ಬೆಂಗಳೂರು: ಶಕ್ತಿ ಯೋಜನೆ ಜಾರಿ ಬಳಿಕ ಸಂಕಷ್ಟಕ್ಕೀಡಾಗಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಂದ್ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ. ಬೈಕ್ ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೆ.11ರಂದು ಸೋಮವಾರ ಬೆಂಗಳೂರು ಬಂದ್‌ಗೆ (Transport Strike) ಕರೆಕೊಟ್ಟಿದೆ. ಭಾನುವಾರ ಮಧ್ಯ ರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತವಾಗುವ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಬಂದ್‌ಗೆ 30ಕ್ಕೂ ಹೆಚ್ಚು ಸಂಘಟನೆಳು ಬೆಂಬಲ ನೀಡಿವೆ. ಇದರಿಂದ ನಾಳೆ (ಭಾನುವಾರ) ಮಧ್ಯರಾತ್ರಿಯಿಂದಲೇ ರಾಜಧಾನಿ ಸ್ತಬ್ಧವಾಗುವ ಸಾಧ್ಯತೆ ಇದೆ. ಹೀಗಾಗಿ ಖಾಸಗಿ ವಾಹನ ಪ್ರಯಾಣಿಕರು ಬಸ್ ನೋಡಿ ಪ್ರಯಾಣಕ್ಕೆ ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಪರದಾಡಬೇಕಾದ ಸ್ಥಿತಿ ಎದುರಾಗಬಹುದು.
ಶಕ್ತಿ ಯೋಜನೆ ಜಾರಿ ಬಳಿಕ ನಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದ ಖಾಸಗಿ ಸಾರಿಗೆ ಒಕ್ಕೂಟ, ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಸರ್ಕಾರದ ಗಮನಸೆಳೆಯಲು ಸಜ್ಜಾಗಿತ್ತು. ಆರೆ ಒಕ್ಕೂಟ ನೀಡಿದ್ದ ಡೆಡ್‌ಲೈನ್ ಒಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದಕ್ಕೆ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಮೂಲಕ ಸಮರ ಸಾರಿದೆ. ಇನ್ನು ಈ ಬಂದ್‌ಗೆ ಸುಮಾರು 30ಕ್ಕೂ ಹೆಚ್ಚು ಖಾಸಗಿ ಸಂಘಟನೆಗಳು ಸಾಥ್ ನೀಡಲು ಸಜ್ಜಾಗಿವೆ. ಒಕ್ಕೂಟ ಕರೆ ನೀಡಿರುವ ಬಂದ್‌ಗೆ ವಿವಿಧ ಚಾಲಕರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಇದನ್ನೂ ಓದಿ | Muslim Appeasement?: ಸರ್ಕಾರದಲ್ಲಿ ಅಭಿವೃದ್ಧಿಗೆ ದುಡ್ಡಿಲ್ಲ, ಆದರೆ ಮುಸ್ಲಿಮರಿಗೆ ವಾಹನ ಖರೀದಿಗೆ 3 ಲಕ್ಷ ಸಬ್ಸಿಡಿ ಗ್ಯಾರಂಟಿ!
ಇನ್ನು ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್‌ಗಳು ಬಂದ್ ಆಗಲಿದ್ದು ಸಿಲಿಕಾನ್ ಸಿಟಿ ಜನರಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿದೆ.
ಯಾವ ವಾಹನಗಳು ರಸ್ತೆಗಿಳಿಯಲ್ಲ?
ಸಾಧಾರಣ ಆಟೋಗಳು
ಓಲಾ ಉಬರ್ ಆಟೋ, ಕ್ಯಾಬ್‌ಗಳು
ಶಾಲಾ ಆಟೋಗಳು
ಕಂಪನಿ ಕ್ಯಾಬ್‌ಗಳು
ಏರ್‌ಪೋರ್ಟ್ ಕ್ಯಾಬ್‌ಗಳು
ಸ್ಕೂಲ್ ಬಸ್‌ಗಳು
ಖಾಸಗಿ ಬಸ್‌ಗಳು
ಯಾವ ವಾಹನಗಳು ಇರುತ್ತೆ?
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್
ಬೈಕ್ ಟ್ಯಾಕ್ಸಿ
ಸ್ವಂತ ವಾಹನಗಳ ಸಂಚಾರ
ಬಂದ್ ದಿನ ಆಟೋ ರಿಕ್ಷಾಗಳು, ಓಲಾ, ಉಬರ್ ಆಟೋಗಳು, ಶಾಲಾ ಆಟೋಗಳು, ಕಂಪನಿಗಳ ಕ್ಯಾಬ್, ಏರ್‌ಪೋರ್ಟ್ ಕ್ಯಾಬ್‌ಗಳು ರಸ್ತೆಗಿಳಿಯುವುದು ಬಹುತೇಕ ಅನುಮಾನ. ಇನ್ನು ಸ್ಕೂಲ್ ವ್ಯಾನ್‌ಗಳು, ಸ್ಕೂಲ್ ಬಸ್‌ಗಳು, ಖಾಸಗಿ ಬಸ್‌ಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದು, ಈ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್, ಬೈಕ್ ಟ್ಯಾಕ್ಸಿ ಹಾಗೂ ಸ್ವಂತ ವಾಹನಗಳ ಮೂಲಕ ಎಂದಿನಂತೆ ಸಂಚಾರ ನಡೆಸಬಹುದಾಗಿದೆ.
ಇನ್ನು ಈ ಬಂದ್‌ನಿಂದ ಸರ್ಕಾರಿ ಸಾರಿಗೆ ಬಿಟ್ಟು ಖಾಸಗಿ ಸಾರಿಗೆ ಬಳಕೆ ಮಾಡುವವರಿಗೆ ಹೆಚ್ಚು ಎಫೆಕ್ಟ್ ಸಾಧ್ಯತೆ ಇದ್ದು, ಏರ್ ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಹಿನ್ನೆಲೆ ಏರ್ಪೋಟ್ ಪ್ರಯಾಣಿರಿಗೆ ತೊಂದರೆ ಸಾಧ್ಯತೆ ಕೂಡ ಇರಲಿದೆ. ಅಲ್ಲದೇ ಓಲಾ, ಊಬರ್ ಬಳಕೆದಾರರು, ಕಾರ್ಪೋರೆಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್ ಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದು ಇವು ರಸ್ತೆಗಿಳಿಯೋದು ಡೌಟ್ ಇದೆ. ಖಾಸಗಿ ವಾಹನಗಳ ಮೂಲಕ ಮಕ್ಕಳನ್ನ ಶಾಲೆಗೆ ಕಳುಹಿಸುವವರಿಗೂ ಬಿಸಿ ತಟ್ಟಲಿದೆ. ಸದ್ಯ ಬಂದ್ ಹಿನ್ನೆಲೆ ಪೋಷಕರು, ವಿದ್ಯಾರ್ಥಿಗಳು ಈಗಾಗಲೇ ಪರ್ಯಾಯ ಮಾರ್ಗ ಹುಡುಕಲು ಸಜ್ಜಾಗಿದ್ದು, ವ್ಯಾನ್ ಬರಲಿಲ್ಲ ಅಂದ್ರೆ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗೋಕೆ ಆಗಲ್ಲ ಅಂತಾ ವಿದ್ಯಾರ್ಥಿಗಳು ಅಳಲು ತೋಡಿಕೊಳ್ತಿದ್ದಾರೆ
ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆಗಳೇನು?
- ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ
- ಬೈಕ್, ರ್ಯಾಪಿಡ್ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ
- ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ
- ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ
- ವೈಟ್ ಬೋರ್ಡ್ ವಾಹನವನ್ನು ಬಾಡಿಗೆಗೆ ಬಳಸಲು ಬ್ರೇಕ್
- ಖಾಸಗಿ ಬಸ್ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ
ಇದನ್ನೂ ಓದಿ | HD Kumaraswamy : ಬಿಜೆಪಿ-ಜೆಡಿಎಸ್ ಮೈತ್ರಿ ನಾಳೆ ಘೋಷಣೆ?; ಕ್ಷೇತ್ರ ಹಂಚಿಕೆ ನಡೆದಿಲ್ಲ ಎಂದ ಕುಮಾರಸ್ವಾಮಿ
ಒಟ್ಟಿನಲ್ಲಿ ಶತಾಯ ಗತಾಯ ಬಂದ್ ಮಾಡಿಯೇ ತೀರುತ್ತೇವೆ ಅಂತ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಪಟ್ಟು ಹಿಡಿದು ಕುಳಿತಿದ್ದರೆ, ಅತ್ತ ಸಾರಿಗೆ ಇಲಾಖೆ, ಸರ್ಕಾರ ಮಾತ್ರ ಡೋಂಡ್‌ಕೇರ್ ಎಂದು ಬಂದ್‌ಗೆ ತಲೆಕೆಡಿಸಿಕೊಳ್ಳದೇ ಸೈಲೆಂಟ್ ಆಗಿದೆ.