ಕಲಬುರಗಿ: ಪಠ್ಯ ಪರಿಷ್ಕರಣೆ ವಿರೋಧಿಸಿ ಜೂನ್ 15ರಂದು ಬೆಳಗ್ಗೆ 10 ಗಂಟೆಯಿಂದ ಜೂನ್ 16ರಂದು ಬೆಳಗ್ಗೆ 10 ಗಂಟೆವರೆಗೆ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ಮೂಲಕ ಬಿಜೆಪಿ ಸರ್ಕಾರ ಕರ್ನಾಟಕ ಅಸ್ಮಿತೆಯನ್ನು ಅಳಿಸುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಕರ್ನಾಟಕ ಅಸ್ಮಿತೆ ರಕ್ಷಣೆ ಜನಾಂದೋಲನ ಸಮಿತಿಯಿಂದ ಪಕ್ಷಭೇದ ಮರೆತು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಮಕ್ಕಳ ಪಾಲಕರು, ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಪಠ್ಯಪುಸ್ತಕದಲ್ಲಿ ಕರ್ನಾಟಕದ ಅಸ್ಮಿತೆಯನ್ನು ಅಳಿಸುವ ಯತ್ನ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು, ಸಮಾನತೆಯ ಹರಿಕಾರರ ಜೀವನ ಚರಿತ್ರೆ ತಿರುಚಿ ಹಿಂದುತ್ವದ ಪರ ಬ್ಯಾಟಿಂಗ್ ಮಾಡುವ ಮೂಲಕ ಶಿಕ್ಷಣ ಕೇಸರೀಕರಣಕ್ಕೆ ಬಿಜೆಪಿ ಸರ್ಕಾರ ಹೊರಟಿದೆ. ಬಾಲ್ಯದಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಪಾಠ ಮಾಡಿದರೆ ಮುಂದೆ ಅದೇ ಮಕ್ಕಳು ನಮಗೆ ಸಹಾಯಕ್ಕೆ ಬರುತ್ತಾರೆ ಎಂಬ ಭಾವನೆ ಅವರಿಗಿದೆ. ಪಠ್ಯಪುಸ್ತಕದಲ್ಲಿ ಬಸವಣ್ಣ ಅವರಿಗೆ ಅವಮಾನ ಮಾಡಲಾಗಿದ್ದು, ಬುದ್ಧ ಹಾಗೂ ಮಹಾವೀರ ಅವರನ್ನು ಏಕ ವಚನದಲ್ಲಿ ಸಂಬೋಧಿಸಿದ್ದು, ಎಲ್ಲ ಧರ್ಮದ ಬೇರುಗಳು ಹಿಂದುತ್ವದಲ್ಲಿವೆ, ಉಳಿದ ಧರ್ಮಗಳು ಶಾಖೆಗಳು ಎಂದು ಬರೆದಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಪಾದಯಾತ್ರೆ: ಕುವೆಂಪು ಹಾಗೂ ನಾಡಗೀತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಚಕ್ರತೀರ್ಥ ಆಕ್ಷೇಪಾರ್ಹ ಬರಹ ಹಾಕಿ ಅವಮಾನ ಮಾಡಿರುವುದನ್ನು ವಿರೋಧಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಜೂ.15ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 18 ಕಿ.ಮೀ ಪಾದಯಾತ್ರೆ ಸಾಗಿ ತೀರ್ಥಹಳ್ಳಿಯಲ್ಲಿ ಬೃಹತ್ ಬಹಿರಂಗ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ವೈ.ಎಎಸ್.ವಿ ದತ್ತ ಸೇರಿ ಹಲವು ನಾಯಕರು ಹಾಗೂ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇವರಿಗೆ ರಾಮ ಬೇಕು, ಆದರೆ ರಾಮಾಯಣ ಬರೆದ ವಾಲ್ಮೀಕಿ ಬೇಡ. ಆರ್‌ಎಸ್‌ಎಸ್ ರಾಮಲೀಲ ಮೈದಾನದಲ್ಲಿ ಸಂವಿಧಾನ ಇರಬಾರದು, ಸಂವಿಧಾನವನ್ನು ಸುಟ್ಟು ಮನುಸ್ಮೃತಿಯೇ ನಮ್ಮ ಸಂವಿಧಾನ ಅಂತ ಆರ್‌ಎಸ್‌ಎಸ್ ಪ್ರತಿಪಾದನೆ ಮಾಡಿತ್ತು. ಮಕ್ಕಳ ಪುಸ್ತಕದಲ್ಲಿ ಸಮಾಜವು ಹೇಗೆ ಸಾಗಬೇಕು ಎಂದು ಹೆಡ್ಗೇವಾರ್ ಪಠ್ಯ ಹಾಕಲಾಗಿದೆ. ಆದರೆ ನಾವು ಮನುಸ್ಮೃತಿ ಒಪ್ಪಲ್ಲ. ಶಂಕರಚಾರ್ಯ, ವಾಲ್ಮೀಕಿ, ಬಸವಣ್ಣ, ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ. ಇದಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ |ಇತಿಹಾಸವನ್ನು ತಿರುಚಿ ಬರೆದ ಪಠ್ಯ ಪುಸ್ತಕ: ರಾಮಲಿಂಗಾರೆಡ್ಡಿ ಆರೋಪ