ಬೆಂಗಳೂರು: ದೇಶದ ಉನ್ನತ ಹುದ್ದೆಯಲ್ಲೊಂದಾಗಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕ (CBI Director) ಸ್ಥಾನಕ್ಕೆ ಆಯ್ಕೆಯಾಗಿರುವ ರಾಜ್ಯ ಡಿಜಿಪಿ ಪ್ರವೀಣ್ ಸೂದ್ (Praveen Sood) ಅವರು ಎರಡು ವರ್ಷಗಳ ಕಾಲ ಅಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಪ್ರವೀಣ್ ಸೂದ್ ಅವರು ಹಾಲಿ ರಾಜ್ಯದಲ್ಲಿ ಡಿಜಿಪಿಯಾಗಿದ್ದು, ಇನ್ನು ಒಂದು ವರ್ಷವಷ್ಟೇ ಅವರ ಅಧಿಕಾರದ ಅವಧಿ ಬಾಕಿ ಇತ್ತು. ಮೂಲತಃ ಹಿಮಾಚಲ ಪ್ರದೇಶದವರಾಗಿರುವ ಅವರು, 1985ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅಲ್ಲದೆ, ಕೇಂದ್ರದಲ್ಲಿಯೂ ಅವರು ಈ ಹಿಂದೆ ಕಾರ್ಯನಿರ್ವಹಣೆ ಮಾಡಿದ ಅನುಭವದ ಆಧಾರದ ಮೇಲೆಯೂ ಸಿಬಿಐ ನಿರ್ದೇಶಕರನ್ನಾಗಿ ಅವರನ್ನು ಆಯ್ಕೆ ಮಾಡಲು ಪರಿಗಣಿಸಲಾಗಿದೆ.
ಇದನ್ನೂ ಓದಿ: Karnataka Election Results: ಕೈ – ಕಮಲ ಅದಲು ಬದಲಾದ ಸ್ಥಿತಿ, ಯಾವ ವಲಯದಲ್ಲಿ ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ?
ಯಾರು ಈ ಪ್ರವೀಣ್ ಸೂದ್?
ಪ್ರವೀಣ್ ಸೂದ್ ಅವರು ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯವರಾಗಿದ್ದಾರೆ. ಇವರು ಬಿ.ಟೆಕ್ ಪದವೀಧರರಾಗಿದ್ದು, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 1985ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಮೈಸೂರಿನಲ್ಲಿ ವೃತ್ತಿ ಜೀವನ ಆರಂಭ
1989ರಲ್ಲಿ ಮೈಸೂರು ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಆಗಿ ಪ್ರವೀಣ್ ಸೂದ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಳಿಕ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿದ್ದಾರೆ.
ಮಾರಿಷಸ್‌ಗೆ ಸಲಹೆಗಾರಾಗಿದ್ದ ಸೂದ್
ಈ ನಡುವೆ ಮಾರಿಷಸ್ ದೇಶಕ್ಕೆ ಪೊಲೀಸ್ ಸಲಹೆಗಾರರಾಗಿಯೂ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಪುನಃ ಅವರು ತಮ್ಮ ಆರಂಭಿಕ ಕ್ಷೇತ್ರವಾದ ಮೈಸೂರಿನಲ್ಲಿ 2004-2007ರವರೆಗೆ ಸೇವೆ ಸಲ್ಲಿಸಿದ್ದಾರೆ. ಆಗ ಅವರು ಮೈಸೂರು ಪೊಲೀಸ್ ಆಯುಕ್ತರಾಗಿದ್ದರು.
2008ರಲ್ಲಿ ಬೆಂಗಳೂರು ನಗರದ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿದ್ದ ಪ್ರವೀಣ್ ಸೂದ್, 2013-14ರಲ್ಲಿ ಕರ್ನಾಟಕ ಹೌಸಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದರು. 2017ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಕೆಲಸ ಮಾಡಿದ್ದಾರೆ.
ಮುಖ್ಯಮಂತ್ರಿ, ರಾಷ್ಟ್ರಪತಿ ಪದಕ ವಿಜೇತ
ಇವರ ಕರ್ತವ್ಯ ನಿಷ್ಠೆಗೆ 1996ರಲ್ಲಿ ಮುಖ್ಯಮಂತ್ರಿಗಳ ಪದಕ ಸಿಕ್ಕಿದೆ. ಅಲ್ಲದೆ, 2011ರಲ್ಲಿ ರಾಷ್ಟ್ರಪತಿಗಳ ಪದಕವನ್ನೂ ಇವರು ಪಡೆದಿದ್ದಾರೆ.
ಮೇ 25ರ ನಂತರ ಅಧಿಕಾರ ಸ್ವೀಕಾರ?
ಮೇ 25ಕ್ಕೆ ಹಾಲಿ ಸಿಬಿಐ ನಿರ್ದೇಶಕ ಸುಬೋದ್ ಕುಮಾರ್ ಜೈಸ್ವಾಲ್ ಅವಧಿ ಮುಕ್ತಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಸಿಬಿಐ ನಿರ್ದೇಶಕರನ್ನಾಗಿ ಪ್ರವೀಣ್ ಸೂದ್ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಒಳಗೊಂಡ ಉನ್ನತ ಮಟ್ಟದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸದ್ಯ 2 ವರ್ಷದವರೆಗೆ ಅಧಿಕಾರದ ಅವಧಿ ಇದ್ದು, ಐದು ವರ್ಷಗಳವರೆಗೂ ಸೇವಾವಧಿ ವಿಸ್ತರಣೆ ಮಾಡುವ ಅವಕಾಶ ಇದೆ.
ಇದನ್ನೂ ಓದಿ: Praveen Sood: ಮುಂದಿನ ಸಿಬಿಐ ನಿರ್ದೇಶಕ ಡಿಜಿಪಿ ಪ್ರವೀಣ್ ಸೂದ್; ಕೇಂದ್ರದ ಅಧಿಕೃತ ಆದೇಶ
ಕರ್ನಾಟಕ, ದೆಹಲಿ ಸೇರಿದಂತೆ ಮೂರು ರಾಜ್ಯಗಳ ಅಧಿಕಾರಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಹೆಸರು ಅಂತಿಮವಾಗಿದೆ. ಸುಧೀರ್ ಸಕ್ಸೇನಾ (ಡಿಜಿಪಿ ಮಧ್ಯಪ್ರದೇಶ) ಮತ್ತು ತಾಜ್ ಹಸನ್ (ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಮುಖ್ಯಸ್ಥರು, ನವದೆಹಲಿ) ಅವರ ಹೆಸರುಗಳು ಪಟ್ಟಿಯಲ್ಲಿದ್ದವು.