ಆಲಮಟ್ಟಿ (ವಿಜಯಪುರ): ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಶಿಕ್ಷಕರ ಅಗತ್ಯ 17 ಸೇವೆಗಳನ್ನು ಆನ್‌ಲೈನ್ ವ್ಯಾಪ್ತಿಗೆ ತಂದಿದ್ದು, ಮಂಜೂರಾತಿಗಾಗಿ ಕಚೇರಿಗೆ ಅಲೆದಾಡಬೇಕಿಲ್ಲ. ಇದರ ಜತೆಗೆ ಶಿಕ್ಷಕರ ನೇಮಕಾತಿ, ವರ್ಗಾವಣೆ ಸೇರಿ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಭಿನಂದನೆ ಸಲ್ಲಿಸಿದೆ.
ಈ ಬಗ್ಗೆ ಸಂಘದ ರಾಜ್ಯ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರತಿಕ್ರಿಯಿಸಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಸಂಯಮದಿಂದ ರಾಜ್ಯದ ಶಿಕ್ಷಕರ ಬೇಡಿಕೆ ಮತ್ತು ಸಮಸ್ಯೆಗಳನ್ನು ಆಲಿಸಿದ್ದಲ್ಲದೆ, ಪರಿಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚನೆ ಎಂದ ಸಿಎಂ
ವಿವಿಧ ಅನುಮತಿ, ಮಂಜೂರಾತಿ
ಶಿಕ್ಷಣ ಇಲಾಖೆಗೆ ಹಾಗೂ ಶಿಕ್ಷಕರಿಗೆ ಸಂಬಂಧಿಸಿದ ಸುಮಾರು 17 ಪ್ರಮುಖ ಹಾಗೂ ಅತ್ಯಂತ ಅವಶ್ಯಕ ಸೇವೆಗಳಾದ ರಜಾ ಮಂಜೂರಾತಿ, ನಿಯಮ-32 ಮತ್ತು ನಿಯಮ-68ರ ಅಡಿಯಲ್ಲಿ ಪ್ರಭಾರ ಭತ್ಯೆ, ನಿವೇಶನ ಖರೀದಿ, ಕಟ್ಟಡ ನಿರ್ಮಾಣ, ವಾಹನಗಳ ಇತರ ವಸ್ತುಗಳ ಖರೀದಿಗೆ ಇಲಾಖಾ ಅನುಮತಿ, ಹೊಸ ಪಾಸ್‌ಪೋರ್ಟ್ ನವೀಕರಣ, ವೈಯಕ್ತಿಕ ವಿದೇಶ ಪ್ರವಾಸ ಕೈಗೊಳ್ಳಲು ನಿರಾಕ್ಷೇಪಣಾ ಪತ್ರ ನೀಡುವಿಕೆ, ಹೆಚ್ಚುವರಿ ಅರ್ಹತಾದಾಯಕ ಸೇವೆ ಸೇರ್ಪಡೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಅನುಮತಿ ನೀಡುವಿಕೆ, ಎಲ್.ಟಿ.ಸಿ, ಎಚ್.ಟಿ.ಸಿ.ಗಳ ಸೌಲಭ್ಯಗಳ ಮಂಜೂರಾತಿ, ಜಿ.ಪಿ.ಎಫ್ ಮುಂಗಡ, ಭಾಗಶಃ ವಾಪಸಾತಿಯನ್ನು ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು.
ವಿಶೇಷ ವೇತನ ಬಡ್ತಿ ಮಂಜೂರಾತಿ
ಹಬ್ಬದ ಮುಂಗಡ ಮಂಜೂರಾತಿ, ಸಣ್ಣ ಕುಟುಂಬ ಯೋಜನೆಯಡಿ ವಿಶೇಷ ಭತ್ಯೆ, ಅಂಗವಿಕಲರ ಭತ್ಯೆ ಮಂಜೂರಾತಿ, ಅಧಿಕಾರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಮತ್ತು ಪ್ರವಾಸ ದಿನಚರಿ ಅನುಮೋದನೆ, ಪ್ರಥಮ ವೇತನ ಪ್ರಮಾಣ ಪತ್ರ, ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖಾ ಅನುಮತಿ ಪತ್ರ, 10, 15, 20, 25 ವರ್ಷಗಳ ಕಾಲಮಿತಿ, ಸ್ವಯಂ ಚಾಲಿತ ವೇತನ ಬಡ್ತಿ, ವಿಶೇಷ ವೇತನ ಬಡ್ತಿ ಮಂಜೂರಾತಿ, ಕಾಯಂ ಪೂರ್ವ ಅವಧಿ ಘೋಷಣೆ ಪ್ರಸ್ತಾವನೆ ಹೀಗೆ ಈ 17 ಸೇವೆಗಳನ್ನು ಆನ್‌ಲೈನ್‌ಗೆ ಒಳಪಡಿಸಿ ಇಲಾಖೆ ಹಾಗೂ ಶಿಕ್ಷಕರ ಸೇವೆಗೆ ಸಚಿವರು ಹೊಸ ದಿಕ್ಸೂಚಿ ಬರೆದಿದ್ದಾರೆ ಎಂದರು.
ಏಕರೂಪದ ವೇಳಾಪಟ್ಟಿ ಪ್ರಕಟ
ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳನ್ನು ಕಳೆದ ವರ್ಷ ಪ್ರಾರಂಭಿಸಿರುವ ಸಚಿವ ಬಿ.ಸಿ. ನಾಗೇಶ್, ರಾಜ್ಯಾದ್ಯಂತ ಸುಮಾರು 23,000 ಜನ ಶಿಕ್ಷಕರಿಗೆ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಇಲಾಖೆಯಲ್ಲೇ ಪ್ರಥಮ ಬಾರಿಗೆ ರಾಜ್ಯಾದ್ಯಂತ ಏಕರೂಪವಾಗಿ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಬಡ್ತಿ ನೀಡಬೇಕೆಂಬ ಸಂಘಟನೆ ಬೇಡಿಕೆಗೆ ಸ್ಪಂದಿಸಿದ ಸಚಿವರು, ಏಕರೂಪದ ವೇಳಾಪಟ್ಟಿಯನ್ನು ಹೊರಡಿಸಿದ್ದಾರೆ. ಇದರ ಪ್ರಯುಕ್ತ ರಾಜ್ಯಾದ್ಯಂತ 5000 ಜನ ಶಿಕ್ಷಕರು ಮುಖ್ಯ ಗುರುಗಳಾಗಿ ಬಡ್ತಿ ಹೊಂದಿದ್ದು ಅವರ ಪ್ರಾಮಾಣಿಕತೆ ಮತ್ತು ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿರುವ 80,000ಕ್ಕೂ ಹೆಚ್ಚು ಪದವಿಯನ್ನು ಪೂರೈಸಿರುವ ಸೇವಾ ನಿರತ ಶಿಕ್ಷಕರಿಗೆ ರಾಜ್ಯದ 78 ಇಲಾಖೆಗಳಲ್ಲಿ ಇಲ್ಲದ ಬಡ್ತಿಗೆ ನಿಗದಿಪಡಿಸಿದ ಪರೀಕ್ಷೆಯನ್ನು ರದ್ದುಗೊಳಿಸಿ ಬಡ್ತಿ ಪ್ರಮಾಣವನ್ನು ಶೇ.25ರಿಂದ ಶೇ.40ಕ್ಕೆ ಹೆಚ್ಚಿಸಿ ಆದೇಶಿಸಿ ಶಿಕ್ಷಣ ಸಚಿವರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಶಿಕ್ಷಕರಿಗೆ ವೇತನ ಪಾವತಿಯಲ್ಲಿ ಆಗುತ್ತಿರುವ ವಿಳಂಬ ಬಗ್ಗೆ ಕ್ರಮ ಕೈಗೊಂಡು ಸುಮಾರು 35000 ಜನ ಶಿಕ್ಷಕರು ಅನುಭವಿಸುತ್ತಿದ್ದ ನಿರಂತರ ನೋವಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ಅನುದಾನ ಹೆಚ್ಚಳ
ಶಿಕ್ಷಕರ ದಿನಾಚರಣೆಯ ಆಚರಣೆಗೆ ನೀಡುತ್ತಿರುವ ಅನುದಾನವನ್ನು ತಾಲೂಕು ಹಂತದಲ್ಲಿ 10000 ದಿಂದ 20000 ರೂಪಾಯಿಗೆ ಹಾಗೂ ಜಿಲ್ಲಾ ಮಟ್ಟದ ಆಚರಣೆಗಾಗಿ 15000 ದಿಂದ 30000 ರೂಪಾಯಿಗೆ ಅನುದಾನವನ್ನು ಸಚಿವರು ಹೆಚ್ಚಿಸಿದ್ದಾರೆ. ತಾಲೂಕು ಕೇಂದ್ರದಲ್ಲಿ ಗುರುಭವನಗಳ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಗುರುಭವನಕ್ಕೆ 1 ಕೋಟಿ ರೂಪಾಯಿ ನೀಡುವಂತೆ ಪರಿಷ್ಕೃತ ತೀರ್ಮಾನ ಕೈಗೊಂಡಿದ್ದು, ಶಿಕ್ಷಕರ ಪರ ನಿಲುವು ಆಗಿದೆ. ಮುಖ್ಯ ಗುರುಗಳಿಗೆ ಪ್ರಭಾರ ಭತ್ಯೆ ನೀಡುವಂತೆ ಆದೇಶ ಹೊರಡಿಸುವುದರ ಮೂಲಕ ಎಲ್ಲ ಶಾಲೆಗಳಲ್ಲಿ ಶೈಕ್ಷಣಿಕ ನಾಯಕತ್ವ ಒದಗಿಸಿಕೊಡುವುದರ ಮೂಲಕ ಶಿಕ್ಷಕರಿಗೆ ನ್ಯಾಯ ಒದಗಿಸಿದ್ದಾರೆ ಎಂದು ಶಿಕ್ಷಣ ಸಚಿವರ ನಿಲುವನ್ನು ಮುಕ್ತವಾಗಿ ಶ್ಲಾಘಿಸಿದರು.
ಇಲಾಖೆಯ ಇತಿಹಾಸದಲ್ಲೇ ಶಾಲಾ ಪ್ರಾರಂಭದಲ್ಲೇ 35000ಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ನಿಯೋಜಿಸಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡಿರುವುದು ಶಿಕ್ಷಣ ಸಚಿವರ ದೂರದೃಷ್ಟಿಗೆ ಹಿಡಿದ ಕನ್ನಡಿಯಾಗಿದೆ. ಶಿಕ್ಷಕರು ಪಡೆಯುವ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗಾಗಿ ಪಾವತಿಸಬೇಕೆಂದು ಸ್ಪಷ್ಟ ನಿರ್ದೇಶನವನ್ನು ಹಾಗೂ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಾ, ಅವರು ಪಡೆಯುವ ವೇತನದ ಸಂದೇಶವನ್ನು ಅವರ ಮೊಬೈಲ್‌ಗಳಿಗೆ ಬರುವಂತೆ ಕ್ರಮವಹಿಸಿದ್ದಾರೆ. ದೂರದ ಊರುಗಳಿಂದ ಬೆಂಗಳೂರಿಗೆ ಬರುವ ಶಿಕ್ಷಕರಿಗೆ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಲು ಇರುವ ಶಿಕ್ಷಕರ ಸದನದಲ್ಲಿ ಶಿಕ್ಷಕರಿಗೆ ಕಡಿಮೆ ವೆಚ್ಚದಲ್ಲಿ ಕೊಠಡಿಗಳ ಸೌಲಭ್ಯ ಹಾಗೂ ಅದರ ಸಂಪೂರ್ಣ ದುರಸ್ತಿ ಮತ್ತು ನವೀಕರಣಕ್ಕಾಗಿ ಅಂದಾಜು 3.50 ಕೋಟಿ ರೂಪಾಯಿಗಳಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.
ಶಿಕ್ಷಕರ ವೈದ್ಯಕೀಯ ವೆಚ್ಚಗಳ ಮರುಪಾವತಿಗಾಗಿ ಸುಮಾರು 75 ಕೋಟಿಗಳ ಬಿಡುಗಡೆಗೆ ಕ್ರಮ ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 8000 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿರುವುದು ಸರ್ಕಾರಿ ಶಾಲೆಗಳ ಬಗ್ಗೆ ಇರುವ ಸಚಿವರ ಬದ್ಧತೆ ತೋರಿಸಿಕೊಡುತ್ತದೆ. 15000 ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿಯೂ ಅಮೂಲಾಗ್ರ ಬದಲಾವಣೆ ಮಾಡಿ ಆಯ್ಕೆ ಪ್ರಕ್ರಿಯೆ ಜಾರಿಗೊಳಿಸುತ್ತಿರುವುದು ಇದು ಅತ್ಯಂತ ಶಿಕ್ಷಣ ಸ್ನೇಹಿ ನಿರ್ಧಾವಾಗಿದೆ ಎಂದು ಶಂಭುಲಿಂಗನಗೌಡ ಪಾಟೀಲ ಹಾಗೂ ಚಂದ್ರಶೇಖರ ನುಗ್ಗಲಿ ತಿಳಿಸಿದರು.
ಬಿ.ಸಿ. ನಾಗೇಶ್ ರವರ ನಾಯಕತ್ವದಲ್ಲಿ ಶಿಕ್ಷಣ ಇಲಾಖೆಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಒಟ್ಟಾರೆಯಾಗಿ ಈ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸಿರುವ ಶಿಕ್ಷಣ ಸಚಿವರು, ಶೇ.25 ಖಾಲಿ ವರ್ಗಾವಣೆ ಇಲ್ಲ ಎಂಬ ಅಂಶ ಹೊರತುಪಡಿಸಿ ಇನ್ನುಳಿದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿದ್ದು, ಅವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ತಾವು ಧನ್ಯವಾದ ಸಲ್ಲಿಸಲಾಗುವುದು. ವರ್ಗಾವಣೆಯ ವಿಷಯದಲ್ಲಿಯೂ ಇನ್ನಷ್ಟು ಪ್ರಯತ್ನ ಮುಂದುವರಿಸಲಾಗುತ್ತದೆ ಎಂದು ಶಂಭುಲಿಂಗನಗೌಡ ಪಾಟೀಲ ಹಾಗೂ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಇದನ್ನೂ ಓದಿ | BJP ಜನಸ್ಪಂದನ | ಸಿದ್ದರಾಮಯ್ಯ ಅವರದ್ದು 100% ಸರ್ಕಾರ: ಸಿಎಂ ಬೊಮ್ಮಾಯಿ ʼದಮ್ʼದಾರ್ ಭಾಷಣ