ಮಂಗಳೂರು: ತಾತ್ಕಾಲಿಕವೆಂದು ಹೇಳಿಕೊಂಡು ಆರಂಭಿಸಲಾದ ಸುರತ್ಕಲ್‌ನ ಎನ್‌ಐಟಿಕೆ ಬಳಿ ಇರುವ ಟೋಲ್ ಗೇಟ್‌ನಲ್ಲಿ 5 ವರ್ಷಗಳಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಟೋಲ್ ರದ್ದುಪಡಿಸಲಾಗುವುದು ಎಂಬ ಭರವಸೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ದೊರೆತಿತ್ತು. ಇದೀಗ ಟೋಲ್ ಗುತ್ತಿಗೆ ಅವಧಿ ಅಂತ್ಯಗೊಂಡಿದ್ದು ಟೋಲ್ ಸಂಗ್ರಹ ರದ್ದುಗೊಳಿಸುವ ಬದಲಿಗೆ ಹೆದ್ದಾರಿ ಪ್ರಧಿಕಾರವು ಮರು ಟೆಂಡರ್‌ಗೆ ಮುಂದಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ ಮತ್ತು ಮಂಗಳೂರು ನಡುವೆ ಸಂಚಾರಿಸುವ ಎಲ್ಲಾ ವಾಹನಗಳು ಹೆಜಮಾಡಿ ಹಾಗೂ ಸುರತ್ಕಲ್ ಎರಡೂ ಕಡೆಗಳಲ್ಲೂ ಸುಂಕ ಪಾವತಿಸಬೇಕಾಗಿತ್ತು. ಅಂದರೆ ಕೇವಲ ೧೩ ಕಿ.ಮೀ. ಅಂತರದಲ್ಲಿ ಎರಡು ಟೋಲ್‌ಗಳು ಕಾರ್ಯಾಚರಿಸುವಂತಾಗಿದೆ. ಇದರ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಗೇಟ್ ಬಂದ್ ಮಾಡುವ ಭರವಸೆ ನೀಡಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಧ್ವನಿಗೂಡಿಸಿದ್ದರು.
ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಿನಕ್ಕೆ 6 ಲಕ್ಷದ ಸಂಗ್ರಹದ ಗುರಿಯೊಂದಿಗೆ ಮರು ಟೆಂಡರ್ ಕರೆದಿರುವುದು ಜನರನ್ನು ಕೆರಳಿಸಿದೆ. ಈ ಟೆಂಡರ್ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಹೋರಾಟ ಆರಂಭಗೊಂಡಿದೆ. ಟೋಲ್ ವಿರೋಧಿ ಹೋರಾಟ ಸಮಿತಿ ಮತ್ತೊಂದು ಸುತ್ತಿನ ಆಂದೋಲನಕ್ಕೆ ಮುಂದಾಗಿದೆ.
ತಾತ್ಕಾಲಿಕವೇ ಆಗಿದೆ ಈಗ ಶಾಶ್ವತ
2016 ರಲ್ಲಿ NMTP ಬಳಿ ನಿರ್ಮಾಣವಾಗಬೇಕಿದ್ದ ಈ ಟೋಲ್ ಕಾರಣಾಂತರದಿಂದ ಸುರತ್ಕಲ್‌ಗೆ ಶಿಫ್ಟ್ ಆಗಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ನಡೆಸಿದ್ದು ಖಾಸಗಿ ಕಂಪೆನಿಯಾಗಿದ್ದ ಕಾರಣ, 2018 ರಲ್ಲಿ ಈ ಟೋಲ್‌ಗೆ 9 ಕಿಲೋ ಮೀಟರ್ ದೂರದ ಹೆಜಮಾಡಿ ಎಂಬ ಊರಿನಲ್ಲಿ ಮತ್ತೊಂದು ಟೋಲ್ ಆರಂಭಿಸಲಾಗಿತ್ತು. ಅಲ್ಲದೆ 48 ಕಿಲೋ ಮೀಟರ್ ದೂರದ ಕೇರಳ ಗಡಿಭಾಗವಾಗಿರುವ ತಲಪಾಡಿಯಲ್ಲೂ ಒಂದು ಟೋಲ್ ತೆರೆಯಲಾಗಿತ್ತು.
ಆವಾಗ ಹೆಜಮಾಡಿಯಲ್ಲಿ ಟೋಲ್ ಆರಂಭವಾದ ಕೂಡಲೇ ಈ ಟೋಲ್ ತೆರವು ಮಾಡುವುದಾಗಿ ಹೆದ್ದಾರಿ ಪ್ರಾಧಿಕಾರ ಭರವಸೆ ನೀಡಿತ್ತು. ಆದರೂ ಅದು ಇಂದಿಗೂ ಈಡೇರಿಲ್ಲ ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರಾಗಿರುವ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ತೆರವು ಮಾಡದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಸಾವಿರಾರು ಜನ ಹೆಜಮಾಡಿಯಿಂದ ಸುರತ್ಕಲ್‌ಗೆ ಕಾಲ್ನಡಿಗೆ ಜಾಥಾ ನಡೆಸಿ ಟೋಲ್ ವಿರುದ್ಧ ಪ್ರತಿಭಟಿಸಿದ್ದರು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೂ ಈ ಬಗ್ಗೆ ಮಾಹಿತಿ ದೊರೆತು ಎರಡು ತಿಂಗಳಲ್ಲಿ ಈ ಟೋಲ್ ತೆರವು ಮಾಡಬೇಕು ಎಂದು ಸೂಚನೆ ಕೂಡಾ ನೀಡಿದ್ದರು.
ಎರಡು ಟೋಲ್‌ಗಳ ನಡುವೆ ಕನಿಷ್ಠ 60 ಕಿಲೊ ಮೀಟರ್ ಅಂತರ ಇರಬೇಕು ಎನ್ನುವ ಕಾನೂನು ಇದೆ. ಹೀಗಾಗಿಯೇ ಗಡ್ಕರಿ ಅದು ಅನಧಿಕೃತ ಎಂದಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರಂತೂ ಎರಡು ತಿಂಗಳ ಒಳಗಾಗಿ ಟೋಲ್ ತೆರವಾಗುತ್ತದೆ ಎಂದು ಭರವಸೆ ನೀಡಿದ್ದರು.
ಜೂನ್ 22 ಕ್ಕೆ ಸಂಸದರು ನೀಡಿದ ಎರಡು ತಿಂಗಳ ಗಡುವು ಮುಗಿದಿದ್ದು, ತಕ್ಷಣವೇ ತೆರವುಗೊಳಿಸಬೇಕು ಎಂದು ಟೋಲ್ ವಿರೋಧಿ ಸಮಿತಿ ಸಂಸದರು ಹಾಗೂ ಸ್ಥಳೀಯ ಶಾಸಕ ಭರತ್ ಶೆಟ್ಟಿ ಅವರಿಗೆ ಮನವಿ ಮಾಡಿದೆ ಎಂದು ಹೋರಾಟ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಇದನ್ನೂ ಓದಿ:ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ʼವರಿʼ: ಕ್ರಮಕ್ಕೆ ಪ್ರಯಾಣಿಕರ ಒತ್ತಾಯ