Site icon Vistara News

ಲಿಂಗಧೀರನಹಳ್ಳಿ ಘನತ್ಯಾಜ್ಯ ಸಂಸ್ಕರಣ ಘಟಕ ವಿರೋಧಿಸಿ ಪ್ರತಿಭಟನೆ; ಸಿಎಂ ಗಮನಕ್ಕೆ ತಂದು ಸೂಕ್ತ ಪರಿಹಾರ ಕಲ್ಪಿಸುವೆ: ಸಚಿವ ಎಸ್‌ಟಿಎಸ್

ಬೆಂಗಳೂರು: ಲಿಂಗಧೀರನಹಳ್ಳಿ ಘನತ್ಯಾಜ್ಯ ಸಂಸ್ಕರಣ ಘಟಕದಿಂದ ಗಬ್ಬು ವಾಸನೆ ಬರುತ್ತಿದ್ದು, ಇದರ ಸುತ್ತಮುತ್ತ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಇದಕ್ಕೆ ಪರಿಹಾರವನ್ನು ಸೂಚಿಸಬೇಕು. ಇಲ್ಲವೇ ಘಟಕವನ್ನೇ ಬಂದ್‌ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಸಹಕಾರ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರವನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಬನಶಂಕರಿ 6ನೇ ಹಂತ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಲಿಂಗಧೀರನಹಳ್ಳಿ ಘನತ್ಯಾಜ್ಯ ಸಂಸ್ಕರಣ ಘಟಕದ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಘಟಕದಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಪ್ರತಿಭಟನಾಕಾರರ ಅಹವಾಲು ಆಲಿಸಿದರು.

ಬಳಿಕ ಮಾತನಾಡಿದ ಸಚಿವರು, ಘಟಕದಿಂದ ಆಗುತ್ತಿರುವ ಸಮಸ್ಯೆಗಳ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ದುರ್ವಾಸನೆ ತಡೆಗೆ ಕ್ರಮ ಕೈಗೊಳ್ಳಬೇಕು, ಇಲ್ಲವೇ ಕಸದ ಘಟಕ ಬಂದ್ ಮಾಡಿ ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಎಂಬುದು ಘಟಕದ ಸುತ್ತಮುತ್ತಲಿನ ನಿವಾಸಿಗಳ ಬೇಡಿಕೆಯಾಗಿದೆ ಎಂಬುದನ್ನೂ ಸಿಎಂಗೆ ತಿಳಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂದರು.‌

ಸದ್ಯ ಅಧಿವೇಶನ ನಡೆಯುತ್ತಿದೆ. ಬಜೆಟ್ ಮಂಡನೆ ಬಳಿಕ ಮುಖ್ಯಮಂತ್ರಿಗಳ ಬಳಿಗೆ ಸಂಘದ ಸದಸ್ಯರನ್ನು ಕರೆದೊಯ್ಯಲಾಗುವುದು. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಡುವಂತೆ ಸಚಿವರು ಮನವಿ ಮಾಡಿದರು.

ಇದನ್ನೂ ಓದಿ:Karnataka Election: ತಂದೆ ಇಲ್ಲದೆ 17 ವರ್ಷ ಆಗಿದೆ; ಡಿಕೆಶಿ ತಂದೆಯಂತೆ ನಿಂತು ಬೆಳೆಸಿದ್ದಾರೆ: ಐಶ್ವರ್ಯ ಮಹದೇವು

ವಸ್ತುಸ್ಥಿತಿ ಪರಿಶೀಲಿಸಿ ವರದಿ ನೀಡದೆ, ಘಟಕದ ಸುತ್ತಮುತ್ತ ವಾಸನೆ ಇಲ್ಲ ಎಂದು ಅಧಿಕಾರಿಗಳು ಕೋರ್ಟ್‌ಗೆ ವರದಿ ನೀಡಿದ್ದಾರೆ ಎಂಬ ಆರೋಪವಿದೆ. ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಘಟಕಕ್ಕೆ ಕಸ ವಿಲೇವಾರಿ ಆಗುವುದಿಲ್ಲ. ಘಟಕ ಬಂದ್ ಮಾಡುವುದೇ ಪರಿಹಾರವಾಗಿದೆ. ಈ ಕುರಿತಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Exit mobile version