ಬೆಂಗಳೂರು: ಕೋಳಿ ಉದ್ಯಮ ಸಂಕಷ್ಟದಲ್ಲಿದ್ದು, ಮೊಟ್ಟೆ ಹಾಗೂ ಕೋಳಿಯ ಬೆಲೆ (World Egg Day) ಸಾಕಷ್ಟು ಏರಿಳಿತ ಕಾಣುತ್ತಿದೆ. ಈ ಸಮಸ್ಯೆಗಳ ಜತೆಗೆ ಪಶುವೈದ್ಯಕೀಯ ಕಾಲೇಜುಗಳ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಹೆಬ್ಬಾಳದ ಪಶುವೈದ್ಯಕೀಯ ಪರಿಷತ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮೊಟ್ಟೆ ದಿನಾಚರಣೆ (World Egg Day) ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಪಶು ವೈದ್ಯರ ಸಂಖ್ಯೆ ಕಡಿಮೆ ಇದೆ. ಆದ ಕಾರಣ ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿ ಎಂದು ಖಾಸಗಿಯವರ ಬಳಿ ಮನವಿ ಮಾಡಿದ್ದೆ, ಅವರು ನೂರಾರು ಕೋಟಿ ಬೇಕಾಗುತ್ತದೆ ಎಂದರು. ಈ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. ಪಶುವೈದ್ಯರಿಗೆ ಸಾಕಷ್ಟು ಬೇಡಿಕೆ ಇದ್ದು, ನೀವು ಭರವಸೆ ಕಳೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಭರವಸೆಯ ಮಾತುಗಳನ್ನಾಡಿದರು.
ಇಲ್ಲಿಗೆ ಬಂದ ಒಂದಷ್ಟು ಜನ ರೈತರನ್ನು ಮಾತನಾಡಿಸಿದೆ. ಅನೇಕರು 20,000 ದಿಂದ 50,000 ತನಕ ಕೋಳಿ ಸಾಕಾಣಿಕೆ ಮಾಡುತ್ತಿರುವುದಾಗಿ ತಿಳಿಸಿದರು. ಕೋಳಿ ಆಹಾರದ ಬೆಲೆಯು ಈಗ ಹೆಚ್ಚಳವಾಗುತ್ತಿದೆ, ಒಂದೆರಡು ದಿನ ಆರೈಕೆ ಕಡಿಮೆಯಾದರೆ ತೂಕದಲ್ಲಿ ವ್ಯತ್ಯಾಸವಾಗುತ್ತದೆ, ಈ ಕ್ಷೇತ್ರದ ಬಗ್ಗೆ ನನಗೆ ಅರಿವಿರುವ ಕಾರಣ ಇಷ್ಟೆಲ್ಲಾ ಅಂಶಗಳನ್ನು ನಾನು ಉಲ್ಲೇಖಿಸುತ್ತಿದ್ದೇನೆ. ರೈತರಿಗೆ ಕೃಷಿಯ ಜತೆಗೆ ಉಪ ಕಸುಬಾಗಿ ಇದು ಬೆಳೆಯುವ ರೀತಿ ಯೋಜನೆ ರೂಪಿಸೋಣ ಎಂದರು.
ಇದನ್ನೂ ಓದಿ | Load Shedding : ರಾಜ್ಯದಲ್ಲಿ 1500 ಮೆಗಾ ವ್ಯಾಟ್ ಕೊರತೆ; ಇಂಧನ ಖರೀದಿಗೆ ಮುಂದಾಗಿದ್ದೇವೆಂದ ಜಾರ್ಜ್
ಮಾಂಸ ತಿನ್ನುವುದನ್ನು ಬಿಟ್ಟಿದ್ದೇನೆ
ನಾನು ನಂಬಿದ ದೈವ ನೀವು ಸಸ್ಯಹಾರಿಯಾಗಿರಬೇಕು ಎಂದು ಹೇಳಿದ ಕಾರಣ ಮಾಂಸ ತಿನ್ನುವುದನ್ನು ಬಿಟ್ಟಿದ್ದೇನೆ. ಆದರೆ, ಈ ದೇಶದ ಬಹುತೇಕ ಜನರ ಆಹಾರ ಕ್ರಮವನ್ನು ಗೌರವಿಸುತ್ತೇನೆ ಎಂದ ಅವರು, ನನ್ನ ವ್ಯಾವಹಾರಿಕ ಜೀವನ ಪ್ರಾರಂಭವಾಗಿದ್ದೇ ಕೋಳಿ ಫಾರಂನಿಂದ. ಪಿಯು ರಜೆ ವೇಳೆಯಲ್ಲಿ ಇದೇ ಸಂಸ್ಥೆಯಲ್ಲಿ 15 ದಿನಗಳ ಕಾಲ ಕೋಳಿ ಸಾಕಾಣಿಕೆಯ ಬಗ್ಗೆ ತರಬೇತಿ ಪಡೆದಿದ್ದೆ ಎಂದು ಹಳೆಯ ನೆನಪಿಗೆ ಡಿಸಿಎಂ ಜಾರಿದರು.
ತರಬೇತಿ ಪಡೆದ ನಂತರ ಬ್ಯಾಂಕ್‌ನಲ್ಲಿ ಸಾಲ ಪಡೆದು ಸುಂಕದಕಟ್ಟೆ- ಹೆಗ್ಗನಹಳ್ಳಿಯಲ್ಲಿ ಕೋಳಿ ಫಾರಂ ಸ್ಥಾಪಿಸಿದೆ. ಅದರಲ್ಲಿ ನಷ್ಟವಾಯಿತು. ಅದಕ್ಕೆ ಆ ವ್ಯವಹಾರ ಬಿಟ್ಟುಬಿಟ್ಟೆ. ಆನಂತರ ನಮ್ಮ ತಂದೆ- ತಾಯಿ ಊರಿನ ಜಮೀನಿನಲ್ಲಿ ಐದು ಶೆಡ್‌ಗಳನ್ನು ನಿರ್ಮಾಣ ಮಾಡಿದ್ದರು, ನಾನು ನನ್ನ ತಮ್ಮ ಕೆಲಸದ ಒತ್ತಡದ ನಡುವೆ ನೋಡಿಕೊಳ್ಳಲು ಹೋಗಲಿಲ್ಲ. ನನಗೂ ಹಾಗೂ ಈ ಕೋಳಿ ವ್ಯವಹಾರಕ್ಕೂ ಅವಿನಾಭಾವ ಸಂಬಂಧವಿದೆ ಜೀವನದ ಘಟನೆಗಳನ್ನು ಸ್ಮರಿಸಿಕೊಂಡರು.
ಮೊಟ್ಟೆಯನು ತಿನ್ನುವವನು ಜಟ್ಟಿಯಂತಾಗುವನು
ಹಿಟ್ಟನ್ನು (ಮುದ್ದೆ) ಉಂಬುವನು ಬೆಟ್ಟವನು ಎತ್ತುವನು, ಜೋಳವನು ತಿನ್ನುವವನು, ತೋಳದಂತಾಗುವನು. ಅದೇ ರೀತಿ ಮೊಟ್ಟೆಯನು ತಿನ್ನುವವನು ಜಟ್ಟಿಯಂತಾಗುವನು ಎಂದು ಹಿರಿಯರು ಹೇಳುತ್ತಾ ಇದ್ದರು. ಅಂದರೆ ನಮ್ಮ ಆಹಾರದಂತೆ ಆರೋಗ್ಯ ಇರುತ್ತದೆ. ಒಂದೇ ನಾಣ್ಯದ ಎರಡು ಮುಖಗಳು ಇವು. ಯಾವುದನ್ನೂ ಕಡೆಗಣನೆ ಮಾಡಬಾರದು. ಕೋಳಿ, ಕುರಿ, ಮೇಕೆ ಸೇರಿ ಮಾಂಸಾಹಾರಕ್ಕೆ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ. ಇದೆಲ್ಲಾ ಇರದೆ ಇದ್ದರೆ ಸಮೂಹತನ ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಸಣ್ಣ ರೋಗದ ಸುದ್ದಿ ಹಬ್ಬಿದರೂ ಮೊದಲು ನಾಶ ಮಾಡುವುದೇ ಕೋಳಿಗಳನ್ನು. ಸರ್ಕಾರಕ್ಕೆ ಇದರ ಬಗ್ಗೆ ಅರಿವಿದೆ, ಎಲ್ಲರ ಜತೆ ಚರ್ಚೆ ಮಾಡಿ ಪರಿಹಾರ ಸೂತ್ರ ಕಂಡುಹಿಡಿಯಲಾಗುವುದು ಎಂದ ಅವರು, ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಕೊಬ್ಬು ಹೆಚ್ಚಿಲ್ಲದ ಮೊಟ್ಟೆ ಪ್ರಯೋಗ ನಡೆದಿತ್ತು. ಅದನ್ನು ಪರಿಚಯಿಸುವ ಸಭೆಯನ್ನು ಕರೆಯಲಾಗಿತ್ತು, ಆದರೆ ನನಗೆ ಆಗ ಅದರ ಬಗ್ಗೆ ಹೆಚ್ಚು ಜ್ಞಾನವಿರಲಿಲ್ಲ. ಇತ್ತೀಚೆಗೆ ನನ್ನ ಮಕ್ಕಳು ಗಿಡದಲ್ಲಿ ಮೊಟ್ಟೆ ಬೆಳೆಯುತ್ತಿದ್ದಾರೆ ಎಂದು ಒಂದು ವಿಡಿಯೋ ತೋರಿಸಿದರು. ಅದನ್ನು ನೋಡಿದ ನನಗೆ ಮನುಷ್ಯ ಪ್ರಕೃತಿಯ ವಿರುದ್ದ ಹೋಗುತ್ತಿದ್ದಾನಲ್ಲ ಎಂದು ಆಶ್ಚರ್ಯವಾಯಿತು. ಅದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ ಎಂದರು.
ಇದನ್ನೂ ಓದಿ | IT Raid: ರಾಜಕೀಯ ಉದ್ದೇಶವಿಲ್ಲದೆ ಯಾವುದೇ ಐಟಿ ದಾಳಿ ನಡೆಯಲ್ಲ: ಡಿ.ಕೆ. ಶಿವಕುಮಾರ್
ಅಶ್ವಂ ನೈವ ಗಜಂ ನೈವ, ವ್ಯಾಘ್ರಂ ನೈವ ಚ ನೈವ ಚ. ಅಜಾ ಪುತ್ರಂ ಬಲಿಂ ದದ್ಯಾತ್, ದೇವೋ ದುರ್ಬಲ ಘಾತಕಃ ಅಂದರೆ ನಮ್ಮ ಊರಿನಲ್ಲಿ ಕಬ್ಬಾಳಮ್ಮ, ಬೇರೆ ಕಡೆ ಮಾರಮ್ಮ ದೇವರಿದ್ದಾವೆ. ಈ ದೇವರುಗಳು ಬಲಿ ತೆಗೆದುಕೊಳ್ಳುವಾಗ, ಹೆಚ್ಚು ದುರ್ಬಲ ಪ್ರಾಣಿಗಳನ್ನು ತೆಗೆದುಕೊಳ್ಳುತ್ತದೆಯೇ ಹೊರತು, ಆನೆಯಂತಹ ಶಕ್ತಿಶಾಲಿ ಪ್ರಾಣಿಗಳನ್ನು ಮುಟ್ಟುವುದಿಲ್ಲ ಎಂಬುದು ಇದರ ಅರ್ಥ ಎಂದು ತಿಳಿಸಿದರು.