ಬೆಂಗಳೂರು: ಬೊಮ್ಮಾಯಿ ಅವರು ಪದೇ ಪದೆ ಹೇಳುತ್ತಿರುವಂತೆ ಕರ್ನಾಟಕ ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಮಾದರಿಯಲ್ಲೇ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು, ಪ್ರಶ್ನೆ ಕೇಳಬಾರದು, ಪ್ರತಿಭಟನೆ ಮಾಡಬಾರದು ಎಂಬ ದಬ್ಬಾಳಿಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷವಾಗಲಿ, ಸಾರ್ವಜನಿಕರಾಗಲಿ, ಸರ್ಕಾರದ ವಿರುದ್ದ ಮಾತನಾಡಿದರೆ ಪೊಲೀಸರ ಮೂಲಕ ದೌರ್ಜನ್ಯ, ಪ್ರಕರಣ ದಾಖಲಿಸಲಾಗುವುದು ಎಂಬ ಸಂದೇಶವನ್ನು ಈ ಸರ್ಕಾರ, ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಮೂಲಕ ಕಳುಹಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸೇವ್ ಸ್ಯಾಂಕಿ ಕುರಿತು ಮಲ್ಲೇಶ್ವರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮಲ್ಲೇಶ್ವರದ 60-70 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ. ಅವರು ಮಾಡಿರುವ ತಪ್ಪು ಏನೆಂದರೆ, ಸ್ಯಾಂಕಿ ಮೇಲ್ಸೆತುವೆ ಯೋಜನೆ ವಿರೋಧಿಸಿ ಪರಿಸರ ಉಳಿಸಲು ಹೋರಾಟ ಮಾಡಿರುವುದು. ಈ ಸಾರ್ವಜನಿಕರು 22 ಸಾವಿರ ಜನ ಸಹಿ ಹಾಕಿರುವ ಅರ್ಜಿಯಲ್ಲಿ ಸ್ಯಾಂಕಿ ಮೇಲ್ಸೆತುವೆ ರಸ್ತೆ ಅಗಲೀಕರಣ ಬೇಡ ಎಂದು ಹೇಳಿದ್ದಾರೆ. 2 ಸಾವಿರ ಶಾಲಾ ಮಕ್ಕಳು ಬೊಮ್ಮಾಯಿ ಅಂಕಲ್‌ಗೆ ಪತ್ರ ಬರೆದು ಈ ಯೋಜನೆಯಿಂದ ಪರಿಸರ ನಾಶವಾಗಲಿದೆ, ನಮ್ಮ ಶಾಲೆಗೆ ತೊಂದರೆಯಾಗಲಿದೆ ಎಂದು ತಮ್ಮ ಮನವಿ ಸಲ್ಲಿಸಿದ್ದಾರೆ. ಆದರೂ ಮುಖ್ಯಮಂತ್ರಿಗಳು ಇವರ ಮನವಿಗೆ ಕಿವಿಗೊಟ್ಟಿಲ್ಲ.
ಅಶ್ವತ್ಥನಾರಾಯಣ ಅವರ ಯೋಜನೆ ಹೇಗಿದೆ ಎಂದರೆ ಅಸ್ಥಿತ್ವಕ್ಕೆ ತರಲು ಸಾಧ್ಯವಾಗದ ಯೋಜನೆ ಸಾಧ್ಯ ಮಾಡುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಉದಾಹರಣೆ ಉರಿಗೌಡ ನಂಜೇಗೌಡ ಅವರ ಕಥೆ. ಅದೇ ರೀತಿ ಅಸ್ತಿತ್ವಕ್ಕೆ ತರಲು ಸಾಧ್ಯವಾಗದ ಮೇಲ್ಸೇತುವೆ ಯೋಜನೆ ಜಾರಿಗೆ ತರಲು ಮುಂದಾಗುತ್ತಾರೆ. ಕೇವಲ 40% ಕಮಿಷನ್ ಹೊಡೆಯಲು ಈ ಯೋಜನೆಗೆ ಮುಂದಾಗಿದ್ದಾರೆ. ಈ ಯೋಜನೆ ಬಗ್ಗೆ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳು ಪ್ರಶ್ನಿಸಿದಾಗ ಬಿಎಂಎಲ್ ಟಿಎಗೆ ಪತ್ರ ಬರೆದರು. ನಂತರ ಈ ಸಮಿತಿ ರಚನೆಯಾಗಿಲ್ಲ ಹೀಗಾಗಿ ಇದನ್ನು ತಡೆ ಹಿಡಿಯಲಾಗಿದೆ ಎಂದು ಮುಚ್ಚಿಹಾಕಲು ಪ್ರಯತ್ನಿಸಿದರು.
ಆದರೆ ಈ ಭಾಗದಲ್ಲಿ ಪರಿಸರ ಸಂರಕ್ಷಣೆಗಾಗಿ ಕೆರೆ ಸುತ್ತ ಫೆ.19ರಂದು ಮಕ್ಕಳು, ವೃದ್ಧರು, ಪರಿಸರ ಬಗ್ಗೆ ಕಾಳಜಿ ಇರುವ ಜಾಗೃತ ನಾಗರೀಕರು ಹೋರಾಟ ಮಾಡಿದರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿರುವುದು ಅಪರಾಧವಂತೆ. ಯಾವುದೇ ದೂರು ಇಲ್ಲದಿದ್ದರೂ ಸುಮೋಟೋ ಪ್ರಕರಣ ದಾಖಲಿಸಿ ಕೇಸ್ ಹಾಕಲಾಗಿದೆ ಎಂದರು.
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಾಂಗಾರ್ ಮಾತನಾಡಿ, ಇಂತಹ ಬೆದರಿಕೆ ಇದೇ ಮೊದಲಲ್ಲ. ಅನೇಕ ವಿಚಾರವಾಗಿ ಹೆದರಿಸುತ್ತಿದ್ದಾರೆ. ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಮೇ 13ರ ನಂತರ ನಾನು ಯಾರು ಎಂದು ತೋರಿಸುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಹಾಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಾಡುವುದೇಕೆ? ಎಂದು ಪ್ರತಿಕ್ರಿಯಿಸಿದರು.