ಬೆಂಗಳೂರು: ಮಹಿಳೆಯರ ಉಚಿತ ಬಸ್ ಪ್ರಯಾಣದ (Free Bus service) ಶಕ್ತಿ ಯೋಜನೆಯಿಂದ (Shakthi scheme) ನಷ್ಟವಾಗುತ್ತಿದೆ ಎಂದು ಆರೋಪಿಸಿ ಮತ್ತು ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಖಾಸಗಿ ಸಾರಿಗೆ ವಾಹನಗಳ (Private Transport) ಮಾಲೀಕರ ಸಂಘಟನೆಗಳು ಕರೆ ನೀಡಿದ ಜುಲೈ 27ರ ಖಾಸಗಿ ಸಾರಿಗೆ ಬಂದ್‌ನ್ನು (Private Transport Bundh) ಮುಂದೂಡಲಾಗಿದೆ.
ಸೋಮವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga reddy) ಅವರು ಆಯೋಜಿಸಿ ಆಟೋ, ಟ್ಯಾಕ್ಸಿ, ಕ್ಯಾಬ್, ಮ್ಯಾಕ್ಸಿ ಕ್ಯಾಬ್ ಮತ್ತು ಖಾಸಗಿ ಬಸ್‌ಗಳ ಮಾಲೀಕರು ಮತ್ತು ಚಾಲಕರ ಸಭೆಯ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ, ಇದು ಮುಂದೂಡಿಕೆ ಮಾತ್ರ ರದ್ದು ಅಲ್ಲ ಎಂದು ಸಂಘಟನೆಗಳ ಪರವಾಗಿ ಖಾಸಗಿ ಬಸ್‌ಗಳ ಒಕ್ಕೂಟ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.
ಶಕ್ತಿ ಯೋಜನೆಯಿಂದ ತಮಗೆ ದೊಡ್ಡ ಹೊಡೆತ ಆಗಿದೆ ಎಂದು ಆರೋಪಿಸಿದ್ದ 35ಕ್ಕೂ ಅಧಿಕ ಸಂಘಟನೆಗಳು, ಇದರ ಜತೆಗೆ ತಮ್ಮ ಇತರ ಹಲವು ಬೇಡಿಕೆಗಳನ್ನು ಮುಂದಿಟ್ಟು ಬಂದ್‌ಗೆ ಕರೆ ನೀಡಿದ್ದವು. ಇದರ ನಡುವೆ ಸಮಸ್ಯೆಯ ಬಗ್ಗೆ ಚರ್ಚಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಎಲ್ಲ ಸಂಘಟನೆಗಳ ಮುಖಂಡರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಎಲ್ಲವನ್ನೂ ತುಂಬ ಶ್ರದ್ಧೆಯಿಂದ ಆಲಿಸಿದ ರಾಮಲಿಂಗಾ ರೆಡ್ಡಿ ಅವರು ಅಂತಿಮವಾಗಿ ಪತ್ರಿಕಾಗೋಷ್ಠಿ ನಡೆಸಿದರು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆ ಮಧ್ಯೆ ಒಂದು ಬ್ರೇಕ್ ಪಡೆದುಕೊಂಡು ಸಂಜೆ 5.30ರವರೆಗೂ ನಡೆಯಿತು. ಖಾಸಗಿ ಸಾರಿಗೆಯ ಹಲವಾರು ಸಮಸ್ಯೆಗಳನ್ನು ಅಲಿಸಿದ ಸಚಿವರು ಶಕ್ತಿ ಯೋಜನೆಯಿಂದ ಆಗುತ್ತಿರುವ ತೊಂದರೆಗಳ ಕುರಿತಂತೆ ಆಗಸ್ಟ್‌ನಲ್ಲಿ 10ರ ನಂತರ ತೀರ್ಮಾನ ಹೇಳುವುದಾಗಿ ಪ್ರಕಟಿಸಿದರು. ಉಳಿದ ಸಮಸ್ಯೆಗಳಿಗೆ ಸಂಬಂಧಿಸಿ ಮುಂದಿನ ಸೋಮವಾರ ಮತ್ತೊಂದು ಸುತ್ತಿನ ಸಭೆಯನ್ನು ಕರೆದಿದ್ದಾರೆ. ಇದರಲ್ಲಿ ರ‍್ಯಾಪಿಡೋ ಟ್ಯಾಕ್ಸಿ ಸೇವೆ ನಿರ್ಬಂಧಿಸುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಭೆಯ ಬಳಿಕ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ʻʻಇವತ್ತು ಸುದೀರ್ಘವಾದ ಸಭೆ ಆಗಿದೆ. ಟ್ಯಾಕ್ಸಿ, ಆಟೋ, ಕ್ಯಾಬ್ ಸೇರಿದಂತೆ ಬಹುತೇಕ ವರ್ಗಗಳ ಸಭೆ ಮಾಡಿದ್ದೇನೆ. ಹಲವಾರು ಬೇಡಿಕೆಗಳು ಇದ್ದವು. ಶಕ್ತಿ ಯೋಜನೆಯಿಂದ ಆಟೋ ಹಾಗು ಬಸ್ ಗಳಿಗೆ ತೊಂದರೆಯಾಗಿದೆ ಎಂಬ ದೂರಿನ ಬಗ್ಗೆ ಚರ್ಚೆ ನಡೆದು ಪರಿಹಾರ ಕೊಡುವಂತೆ ಕೋರಿದ್ದಾರೆ. ನಾಲ್ಕು ಸೀಟ್‌ಗಳಿಗಿಂತ ಮೇಲಿರುವ ಕಾರುಗಳಿಗೆ ಟ್ಯಾಕ್ಸ್ ಹಾಕಲಾಗಿತ್ತು. ಅದನ್ನು ಮುಂದಕ್ಕೆ ಹಾಕಲು ಅಥವ ರದ್ದು ಮಾಡಲು ಕೋರಿದ್ದಾರೆ. ಇದರ ಬಗ್ಗೆ ಸಿಎಂ ಜತೆ ಮಾತನಾಡಬೇಕು. ಆಗಸ್ಟ್‌ನಲ್ಲಿ ಸಿಎಂ ಜೊತೆ ಒಕ್ಕೂಟವನ್ನು ಮಾತನಾಡಿಸುತ್ತೇವೆ. ಉಳಿದ ಬೇಡಿಕೆಗಳು ನಮ್ಮ ಇಲಾಖೆಗೆ ಸಂಬಂಧಪಟ್ಟವು. ಅವುಗಳ ತೀರ್ಮಾನಕ್ಕೆ ಮುಂದಿನ ಸೋಮವಾರ ಸಭೆ ಕರೆದಿದ್ದೇನೆ. ಇನ್ನು ಎರಡು ಮೂರು ದಿನಗಲ್ಲಿ ಇವರ ಸಮಸ್ಯೆ ಬಗೆಹರಿಸಲು ಆರಂಭಿಸುತ್ತೇನೆʼʼ ಎಂದು ರಾಮಲಿಂಗಾ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಭೆಯಿಂದ ಸಂಘಟನೆಗಳ ಮುಖಂಡರಿಗೆ ಸಮಾಧಾನ ಆಗಿದೆ. ಸಮಸ್ಯೆ ಪರಿಹರಿಸುತ್ತೇವೆ. ಹೀಗಾಗಿ ಜುಲೈ 27ರಂದು ಕರೆ ನೀಡಿದ ಮುಷ್ಕರ ಬೇಡ ಎಂದು ಹೇಳಿದ್ದೇನೆ. ಅವರ ನನ್ನ ಮಾತಿಗೆ ಬೆಲೆ ನೀಡ್ತಾರೆ ಅನ್ನೋ ಭರವಸೆ ಇದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಬಂದ್ ಮುಂದೂಡಿಕೆ ಪ್ರಕಟಿಸಿದ ಒಕ್ಕೂಟದ ಅಧ್ಯಕ್ಷರು
ಸಚಿವ ರಾಮಲಿಂಗಾ ರೆಡ್ಡಿ ಅವರ ಜತೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಅವರು ಜುಲೈ 27ರ ಬಂದ್‌ನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದರು.
ʻಜುಲೈ 27ರಂದು ಎಲ್ಲ ಖಾಸಗಿ ಸಾರಿಗೆ ಬಂದ್ ಮಾಡಲು ನಿರ್ಧರಿಸಲಾಗಿತ್ತು. ಸುಮಾರು 27-30 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿತ್ತು. ಸುಮಾರು 27 ಬೇಡಿಕೆಗಳnfnu ಸಾರಿಗೆ ಸಚಿವರೇ ಬಗೆಹರಿಸಬಹುದಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯಿಂದ ಹಾಗು ತೆರಿಗೆ ಹೆಚ್ಚಳದಿಂದ ನಮ್ಮ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಆಗಸ್ಟ್ 10ರಂದು ಆರ್ಥಿಕ ಇಲಾಖೆಯ ಸಭೆ ಇರುವುದರಿಂದ ಅಲ್ಲಿಯವರೆಗೆ ಕಾಯುತ್ತೇವೆʼʼ ಎಂದು ಹೇಳಿದರು. ಕರೆ ನೀಡಿದ ಬಂದ್‌ನ್ನು ಹಿಂಪಡೆದಿಲ್ಲ. ಮುಂದೂಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆಯ ಆಯುಕ್ತ ಯೋಗೀಶ್ ಎ.ಎಂ, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಮಲ್ಲಿಕಾರ್ಜುನ್, ಹೇಮಂತ್ ಕುಮಾರ್, ಉಮಾಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಯ್ಕ್, ಕರ್ನಾಟಕ ಚಾಲಕರ ಒಕ್ಕೂಟದ ನಾರಾಯಣ ಸ್ವಾಮಿ, ಆದರ್ಶ ಆಟೋ ಅಸೋಸಿಯೇಷನ್‌ನ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : Bengaluru Strike: ಖಾಸಗಿ ಸಾರಿಗೆ ಮುಷ್ಕರ ಎಚ್ಚರಿಕೆ; ಜು.24ಕ್ಕೆ ರಾಮಲಿಂಗಾರೆಡ್ಡಿ ಸಭೆ