Site icon Vistara News

Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ

Bus accident in honnavar

#image_title

ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ 30 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಂಕಿ ಬಳಿ ನಡೆದಿದೆ. ಅಪಘಾತದಲ್ಲಿ (Honnavar News) ಗಾಯಗೊಂಡಿರುವ ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ.

ಮಂಕಿ ಬಳಿ ಒಳರಸ್ತೆಗೆ ಕಾರು ತಿರುಗಿಸುತ್ತಿದ್ದ ವೇಳೆ ಶುಕ್ರವಾರ ರಾತ್ರಿ ಹಿಂದಿನಿಂದ ಬಸ್‌ ಗುದ್ದಿದೆ. ಬಸ್ ಚಾಲಕ ಅಪಘಾತ ತಡೆಯಲು ಯತ್ನಿಸಿದನಾದರೂ ಕಾರಿಗೆ ಡಿಕ್ಕಿಯಾದ ಬಳಿಕ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನು ಕಾರಿನಲ್ಲಿದ್ದ ಜಿಲ್ಲಾ ಪಂಚಾಯಿತಿ ಗುತ್ತಿಗೆದಾರ ಮೋಹನ್ ನಾಯ್ಕ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Theft Case: ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ಮಹಿಳೆಯರ ತಲೆ ಒಡೆದು ದರೋಡೆ ಮಾಡಿದ ಕಿರಾತಕಿ

ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ; ಪಿಡಿಒ ಅಮಾನತು

ರಾಯಚೂರು: ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣದಲ್ಲಿ ನಿರ್ಲಕ್ಷ್ಯ ಆರೋಪದಲ್ಲಿ ಜಾಗೀರ ಜಾಡಲದಿನ್ನಿ ಪಿಡಿಒ ರೇಣುಕಾ ಎಂಬುವವರನ್ನು ಅಮಾನತು ಮಾಡಲಾಗಿದೆ.

ದೇವದುರ್ಗ ತಾಲೂಕು ರೇಕಲಮರಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಪೈಪ್‌ಲೈನ್ ಒಡೆದು ಕಲುಷಿತ ನೀರು ಸರಬರಾಜು ಆಗಿತ್ತು. ಆ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಒಬ್ಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಘಟನೆಗೆ ಪಿಡಿಒ ನಿರ್ಲಕ್ಷ್ಯ ಕಾರಣ, ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ದೇವದುರ್ಗ ಇಒ ನೀಡಿದ ವರದಿ ಆಧರಿಸಿ, ಇಲಾಖಾ ವಿಚಾರಣೆ ಕಾಯ್ದಿರಿಸಿ ಪಿಡಿಒ ರೇಣುಕಾ ಅವರನ್ನು ರಾಯಚೂರು ಜಿ.ಪಂ. ಸಿಇಒ ಶಶಿಧರ್ ಕುರೇರ್ ಆದೇಶ ಹೊರಡಿಸಿದ್ದಾರೆ.

Exit mobile version