ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ವತಿಯಿಂದ ನಡೆಯುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಕೊನೆಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ಸಿಕ್ಕಿದೆ.
ಪೌರ ಸನ್ಮಾನ ಕಾರ್ಯಕ್ರಮದ ಸಂಬಂಧ ರಾಜ್ಯ ಸರ್ಕಾರ ಸಿದ್ಧಪಡಿಸಿದ ಆಹ್ವಾನ ಪತ್ರಿಕೆಯಲ್ಲಿ ವೇದಿಕೆ ಹತ್ತಲು ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಅವಕಾಶ ನೀಡಲಾಗಿರಲಿಲ್ಲ. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಅಶ್ವತ್ಥ್ ನಾರಾಯಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಬೈರತಿ ಬಸವರಾಜ್, ಹಾಲಪ್ಪ ಆಚಾರ್, ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಮಾತ್ರ ವೇದಿಕೆ ಮೇಲೆ ಇರಲಿದ್ದಾರೆ ಎಂದು ಇಳಿಸಲಾಗಿದೆ. ಆದರೆ, ರಾಷ್ಟ್ರಪತಿ ಭವನದಿಂದ ಆಗಮಿಸಿರುವ ಆಹ್ವಾನ ಪತ್ರಿಕೆಯಲ್ಲಿ ಶೆಟ್ಟರ್ ಅವರ ಹೆಸರನ್ನು ನಮೂದು ಮಾಡಲಾಗಿತ್ತು.
ಸರಕಾರ ಅವರನ್ನು ಅವಗಣಿಸಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಅವರದ್ದೇ ರಾಜಕೀಯ ನೆಲೆಯಾದ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ ರಾಷ್ಟ್ರಪತಿಯವರ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್‌ಗೆ ಅವಕಾಶ ಕೊಡದೆ ಇರುವುದು ಯಾಕೆ ಎಂಬ ಪ್ರಶ್ನೆ ಅವರ ಅನುಯಾಯಿಗಳನ್ನು ಕಾಡಿತ್ತು. ಇದನ್ನು ಹಲವು ಪ್ರಶ್ನೆ ಮಾಡಿದ್ದರು. ಜನರ ಪ್ರತಿಭಟನೆ ಹಿನ್ನೆಲೆಯಲ್ಲಿ ಈಗ ಕೊನೆಗೆ ಕಾರ್ಯಕ್ರಮ ಆರಂಭವಾಗುವ ಕೆಲವೇ ಗಂಟೆಗೆ ಮೊದಲು ಶೆಟ್ಟರ್ ಅವರಿಗೆ ವೇದಿಕೆ ಏರುವ ಅವಕಾಶ ನೀಡಲಾಗಿದೆ.
ಧಾರವಾಡ ಐಐಐಟಿ ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲೂ ರಾಷ್ಟ್ರಪತಿ ದ್ರೌಪದಿ ಮುರ್ಮು ಇರಲಿದ್ದಾರೆ. ಆದರೆ ಈ ಕಾರ್ಯಕ್ರಮದ ವೇದಿಕೆಯಲ್ಲೂ ಜಗದೀಶ್ ಶೆಟ್ಟರ್ ಇರುವುದಿಲ್ಲ. ಈ ಕಾರ್ಯಕ್ರಮ ಸಿದ್ಧತೆಯಲ್ಲೆಲ್ಲ ಜಗದೀಶ್ ಶೆಟ್ಟರ್ ಸಕ್ರಿಯರಾಗಿದ್ದರು.
ದೂರ ಉಳಿದ ಕಾಂಗ್ರೆಸ್ ಕಾರ್ಪೊರೇಟರ್‌ಗಳು
ಈ ನಡುವೆ, ಪೌರ ಸನ್ಮಾನ ಕಾರ್ಯಕ್ರಮ ತಯಾರಿಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ, ಆದ್ಯತೆ ನೀಡಲಾಗಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಪೊರೇಟರ್‌ಗಳು ಪೌರ ಸನ್ಮಾನ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಪಾಲಿಕೆಯಲ್ಲಿ ಒಟ್ಟು ೮೪ ಸದಸ್ಯರಿದ್ದು, ಅವರ ಪೈಕಿ ೩೪ ಕಾಂಗ್ರೆಸ್ ಕಾರ್ಪೊರೇಟರ್‌ಗಳು ಸಮಾರಂಭದಿಂದ ದೂರ ಉಳಿದಿದ್ದಾರೆ.
ಹಿಂದಿನ ಸುದ್ದಿ | ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿ ಕಾರ್ಯಕ್ರಮ: ರಾಜ್ಯದ ಆಹ್ವಾನಪತ್ರಿಕೆಯಲ್ಲಿ ಜಗದೀಶ್ ಶೆಟ್ಟರ್‌ಗೆ ವೇದಿಕೆ ಮೇಲಿಲ್ಲ ಅವಕಾಶ !