ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಒಟ್ಟಿನಲ್ಲಿ ಬಹುನಿರೀಕ್ಷಿತ ಉಪನಗರ ರೈಲು ಯೋಜನೆ (ಸಬ್ ಅರ್ಬನ್ ರೈಲ್ ಪ್ರಾಜೆಕ್ಟ್) ಯೋಜನೆ ಕಾಮಗಾರಿ ಆರಂಭಕ್ಕೆ ಮಹೂರ್ತ ಕೂಡಿಬಂದಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿ ₹15,767 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಯೋಜನೆಗೆ ಜೂನ್ 20 ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಮಾಹಿತಿ ನೀಡಿದ್ದಾರೆ.
ನಗರದ ಜನತೆಯ ಉಪನಗರ ರೈಲು ಕನಸು ಶೀಘ್ರದಲ್ಲೇ ನನಸಾಗಲಿದೆ. ಯಾವ ಪ್ರದೇಶಗಳಲ್ಲಿ ನಮ್ಮ ಮೆಟ್ರೋ ಇಲ್ಲವೋ ಅಲ್ಲಿ ಉಪನಗರ ರೈಲು ಸಂಪರ್ಕ ಕಲ್ಪಿಸಲಾಗುತ್ತದೆ. ಜತೆಗೆ ಬೆಂಗಳೂರು ಸುತ್ತಮಜತ್ತಲಿನ ರಾಮನಗರ, ತುಮಕೂರಿನಂತಹ ಸ್ಥಳಗಳಿಂದ ನೇರವಾಗಿ ಹಾಗೂ ಕಡಿಮೆ ವೆಚ್ಚಸದಲ್ಲಿ ಪ್ರಯಾಣಿಸಲು ಸಬ್‌ಅರ್ಬನ್ ಸಹಕಾರಿಯಾಗಲಿದೆ. ಈ ಯೋಜನೆಯಿಂದ ನಗರದಲ್ಲಿ ಸಾರಿಗೆ ಸಂಪರ್ಕ ಸುಧಾರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ಆರ್‌ಐಡಿಇ) ಅನುಷ್ಠಾನ ಮಾಡಲಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | IRCTC ವೆಬ್‌ಸೈಟ್, ಆಪ್ ಮೂಲಕ ರೈಲ್ವೆ ಟಿಕೆಟ್ ಬುಕಿಂಗ್ ಮಿತಿ ಹೆಚ್ಚಳ
2020-23ರ ಕೇಂದ್ರ ಬಜೆಟ್‌ನಲ್ಲಿ ₹450 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಅದೇ ರೀತಿ 2021-22ರ ರಾಜ್ಯ ಬಜೆಟ್‌ನಲ್ಲಿ 850 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. 25 ಕಿ.ಮೀ ಉದ್ದದ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ರೈಲ್ವೆ ಕಾರಿಡಾರ್ ಯೋಜನೆ ಟೆಂಡರ್ ಅನ್ನು ಲಾರ್ಸೆನ್ ಅಂಡ್ ಟ್ಯುಬ್ರೊ (ಎಲ್ ಅಂಡ್ ಟಿ) ಕಂಪನಿ ಪಡೆದಿದ್ದು, ಕಾಮಗಾರಿ ಆದೇಶ ಪತ್ರವನ್ನೂ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಒಟ್ಟು ನಾಲ್ಕು ಕಾರಿಡಾರ್‌ಗಳ ಮೂಲಕ ಅನುಷ್ಠಾನ
ಈ ಯೋಜನೆ ನಾಲ್ಕು ಪ್ರತ್ಯೇಕ ಕಾರಿಡಾರ್‌ಗಳನ್ನು ಹೊಂದಿರಲಿದೆ. ಬೆಂಗಳೂರು-ದೇವನಹಳ್ಳಿ(41.40 ಕಿ.ಮೀ), ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ(25.01 ಕಿ.ಮೀ), ಕೆಂಗೇರಿ-ಬೆಂಗಳೂರು ಕಟೋನ್ಮೆಂಟ್(35.52 ಕಿ.ಮೀ) ಹಾಗೂ ಹೀಲರಿಗೆ-ರಾಜಾನುಕುಂಟೆ(46.24 ಕಿ.ಮೀ) ಕಾರಿಡಾರ್‌ಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ರೈಲ್ವೆ ಕಾರಿಡಾರ್ ಯೋಜನೆ ಟೆಂಡರ್ ಹೊರತುಪಡಿಸಿ ಇನ್ನುಳಿದ ಮೂರು ಕಾರಿಡಾರ್‌ಗಳಿಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಯೋಜನೆಯಲ್ಲಿ 62 ನಿಲ್ದಾಣಗಳು, 22 ಎಲಿವೇಟೆಡ್ ಮಾರ್ಗ ಹಾಗೂ 41 ಅಟ್ ಗ್ರೇಡ್ ಇರಲಿವೆ. 101.7 ಎಕರೆ ಖಾಸಗಿ ಭೂಮಿಯ ಅವಶ್ಯಕತೆ ಇದೆ. ಭೂಸ್ವಾಧೀನಕ್ಕೆ 1,419 ಕೋಟಿ ರೂಪಾಯಿ ವೆಚ್ಚವಾಗಲಿದೆ. 2026ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ | ಬುಲೆಟ್ ರೈಲು 2026ಕ್ಕೆ ಆರಂಭವಾಗುವ ವಿಶ್ವಾಸ ಇದೆ ಎಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್