ಬೆಂಗಳೂರು: ಅಖಿಲ ಭಾರತ ಹರಿಜನ ಸೇವಾ ಸಂಘದ ಅಧ್ಯಕ್ಷರಾಗಿ ಮಾಜಿ ಮೇಯರ್ ಮತ್ತು ಸಂಸತ್ ಸದಸ್ಯರಾದ ಪ್ರೇಮಾ ಕಾರಿಯಪ್ಪ ಆಯ್ಕೆ ಆಗಿದ್ದಾರೆ. ಏಳು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಪ್ರೇಮಾ ಸಹಿತ ಸಂಘದ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿರುವ ಪ್ರೊ. ಬಿ.ಸಿ. ಮೈಲಾರಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಂ ಅವರನ್ನು ಉಪಾಧ್ಯಕ್ಷರಾಗಿದ್ದಾರೆ. ಇವರೆಲ್ಲರೂ ಸರ್ಕಾರದ ಸಹಕಾರ ಇಲಾಖೆಯ ನಿಯಮಾನುಸಾರ ಅಧಿಕಾರ ಸ್ವೀಕರಿಸಿದ್ದಾರೆ.
ಏನಿದು ಹರಿಜನಾ ಸೇವಾ ಸಂಘ?
ಇದೊಂದು ರಾಷ್ಟ್ರೀಯ ಮಟ್ಟದ ಹರಿಜನ ಸೇವಾ ಸಂಘವಾಗಿದೆ. ಇದನ್ನು ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ 4 ಬಾರಿ ಅಧ್ಯಕ್ಷರಾಗಿದ್ದ ಪಂಡಿತ್ ಮದನ ಮೋಹನ ಮಾಳವಾಯಿ ಅಧ್ಯಕ್ಷತೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ 1932ರಲ್ಲಿ ಸ್ಥಾಪನೆಯಾಯಿತು.
ಭಾರತದ ಹಿಂದು ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು ಮತ್ತು ನಿಜವಾದ ಪರಿಶಿಷ್ಟ ಜಾತಿಯಲ್ಲಿನ ಅಸ್ಪೃಶ್ಯ ಜನಾಂಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ, ವಸತಿ ಅಭಿವೃದ್ಧಿಯೆಡೆಗೆ ಕೊಂಡೊಯ್ಯುವುದು ಸೇರಿದಂತೆ ಈ ಸಮುದಾಯದ ಸಂಪೂರ್ಣ ಶ್ರೇಯೋಭಿವೃದ್ಧಿ ಮತ್ತು ಸಮಾಜದಲ್ಲಿ ಮೆಲಸ್ತರಕ್ಕೆ ತರುವುದು ಇದರ ಮೂಲ ಉದ್ದೇಶವಾಗಿದೆ.
ಈಗ ಸಂಘಕ್ಕೆ 90 ವರ್ಷವಾಗಿದೆ. ಈ ಸಂಘಟನೆಯನ್ನು ಮಹಾತ್ಮ ಗಾಂಧಿ, ಪಂಡಿತ್ ಮದನ್ ಮೋಹನ ಮಾಳವಾಯಿ, ಜವಹಲಾಲ್ ನೆಹರು, ಇಂದಿರಾ ಗಾಂಧಿ, ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ ಮುಂತಾದ ಅನೇಕ ಸಮಾಜ ಸುಧಾರಕರು ಮುನ್ನಡೆಸಿದ ಚರಿತ್ರೆ ಇದ್ದು, ಸಾಕಷ್ಟು ಪೂರಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಹರಿಜನ ಸೇವಾ ಸಂಘದ ಚುನಾವಣೆಯು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆ ನಿರ್ದೇಶನದಂತೆ ನಡೆದಿದ್ದು, ಕರ್ನಾಟಕ ರಾಜ್ಯ ಘಟಕದ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆರಿಸಲು ಸರ್ಕಾರವು ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಶೇಷಾದ್ರಿಪುರಂನ ಸಂಘದ ಕಚೇರಿಯ ಗಾಂಧಿ ಭವನದಲ್ಲಿ ಚುನಾವಣೆ ನಡೆಯಿತು. 7 ವರ್ಷಗಳ ನಂತರ ನೂತನ ಪದಾಧಿಕಾರಿಗಳ ನೇಮಕಗೊಂಡಂತಾಗಿದೆ.
ಇದನ್ನೂ ಓದಿ | iD Fresh Food | ಬೆಂಗಳೂರು ಮೂಲದ ಐಡಿ ಫ್ರೆಶ್ ಫುಡ್‌ನಿಂದ ಹರಿಯಾಣದಲ್ಲಿ ಉತ್ಪಾದನಾ ಘಟಕ