಮುಂಜಾನೆ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಿಗೆ ಎಸ್‌ಡಿಪಿಐ, ಪಿಎಫ್‌ಐ ನಂಟು
ದಕ್ಷಿಣ ಕನ್ನಡ ಎಸ್‌ಪಿ ಹೃಷಿಕೇಶ್ ನೇತೃತ್ವದಲ್ಲಿ, ಸಿಐಡಿ ಎಸ್ಪಿ ಅನುಚೇತ್ ಸೇರಿದಂತೆ ಜಿಲ್ಲೆಯ ಹಲವು ಅಧಿಕಾರಿಗಳು ಆರೋಪಿಗಳ ಪತ್ತೆಗೆ ಪ್ಲ್ಯಾನ್ ರೂಪಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಅವರು ಎಲ್ಲಿ ಅಡಗಿದ್ದರು, ಅವರಿಗೆ ಯಾರು ಸಹಕರಿಸಿದರು ಎಂಬ ಬಗ್ಗೆ ತನಿಖೆ ನಡೆಯಲಿದೆ ಎಂದು ಎಡಿಜಿಪಿ ತಿಳಿಸಿದರು.
ಬಂಧಿತ ಆರೋಪಿಗಳಿಗೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಜತೆಗೆ ನಂಟಿದೆ ಎಂದು ಸ್ಪಷ್ಟಪಡಿಸಿದ ಎಡಿಜಿಪಿ ಈ ಬಗ್ಗೆ ಸಮಗ್ರವಾದ ತನಿಖೆ ನಡೆಯಲಿದೆ ಎಂದರು.
ಪ್ರವೀಣ್ ಯಾಕೆ ಟಾರ್ಗೆಟ್?
ಬೆಳ್ಳಾರೆಯಲ್ಲಿ ನಡೆದ ಈ ಹತ್ಯೆಗೆ ನಿಜವಾದ ಕಾರಣ ಏನು? ಪ್ರವೀಣ್ ಅವರನ್ನೇ ಯಾಕೆ ಟಾರ್ಗೆಟ್ ಮಾಡಿದರು, ಇದಕ್ಕೂ ಮಸೂದ್ ಕೊಲೆಗೂ ಸಂಬಂಧವಿದೆಯೇ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಒಂದು ಹಂತದ ತನಿಖೆ ನಡೆಸಿದ ಬಳಿಕ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಲಾಗುತ್ತದೆ. ಎನ್‌ಐಎ ಎಲ್ಲ ತಂತ್ರಗಳನ್ನು ಬಯಲುಗೊಳಿಸಲಿದೆ ಎಂದು ಅಲೋಕ್ ಕುಮಾರ್ ಅವರು ತಿಳಿಸಿದರು.
ಎಲ್ಲಿದ್ದರು ಈ ಹಂತಕರು?
ಆವತ್ತು ಹತ್ಯೆ ಮಾಡಿದ ತಕ್ಷಣವೇ ಕೊಲೆಗಾರರು ಕಾಸರಗೋಡಿಗೆ ಹೋಗಿ ತಲೆಮರೆಸಿಕೊಂಡಿದ್ದರು. ಅಲ್ಲಿಂದ ಬೇರೆ ಕಡೆಗೆ ಶಿಫ್ಟ್ ಆಗುತ್ತಾ ಸಾಗಿದರು. ಎಲ್ಲೆಲ್ಲ ಶಿಫ್ಟ್ ಆದರು ಎನ್ನುವ ಬಗ್ಗೆ ಮುಂದೆ ಮಾಹಿತಿ ನೀಡಲಾಗುವುದು ಎಂದರು ಅಲೋಕ್ ಕುಮಾರ್. ಹಂತಕರಿಗೆ ಆಶ್ರಯ ನೀಡಿದ ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತದೆ ಎಂದು ವಿವರಿಸಿದರು.
ಆರು ವಾಹನಗಳೂ ಸದ್ಯವೇ ವಶಕ್ಕೆ
ಹಂತಕರು ಕಪ್ಪು ಸ್ಪ್ಲೆಂಡರ್ ಸಹಿತ ಆರು ವಾಹನಗಳನ್ನು ಕೃತ್ಯದಲ್ಲಿ ಬಳಸಿದ್ದಾರೆ. ಕೃತ್ಯಕ್ಕೆ ಬಳಸಿದ ಆಯುಧವನ್ನು ಕೂಡಾ ವಶಪಡಿಸಿಕೊಳ್ಳಬೇಕಾಗಿದೆ. ವಿಚಾರಣೆ ಮುಗಿದ ಬಳಿಕ ಎಲ್ಲ ವಾಹನಗಳನ್ನು ಜಪ್ತಿ ಮಾಡುತ್ತೇವೆ ಎಂದು ಹೇಳಿದರು ಎಡಿಜಿಪಿ.
ಫಾಝಿಲ್ ಕೇಸಿನ ಬಗ್ಗೆಯೂ ಇನ್ನಷ್ಟು ತನಿಖೆ
ಈ ನಡುವೆ, ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಆರೋಪಿಗಳ ಬಂಧನವಾಗಿದೆ. ಅಲ್ಲೂ ಸಹಕಾರ ನೀಡಿದ ಹಲವರು ಇದ್ದಾರೆ. ಅವರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದರು ಎಡಿಜಿಪಿ.
ಇದರ ಹಿಂದಿನ ಸುದ್ದಿ | ಪ್ರವೀಣ್ ನೆಟ್ಟಾರು ಹತ್ಯೆ: ಮೂವರು ಪ್ರಧಾನ ಆರೋಪಿಗಳ ಸೆರೆ? ಯಾರಿವರು ಕ್ರಿಮಿನಲ್ಸ್?