Site icon Vistara News

ಜನ ಸ್ಪಂದನ | ವಿಘ್ನ ನಿವಾರಣೆಗೆ ಗಣಪತಿ ಹೋಮ: ನಡ್ಡಾ ಬದಲಿಗೆ ಬರಲಿದ್ದಾರೆ ಪ್ರಭಾವಿ ಕೇಂದ್ರ ಸಚಿವೆ

Jana Spandana homa

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆಯುವ ಜನ ಸ್ಪಂದನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದ್ದು, ಈ ಬಾರಿಯಾದರೂ ಯಾವುದೇ ವಿಘ್ನ ಇಲ್ಲದಂತೆ ಕಾರ್ಯಕ್ರಮ ನಡೆಯಲಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ಗಣಪತಿ ಹೋಮ ನೆರವೇರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದಲ್ಲಿ ಬೆಳಗ್ಗೆ 11 ಕ್ಕೆ ಕಾರ್ಯಕ್ರಮ ನಡೆಯಲಿದೆ. ಜುಲೈ 28ಕ್ಕೆ ಎಂದು ಮೊದಲು ನಿಗದಿಯಾಗಿದ್ದ ಕಾರ್ಯಕ್ರಮ ಅನೇಕ ವಿಘ್ನಗಳನ್ನು ಎದುರಿಸಿ ಇದೀಗ ಸೆಪ್ಟೆಂಬರ್‌ 10ಕ್ಕೆ ನಿಗದಿಯಾಗಿದೆ.

ಕಾರ್ಯಕ್ರಮದ ಉಸ್ತುವಾರಿಯನ್ನು ಸುಧಾಕರ್‌ ವಹಿಸಿಕೊಂಡಿದ್ದಾರೆ. ಶನಿವಾರದ ಕಾರ್ಯಕ್ರಮಕ್ಕೆ ಯಾವುದೇ ವಿಘ್ನವಿಲ್ಲದೆ ಸುಲಲಿತವಾಗಿ ನಡೆಯಲಿ ಎಂದು ಕಾರ್ಯಕ್ರಮದ ಸ್ಥಳದಲ್ಲೇ ಗಣಪತಿ ಹೋಮವನ್ನು ನೆರವೇರಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ವಿಶೇಷ | 7 ವಿಘ್ನ ಕಂಡ ಜನೋತ್ಸವ: 8ನೇ ವಿಘ್ನಕ್ಕೂ ಮೊದಲು ಹೆಸರನ್ನೇ ಬದಲಿಸಿದ BJP

ಪಿತೃಪಕ್ಷ ಕಾರಣ?

ಸೆಪ್ಟೆಂಬರ್‌ 8ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೂ ಮೊದಲು ಸೆ.6ರಂದು ಹಿರಿಯ ಸಚಿವ ಉಮೇಶ್‌ ಕತ್ತಿ ನಿಧನರಾದರು. ಒಂದೇ ದಿನ ಶೋಕಾಚರಣೆ ಮಾಡಿ ಕಾರ್ಯಕ್ರಮ ನಡೆಸುವ ಇರಾದೆಯನ್ನು ಸರ್ಕಾರ ಹೊಂದಿತ್ತಾದರೂ ನಂತರ ಮನಸ್ಸು ಬದಲಾಯಿಸಿ ಸೆ.11ಕ್ಕೆ ಮುಂದೂಡಿತು. ಆದರೆ ಸೆ. 11ರ ಭಾನುವಾರದಿಂದ ಪಿತೃಪಕ್ಷ ಆರಂಭವಾಗಲಿದೆ.

ದೊಡ್ಡಬಳ್ಳಾಪುರದ ಕಾರ್ಯಕ್ರಮದ ಮೂಲಕ ವಿಧಾನಸಭೆ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿಸುವ ಉದ್ದೇಶ ಹೊಂದಿದೆ. ಇಂತಹ ಅಭಿಯಾನಕ್ಕೆ ಪಿತೃಪಕ್ಷದಲ್ಲಿ ಚಾಲನೆ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಸೆ.10ಕ್ಕೆ ಮರುಹೊಂದಾಣಿಕೆ ಮಾಡಲಾಗಿದೆ ಎನ್ನಲಾಗಿದೆ.

ಸ್ಮೃತಿ ಇರಾನಿ ಆಗಮನ

ಮೊದಲಿಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸುವವರಿದ್ದರು. ನಂತರ ಆಗಸ್ಟ್‌ 28ರ ಕಾರ್ಯಕ್ರಮಕ್ಕೂ ಅವರು ಆಗಮಿಸುವುದಾಗಿ ಹೇಳಿದ್ದರು. ಸೆ.11ರಂದು ನಡ್ಡಾ ಅವರು ಆಗಮಿಸುವುದಾಗಿ ಹೇಳಿದ್ದರಿಂದಲೇ ಖಚಿತಪಡಿಸಲಾಗಿತ್ತು. ಆದರೆ ಸೆ. 10ಕ್ಕೆ ಮರುನಿಗದಿಯಾಗಿದ್ದರಿಂಧ ಸಮಸ್ಯೆ ಆಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ನಡ್ಡಾ ಅವರು ಸದ್ಯ ಛತ್ತೀಸ್‌ಗಢ ಪ್ರವಾಸದಲ್ಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿದ್ದೇವೆ. ಶುಕ್ರವಾರ ರಾತ್ರಿ ವೇಳೆಗೆ ಖಚಿತವಾಗುತ್ತದೆ. ಆದರೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಮಿಸುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಬಿಜೆಪಿ ಜನೋತ್ಸವ ದಿನಾಂಕ ಮತ್ತೆ ಬದಲು, ಭಾನುವಾರ ಅಲ್ಲ ಶನಿವಾರವೇ ಜನಸ್ಪಂದನ ಹೆಸರಿನಲ್ಲಿ ಕಾರ್ಯಕ್ರಮ

Exit mobile version