ಹಾಸನ: ಹಾಸನ ಅಭ್ಯರ್ಥಿ ಯಾರೆಂದು ಬಿಜೆಪಿ ಅಥವಾ ಜೆಡಿಎಸ್‌ನಲ್ಲಿ ಇನ್ನೂ ತೀರ್ಮಾನವಾಗಿಲ್ಲ. ನಾನೇ ಬಿಜೆಪಿ ಅಭ್ಯರ್ಥಿ ಎಂದು ಇನ್ನೂ ಖಾತ್ರಿ ಆಗಿಲ್ಲ. ನನ್ನ ಟಿಕೆಟ್ ಖಾತ್ರಿ ಆದ ಬಳಿಕ ಭವಾನಿ ಅಕ್ಕ ಇರುತ್ತಾರೋ, ಸ್ವರೂಪಣ್ಣ ಇರುತ್ತಾರೋ ಹೇಳುತ್ತೇನೆ. ಅಭ್ಯರ್ಥಿ ಯಾರು ಎಂಬುವುದು ಗೊತ್ತಾದ ಮೇಲೆ ಸವಾಲು, ಪ್ರತಿ ಸವಾಲು ಇರುತ್ತದೆ ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ನಂಗೇ ಬ್ಯಾಟಿಂಗ್ ಸಿಗುತ್ತದೆ ಅನ್ನೋದು ಕನ್ಫರ್ಮ್ ಆಗಿಲ್ಲ. ಅದು ಆದ ಮೇಲೆ ತಾನು ನಾನು ಬೌಲರ್ ಬಗ್ಗೆ ಯೋಚನೆ ಮಾಡೋದು: ಹೀಗೆಂದು ಕ್ರಿಕೆಟ್ ಭಾಷೆಯಲ್ಲೂ ಉತ್ತರ ಕೊಟ್ಟಿದ್ದಾರೆ ಪ್ರೀತಂ ಗೌಡ.
ಹಾಸನದಿಂದ ತಾವೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿ, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ಬಗ್ಗೆ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ಕೇಳಬೇಕು, ನಮ್ಮ ಪಕ್ಷದಿಂದ ನಳೀನ್ ಕುಮಾರ್ ಕಟೀಲ್ ಅವರು ದೆಹಲಿಗೆ ಹೋಗಿ ಚರ್ಚಿಸಿ ಘೋಷಿಸುತ್ತಾರೆ. ನನಗೂ ಮತ್ತೊಮ್ಮೆ ಟಿಕೆಟ್ ನೀಡುವಂತೆ ಕಟೀಲ್ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ತಾವೇ ಅಭ್ಯರ್ಥಿ ಎಂದು ಆಕಾಂಕ್ಷಿಗಳೆಲ್ಲಾ ಹೇಳಿಕೊಳ್ಳುತ್ತಾರೆ. ನಾನೂ 2018ರಲ್ಲಿ ನಾನೇ ಅಭ್ಯರ್ಥಿ ಎಂದಿದ್ದೆ. ಆಗ ಪಕ್ಷ ಟಿಕೆಟ್ ಕೊಟ್ಟಿತ್ತು. ಈ ಬಾರಿಯು ಟಿಕೆಟ್ ಕೇಳಿದ್ದೇನೆ. ಆದರೆ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದ ಅವರು, ಪ್ರೀತಂಗೌಡ ಬಿಜೆಪಿ ಅಭ್ಯರ್ಥಿ ಆದ ಕೂಡಲೆ ಅವಿರೋಧವಾಗಿ ಆಯ್ಕೆ ಆಗಲ್ಲ. ಜೆಡಿಎಸ್, ಕಾಂಗ್ರೆಸ್‌ನಿಂದ ಅಭ್ಯರ್ಥಿ ಇರುತ್ತಾರೆ. ಚುನಾವಣೆ ಅಂದ ಮೇಲೆ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವ ಹಂತ ಆದ ಮೇಲೆ ಅಭ್ಯರ್ಥಿ ಅಂತಿಮವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Bhavani Revanna: ಹಾಸನ ಟಿಕೆಟ್ ಘೋಷಿಸಿಕೊಂಡ ಭವಾನಿ ರೇವಣ್ಣ; ಸೈಲೆಂಟ್ ಆಗಿ ತಿರುಗೇಟು ಕೊಟ್ಟ ಕುಮಾರಸ್ವಾಮಿ
ಬಿಜೆಪಿ ಅಧಿಕೃತವಾಗಿ ನಾನು ಅಭ್ಯರ್ಥಿ ಎಂದು ಹೇಳಿದ ಮೇಲೆ ಯಾರು ರಾಜಕೀಯ ವಿರೋಧಿ ಎಂದು ಹೇಳಬಹುದು. ಪ್ರೀತಂಗೌಡ ಯಾವಾಗಲು ಸಾಫ್ಟ್, ಆದರೆ ನಿಷ್ಠುರವಾಗಿ ಮಾತನಾಡುತ್ತಾರೆ. ಆ ನಿಷ್ಠುರ ಯಾರಿಗೆ ಯಾವಾಗ ಹೇಗೆ ತಲುಪಬೇಕು ಅದು ತಲುಪಿರುತ್ತದೆ. ಈಗ ಚುನಾವಣೆ ಮೂಡ್ ಇದೆ, ಅದಕ್ಕೆ ಹೊಂದಿಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ರೇವಣ್ಣ ಸ್ಪರ್ಧೆ ಮಾಡಿದರೆ 50 ಸಾವಿರ ಲೀಡ್‌ನಲ್ಲಿ ಗೆಲ್ಲುತ್ತೇನೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಪ್ರೀತಂಗೌಡ, ಪದೇಪದೆ ಅದನ್ನು ಹೇಳಲ್ಲ. ಅಭ್ಯರ್ಥಿ ಯಾರೆಂದು ಅಂತಿಮ ಆಗಿ ನಾಮಪತ್ರ ಸಲ್ಲಿಕೆಯಾಗಲಿ. ನಮಗೆ ಟಿಕೆಟ್ ಸಿಕ್ಕಿ ಬಿ ಫಾರ್ಮ್ ಕೊಡಬೇಕು ಅಲ್ಲವೇ? ಕೊಟ್ಟಾದ ಮೇಲೆ ಯಾವ ರೀತಿ ಚುನಾವಣೆ ಮಾಡುವುದು ಎಂದು ತಿಳಿಸುವುದಾಗಿ ಹೇಳಿದ್ದಾರೆ.
ಎಲ್ಲಾ ಹಿರಿಯ ಮುಖಂಡರ ಜತೆ ಸೇರಿ ಜಿಲ್ಲೆಯ ಏಳು ಕ್ಷೇತ್ರಗಳ ನಾಲ್ಕು ಕ್ಷೇತ್ರ ಗೆಲ್ಲಬೇಕು ಎಂಬುವುದು ವರಿಷ್ಠರ ಅಪೇಕ್ಷೆ. ನಿಮ್ಮ ಕೈಲಾದ ಶ್ರಮ ಹಾಕಬೇಕು ಎಂದು ಸೂಚನೆ ಕೊಟ್ಟಿದ್ದಾರೆ, ಅದರಂತೆ ಕೆಲಸ ಮಾಡುತ್ತೇನೆ. ನಮ್ಮದೇ ಆದ ತಂತ್ರಗಾರಿಕೆ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ನಾಲ್ಕು ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.