Site icon Vistara News

Sudha Murty: ರಾಜ್ಯಸಭೆಗೆ ಕನ್ನಡತಿ ಸುಧಾ ಮೂರ್ತಿ ನಾಮನಿರ್ದೇಶನ; ನಾರಿ ಶಕ್ತಿ ಎಂದ ಮೋದಿ

Sudha Murthy

President Droupadi Murmu Nominates Sudha Murty To Rajya Sabha; Confirms PM Narendra Modi

ನವದೆಹಲಿ: ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರ ಪತ್ನಿ, ಇನ್ಫೋಸಿಸ್‌ ಪ್ರತಿಷ್ಠಾನದ ಮೂಲಕ ಹಲವು ರೀತಿಯ ಸಮಾಜಸೇವೆಗಳಲ್ಲಿ ಗುರುತಿಸಿಕೊಂಡಿರುವ ಸುಧಾ ಮೂರ್ತಿ‌ (Sudha Murty) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ರಾಜ್ಯಸಭೆಗೆ (Rajya Sabha) ನಾಮನಿರ್ದೇಶನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರೀಮತಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂಬ ಮಾಹಿತಿಯನ್ನು ನಿಮ್ಮ ಜತೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಸಮಾಜಸೇವೆ, ಪರೋಪಕಾರ, ಶಿಕ್ಷಣಕ್ಕೆ ಕೊಡುಗೆ ಸೇರಿ ಹಲವು ದಿಸೆಯಲ್ಲಿ ಸುಧಾ ಮೂರ್ತಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ಅವರ ಉಪಸ್ಥಿತಿಯು ನಾರಿಶಕ್ತಿಯ ದ್ಯೋತಕವಾಗಿರಲಿದೆ. ಹಾಗೆಯೇ, ಸಂಸತ್‌ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳವಾಗುತ್ತಿರುವುದು ದೇಶದ ಅಭಿವೃದ್ಧಿಯ ಸಂಕೇತವಾಗಿದೆ. ಸುಧಾ ಮೂರ್ತಿ ಅವರಿಗೆ ಶುಭವಾಗಲಿ” ಎಂದು ಹೇಳಿದ್ದಾರೆ.

ರಾಜ್ಯಸಭೆಗೆ ನಾಮನಿರ್ದೇಶನವಾದ ಬಳಿಕ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಸುಧಾ ಮೂರ್ತಿ, “ನನ್ನನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತಸ ತಂದಿದೆ. ಇದರಿಂದ ನನ್ನ ಜವಾಬ್ದಾರಿಯು ಇನ್ನಷ್ಟು ಹೆಚ್ಚಾಗಿದೆ. ಯಾವುದೇ ನಿರೀಕ್ಷೆ ಇಲ್ಲದ ನನಗೆ ಹೊಸ ಜವಾಬ್ದಾರಿ ಸಿಕ್ಕಿದೆ. ನನ್ನನ್ನು ನಾಮನಿರ್ದೇಶನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಾಗೂ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು.” ಎಂದು ತಿಳಿಸಿದ್ದಾರೆ. ವಿಶ್ವ ಮಹಿಳಾ ದಿನದಂದೇ ರಾಷ್ಟ್ರಪತಿ ಅವರು ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.

ರಾಜ್ಯಸಭೆಗೆ ಈಗಾಗಲೇ ನಾಮನಿರ್ದೇಶನಗೊಂಡವರು

Rajyasabha Nominated members

ಇದನ್ನೂ ಓದಿ: Narayana Murthy: ಇನ್ಫೋಸಿಸ್‌ ನಾರಾಯಣ ಮೂರ್ತಿ-ಸುಧಾ ಮೂರ್ತಿಗೆ ಮೂರನೇ ಮೊಮ್ಮಗು!

ರಾಜ್ಯಸಭೆಗೆ 12 ಜನರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ನಾಮನಿರ್ದೇಶನಗೊಂಡು ಆಯ್ಕೆಯಾಗಬೇಕಿದ್ದ ಒಂದು ಕೋಟಾ ಖಾಲಿ ಇತ್ತು. ಈಗ ಈ ಸ್ಥಾನಕ್ಕೆ ಸುಧಾ ಮೂರ್ತಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಸುಧಾ ಮೂರ್ತಿ ಅವರಿಗೆ ಕೇಂದ್ರ ಸರ್ಕಾರವು 2023ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಇವರಿಗೆ 2006ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ. ದೇವದಾಸಿಯರ ಹಕ್ಕುಗಳಿಗಾಗಿ ಶ್ರಮ, ಶಿಕ್ಷಣ, ಸಾಹಿತ್ಯ ಸೇರಿ ಸೇರಿ ಹಲವು ಸಮಾಜಮುಖಿ ಕೆಲಸಗಳಲ್ಲಿ ಸುಧಾ ಮೂರ್ತಿ ತೊಡಗಿಸಿಕೊಂಡಿದ್ದಾರೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version