Site icon Vistara News

Pro-Palestinian Protest: ಬೆಂಗಳೂರಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ; ಮಹಿಳೆಯರು ಸೇರಿ ಹಲವರು ವಶಕ್ಕೆ

Pro-Palestinian Protest

ಬೆಂಗಳೂರು: ನಗರದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ (Pro-Palestinian Protest) ನಡೆಸುತ್ತಿದ್ದ ಮಹಿಳೆಯರು ಸೇರಿ ಹಲವರನ್ನು ವಶಕ್ಕೆ ಪಡೆದ ಘಟನೆ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಪ್ರತಿಭಟನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ದಾಳಿ ಖಂಡಿಸಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಅದೇ ರೀತಿ ನಗರದ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರು ಸೇರಿ ಹಲವರು ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ. ನಂತರ ಠಾಣೆಗೆ ಕರೆದೊಯ್ದ ವೇಳೆ ಪ್ಯಾಲೆಸ್ತೀನ್‌ ಪರ ಘೋಷಣೆ ಕೂಗಿ ಮಹಿಳೆ ಹೈಡ್ರಾಮಾ ಸೃಷ್ಟಿಸಿದ್ದಾಳೆ.

ಪ್ಯಾಲೆಸ್ತೀನ್‌ ಪರ ʼಆಲ್‌ ಐಸ್‌ ಆನ್‌ ರಫಾʼ ಅಭಿಯಾನ

ದಕ್ಷಿಣ ಗಾಝಾ ನಗರವಾದ ರಫಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ವಾಯು ದಾಳಿ ಬಗ್ಗೆ ಹಲವು ದೇಶಗಳಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ʼಆಲ್‌ ಐಸ್‌ ಆನ್‌ ರಫಾʼ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲವರು ರಫಾ ನಗರದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಪ್ಯಾಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

‘ಆಲ್ ಐಸ್ ಆನ್ ರಫಾ’ ಚಿತ್ರವು ಗಾಝಾದ ದಕ್ಷಿಣದಲ್ಲಿರುವ ರಾಫಾ ನಗರದ ನಿರಾಶ್ರಿತರ ಶಿಬಿರದಲ್ಲಿ ಡೇರೆಗಳನ್ನು ತೋರಿಸುತ್ತದೆ, ಅಲ್ಲಿ ಇಸ್ರೇಲ್‌ನಿಂದ ನಡೆಯುತ್ತಿರುವ ದಾಳಿಯ ನಂತರ ಅನೇಕ ಪ್ಯಾಲೆಸ್ತೀನೀಯರು ಸ್ಥಳಾಂತರಗೊಂಡಿದ್ದಾರೆ. ‘ರಫಾ ಮೇಲೆ ಎಲ್ಲರ ಕಣ್ಣುಗಳು’ ಚಿತ್ರವು ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಕರೆ ನೀಡುತ್ತದೆ.

ಇದನ್ನೂ ಓದಿ | Congress leader Celebration: ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿದ ಕಾಂಗ್ರೆಸ್‌ ಮುಖಂಡ; ವಿಡಿಯೊ ವೈರಲ್‌

ರಫಾವನ್ನು ಹಮಾಸ್‌ ಉಗ್ರರ ಭದ್ರಕೋಟೆ ಎಂದಿದ್ದ ಇಸ್ರೇಲ್‌ ಪ್ರಧಾನಿ ನೆತನ್ಯಾಹು, ಅದನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದರು. ಈ ಪ್ರದೇಶದಲ್ಲಿ ಸುಮಾರು 14 ದಶಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಆಶ್ರಯ ಪಡೆದಿದ್ದು, ಇಸ್ರೇಲ್‌ ನಡೆಸಿದ ದಾಳಿಯಲ್ಲಿ 45ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ನ ಇತ್ತೀಚಿನ ದಾಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಈ ಸಾಲಿನಲ್ಲಿ ಹಲವು ಭಾರತೀಯ ಸೆಲೆಬ್ರಿಟಿಗಳು ಸಹ ಸೇರಿದ್ದಾರೆ.

Exit mobile version