Site icon Vistara News

ಕೇರಳ ರಿಜಿಸ್ಟ್ರೇಷನ್‌ ಬೈಕ್‌ನಲ್ಲಿ ಬಂದಿದ್ದ 3 ದುಷ್ಕರ್ಮಿಗಳಿಂದ ಪ್ರವೀಣ್‌ ನೆಟ್ಟಾರು ಹತ್ಯೆ

yuva morcha leader

ಸುಳ್ಯ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಯುವ ಮೋರ್ಚಾ ಮುಖಂಡನ ಭೀಕರವಾಗಿ ಹತ್ಯೆ ನಡೆದಿದೆ. ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಚಿಕನ್ ಸೆಂಟರ್ ನಡೆಸುತ್ತಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (೨೯) ಅವರನ್ನು ಅವರ ಅಂಗಡಿಯಲ್ಲಿಯೇ ಹತ್ಯೆ ಮಾಡಲಾಗಿದೆ.

ಬೈಕ್‌ನಲ್ಲಿ ಬಂದಿದ್ದ ಮೂವರು ಪ್ರವೀಣ್‌ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಬೈಕ್‌ ಕೇರಳ ರಿಜಿಸ್ಟ್ರೇಷನ್‌ ಹೊಂದಿತ್ತು ಎಂಬುದು ಗೊತ್ತಾಗಿದೆ. ಹೀಗಾಗಿ ಕೇರಳ ಮೂಲದ ದುಷ್ಕರ್ಮಿಗಳು ಕೊಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಬೈಕ್‌ ಬಗ್ಗೆ ಮತ್ತಷ್ಟು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್‌ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಪುತ್ತೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಇಂದು ಬೆಳಗ್ಗೆ ೯ ಗಂಟೆಗೆ ಪ್ರವೀಣ್‌ ನೆಟ್ಟಾರು ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಆಸ್ಪತ್ರೆ ಬಳಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಹುಟ್ಟೂರು ನೆಟ್ಟಾರಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಬಂದ್‌ಗೆ ಕರೆ: ಪ್ರವೀಣ್‌ ಹತ್ಯೆಯನ್ನು ಖಂಡಿಸಿ ಸ್ಥಳೀಯ ಹಿಂದೂ ಪರ ಸಂಘಟನೆಗಳು ಇಂದು ಪುತ್ತೂರು, ಸುಳ್ಯ, ಕಡಬ ತಾಲ್ಲೂಕು ಬಂದ್‌ಗೆ ಕರೆ ನೀಡಿವೆ. ಈ ನಡುವೆ ದುಷ್ಕರ್ಮಿಗಳ ಪತ್ತೆಗೆ ಬೆಳ್ಳಾರೆ, ಪುತ್ತೂರು, ಕೇರಳದ ಗಡಿ ಭಾಗದಲ್ಲಿ ಮಂಗಳೂರು ಪೊಲೀಸರು ನಾಕಾಬಂದಿ ಮಾಡಿದ್ದಾರೆ.

ಪ್ರತೀಕಾರಕ್ಕಾಗಿ ಕೊಲೆ?

ಕೆಲ ದಿನಗಳ ಹಿಂದೆಯಷ್ಟೇ ಕ್ಷುಲ್ಲಕ ಕಾರಣಕ್ಕೆ ಮಸೂದ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದ್ದು ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಎಂಟು ಜನ ಹಿಂದೂ ಸಂಘಟನೆಯ ಕಾರ್ಯಕರ್ತರು ಮಸೂದ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಪ್ರತಿಕಾರವಾಗಿ ಈ ಹತ್ಯೆ ನಡೆದಿರಬಹುದು ಎಂದು ಅನುಮಾನಿಸಲಾಗುತ್ತಿದೆ.

ಪ್ರವೀಣ್ ಕೋಳಿ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುವ ವೇಳೆಯಲ್ಲಿ ಒಂದೇ ಬೈಕಿನಲ್ಲಿ ಬಂದಿದ್ದ ಮೂವರು ಅವರ ಮೇಲೆ ಮಾರಾಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ತಪ್ಪಿಸಿಕೊಳ್ಳಲು ಪ್ರವೀಣ್‌ ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಗಂಭೀರ ಗಾಯಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದು ಮಸೂದ್ ಕೊಲೆಗೆ ನಡೆದ ಪ್ರತಿಕಾರವೋ ಅಥವಾ ಬೇರೆ ವ್ಯಯಕ್ತಿಕ ಕಾರಣಕ್ಕೆ ನಡೆದ ಕೃತ್ಯವೋ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಮಸೂದ್ ಎಂಬ ೧೮ ವರ್ಷದ ಯುವಕನ ಹತ್ಯೆ ನಡೆದಿತ್ತು. ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್‌ನ ಮೇಲೆ ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎಂಬುವರು ಹಲ್ಲೆ ನಡೆಸಿದ್ದರು. ಗಂಭೀರಗಾಯಗೊಂಡಿದ್ದ ಮಸೂದ್‌ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಜು.19ರಂದು ಸುಧೀರ್ ಎಂಬಾತ ಮಸೂದ್‌ನ ಕೈ ತಾಗಿದ ಕಾರಣಕ್ಕೆ ಹಲ್ಲೆ ನಡೆಸಿದ್ದ. ಆ ಬಳಿಕ ಸ್ಥಳೀಯ ಹನೀಫ್ ಎಂಬವನ ಮೂಲಕ ಮಸೂದ್ ನನ್ನು ರಾಜಿ ಮಾತುಕತೆ ಕರೆಸಲಾಗಿತ್ತು. ಮಸೂದ್ ಅವರು ಸೂಚಿಸಿದ ಸ್ಥಳಕ್ಕೆ ಬಂದಿದ್ದ ವೇಳೆ ಹಲ್ಲೆ ಬಾಟಲಿಯಿಂದ ತಲೆಗೆ ಹೊಡೆದಿದ್ದರು. ಈ ಹತ್ಯೆಗೂ ಈ ಪ್ರವೀಣ್‌ ಹತ್ಯೆಗೂ ಸಂಬಂಧವಿದೆಯೇ ಎಂಬ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

Exit mobile version