ಯಲ್ಲಾಪುರ: ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಶಿಬಿರವನ್ನು ಭಾನುವಾರ ಆಯೋಜಿಸಲಾಯಿತು. ಪ್ರೇರಣಾ ಶಿಬಿರದ ಉಪನ್ಯಾಸಕರಾಗಿ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ, ಭರತನಹಳ್ಳಿ ಪ್ರೌಢಶಾಲೆಯ ಶಿಕ್ಷಕ ಪ್ರಕಾಶ್ ಭಟ್ ಅವರು ಆಂಗ್ಲಭಾಷೆಯ ವ್ಯಾಕರಣ ಹಾಗೂ ಪರೀಕ್ಷೆ ಎದುರಿಸುವ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ತಾಲೂಕಿನ ವಿವಿಧ ಶಾಲೆಗಳಿಂದ ಸುಮಾರು 70 ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.
ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಿ ಹೆಚ್ಚಿನ ಅಂಕ ಗಳಿಕೆಗೆ ಬೇಕಾದ ಕೌಶಲಗಳನ್ನು ರೂಪಿಸುವುದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಸೇರಿದಂತೆ ಅನೇಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರೇರಣಾ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಶಾಲೆಯ ಮುಖ್ಯೋಪಾಧ್ಯಾಯರಾದ ಮುಕ್ತಾ ಶಂಕರ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ತಾಲೂಕಿನ ಸಂಪನ್ಮೂಲ ವ್ಯಕ್ತಿಗಳ ಸಹಕಾರದಿಂದ ಶಿಬಿರಗಳು ನಡೆಯುತ್ತಿವೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳಂತೆ ಈ ಪ್ರೇರಣಾ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಜುಲೈ 3ರಿಂದ ಚಾಲನೆ ಪಡೆದಿದೆ. ವಾರಕ್ಕೊಂದರಂತೆ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಿಬಿರ ನಡೆಯುತ್ತಿದೆ. ಈಗಾಗಲೇ ಒಟ್ಟು 6 ಪ್ರೇರಣಾ ಶಿಬಿರಗಳು ಆಯೋಜಿಸಲ್ಪಟ್ಟಿವೆ.
ಇದನ್ನೂ ಓದಿ | ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಡೆದ ಯಲ್ಲಾಪುರ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್