ಬೆಂಗಳೂರು: ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳ ಅಗತ್ಯವಿದ್ದು, ಮೂಲ ಸೌಕರ್ಯ ಸೇರಿದಂತೆ ತುರ್ತು ಅಗತ್ಯತೆ ಹಾಗೂ ಬದಲಾವಣೆಗಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ (Karnataka Budget) ಕೆಲವು ಅಂಶಗಳನ್ನು ಘೋಷಿಸುವ ಮೂಲಕ ಅನುದಾನವನ್ನು ಮೀಸಲಿಡಬೇಕು ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ ಮುಖ್ಯಮಂತ್ರಿಯವರಿಗೆ ಶಿಫಾರಸು ಪತ್ರ ಬರೆದಿದ್ದಾರೆ.
ಶಿಕ್ಷಣದ ಮೂಲ ಉದ್ದೇಶಗಳನ್ನು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಅನುಗುಣವಾಗಿ ರೂಪಿಸಲು ಈ ಬಾರಿಯ 2023-24ರ ಬಜೆಟ್‌ನಲ್ಲಿ ಕೆಲವು ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಅವರು ಕೋರಿದ್ದಾರೆ.
ದೊರೆಸ್ವಾಮಿ ಅವರ ಬೇಡಿಕೆಗಳು ಏನು?
೧. ಶಾಲೆಗಳ ಮೂಲಭೂತ ಸೌಕರ್ಯಗಳು (ತರಗತಿಯ ಕೊಠಡಿಗಳು, ಪೀಠೋಪಕರಣಗಳು, ಕಾಂಪೌಂಡ್, ಕುಡಿಯುವ ನೀರು, ಶೌಚಾಲಯ (ಬಾಲಕ, ಬಾಲಕಿಯರಿಗೆ ಪ್ರತ್ಯೇಕ), ಕಂಪ್ಯೂಟರ್ ಲ್ಯಾಬ್ ಇತ್ಯಾದಿಗಳಿಗೆ 10 ಸಾವಿರ ಕೋಟಿ ರೂಪಾಯಿ ನಿಗದಿಗೊಳಿಸುವುದು.
೨. ಶಾಲೆಗಳ ದುರಸ್ತಿ ಮತ್ತು ನಿರ್ವಹಣಿಗಾಗಿ ಪ್ರತ್ಯೇಕ ಅನುದಾನವಾಗಿ 3 ಸಾವಿರ ಕೋಟಿ ರೂಪಾಯಿ ನಿಗದಿಪಡಿಸುವುದು
೩. ಶಿಕ್ಷಣದ ಎಲ್ಲ ಹಂತಗಳಲ್ಲೂ ಮಾರ್ಗದರ್ಶಿತ್ವದ ಅಳವಡಿಕೆ
೪. ಯೋಗ ಮತ್ತು ಧ್ಯಾನಗಳನ್ನು ಶಿಕ್ಷಣದ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಳಿಸುವುದು
೫. ಮೌಲ್ಯ ಶಿಕ್ಷಣವನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ಘೋಷಣೆ ಮಾಡುವುದು
೬. ಸಾರ್ವಜನಿಕ ರಜಾ ದಿನಗಳನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಅರ್ಥಪೂರ್ಣ ಆಚರಣೆಗಾಗಿ ಕ್ರಮ ಕೈಗೊಳ್ಳುವುದು
ಈ ಮಾದರಿ ಕ್ರಮಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಅಳವಡಿಸಬೇಕು. ಅದರಲ್ಲಿಯೂ ಶಿಕ್ಷಣದ ಎಲ್ಲ ಹಂತಗಳಲ್ಲೂ ಮಾರ್ಗದರ್ಶಿತ್ವದ ಅಳವಡಿಕೆ, ಯೋಗ ಮತ್ತು ಧ್ಯಾನಗಳನ್ನು ಶಿಕ್ಷಣದ ಎಲ್ಲ ಹಂತಗಳಲ್ಲೂ ಅನುಷ್ಠಾನಗೊಳಿಸುವುದರಿಂದ, ಮೌಲ್ಯ ಶಿಕ್ಷಣವನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ಘೋಷಣೆ ಮಾಡುವುದರಿಂದ ಹಾಗೂ ಸಾರ್ವಜನಿಕ ರಜಾ ದಿನಗಳನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಅರ್ಥಪೂರ್ಣ ಆಚರಣೆಗಾಗಿ ಕ್ರಮ ಕೈಗೊಳ್ಳುವುದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊರೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.