ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ (Bangalore Mysore Expressway Toll) ಶುಲ್ಕವನ್ನು ಶೇಕಡಾ 22ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ. ಇನ್ನು 15 ದಿನದಲ್ಲಿ ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಎಲ್ಲ ಟೋಲ್‌ಗಳನ್ನು ಬಂದ್ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಜೂನ್ 1ರಿಂದ ಜಾರಿಗೆ ಬರುವಂತೆ ಹೆದ್ದಾರಿ ಪ್ರಾಧಿಕಾರವು ಸದ್ದಿಲ್ಲದೆ ಶೇಕಡಾ 22ರಷ್ಟು ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವೇಳೆ ಪ್ರತಿಭಟನಾಕಾರರಿಂದ ರಸ್ತೆ ಬಂದ್ ಮಾಡಲು ಯತ್ನ ಮಾಡಲಾಗಿದೆ. ಅಲ್ಲದೆ, ಟೋಲ್ ರಸ್ತೆಗೆ ಅಡ್ಡಲಾಗಿ ಕೆಲವರು ಓಡಿದ್ದಾರೆ. ಅಡ್ಡಲಾಗಿ ಬಂದವರನ್ನು ತಡೆದ ಪೊಲೀಸರು ಅವರನ್ನು ಬಸ್ ಹತ್ತಿಸಿದ್ದರು.
ಇದನ್ನೂ ಓದಿ: Love Jihad: ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಬ್ಯಾಕ್ ಸೈಟ್: ಆರ್. ಅಶೋಕ್
ತಮಟೆ, ನಗಾರಿ ಬಾರಿಸಿದರು
ತಮಟೆ, ನಗಾರಿ ಬಾರಿಸುವ ಮೂಲಕ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ತಮ್ಮ ಆಕ್ರೋಶವನ್ನು ಹೊರಹಾಕಿದವು. ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಬಳಿ ಪ್ರತಿಭಟನೆ ನಡೆಸಲಾಗಿದೆ. ಸಂಜೆವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದು ಕುಳಿತರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನೂ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಇನ್ನು ಕಣಮಿಣಕೆ ಟೋಲ್ ಬಳಿ ರಸ್ತೆಯಲ್ಲಿ ಉರುಳುಸೇವೆ ಮಾಡಿ ಆಕ್ರೋಶವನ್ನು ಹೊರಹಾಕಲಾಯಿತು.
30ಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರಿಂದ ಪ್ರತಿಭಟನೆ ನಡೆಸಲಾಗಿದೆ. ಕನ್ನಡಪರ ಹೋರಾಟಗಾರ ನರಸಿಂಹ ಮೂರ್ತಿ ಸೇರಿದಂತೆ ಹಲವರು ಸಾಥ್ ನೀಡಿದ್ದರು.
ಪ್ರತಿಭಟನಾಕಾರರ ಮನವಿ ಏನು?
-ಟೋಲ್ ರಸ್ತೆಯಲ್ಲಿ ಮೂಲಭೂತ ಸೌಕರ್ಯ ನೀಡುವುದು
-ಟೋಲ್ ಶುಲ್ಕ ಹೆಚ್ಚಳದಿಂದ ಜನರಿಗೆ ಹೊರೆಯಾಗಿದೆ
-ಜೂನ್‌ನಿಂದ ಹೆಚ್ಚಿನ ಟೋಲ್ ಹಿಂಪಡೆಯುವುದು
-ಹಳೇ ಶುಲ್ಕಕ್ಕಿಂತ ಕಡಿಮೆ ಟೋಲ್ ನಿಗದಿ ಮಾಡುವುದು
-ರೈತರು, ಸ್ಥಳೀಯರು, ಕನ್ನಡ ಹೋರಾಟಗಾರರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು
ಇದನ್ನೂ ಓದಿ: Video Viral: ಕಳ್ಳಿಯ ʼಶಕ್ತಿʼ ಪ್ರದರ್ಶನ; ಮಾಂಗಲ್ಯ ಕದ್ದು ನಾನವಳಲ್ಲ ಎಂದವಳ ಜುಟ್ಟು ಹಿಡಿದಳು!
ಈ ಮನವಿಗೆ ಸ್ಪಂದಿಸದಿದ್ದರೆ ಎಲ್ಲ ಟೋಲ್‌ಗಳನ್ನು ಬಂದ್ ಮಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಈ ಬೇಡಿಕೆ ಈಡೇರಿಕೆಗೆ 15 ದಿನಗಳ ಗಡುವು ನೀಡಲಾಗಿದೆ. 15 ದಿನದೊಳಗೆ ಉತ್ತರ ಬರದಿದ್ದರೆ ಮತ್ತೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ.