ವಿಜಯಪುರ: ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ. ಅದಕ್ಕಾಗಿ ಪಂಚಮಸಾಲಿ ನಡಿಗೆ ಶಿಗ್ಗಾಂವಿ ಕಡೆಗೆ ಎಂಬ ಹೋರಾಟ ಹಮ್ಮಿಕೊಳ್ಳಲಾಗಿದೆ. ಜೂನ್ 27ರಂದು ಪ್ರತಿಭನೆ ನಡೆಯುವುದು ಖಚಿತ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಬೇಡಿಕೆ ಈಡೇರಿಸಿದರೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶೇಂಗಾ ಹೋಳಿಗೆ ತಿನ್ನಿಸುತ್ತೇವೆ ಎಂದು ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಮೀಸಲಾತಿಗಾಗಿ ಸಾಕಷ್ಟು ಹೋರಾಟವನ್ನು ಮಾಡಿದ್ದೇವೆ, ಹಲವು ಬಾರಿ ಗಡುವನ್ನೂ ನೀಡಿದ್ದೇವೆ. ಇದ್ಯಾವುದಕ್ಕೂ ಸಿಎಂ ಗಮನ ಕೊಡದ ಹಿನ್ನೆಲೆಯಲ್ಲಿ ಜೂನ್ 27ಕ್ಕೆ ಶಿಗ್ಗಾಂವಿಯಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮನೆಯ ಎದುರು ಹೋರಾಟ ಆರಂಭ ಮಾಡುತ್ತೇವೆ. ಈ ಹಿನ್ನಲೆಯಲ್ಲಿ ಪಂಚಮಸಾಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ನಮ್ಮ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ, ಅಲ್ಲದೇ ಮೀಸಲಾತಿ ಬಗ್ಗೆ ಜೂನ್27 ರೊಳಗೆ ಸಿಎಂ ಬೊಮ್ಮಾಯಿ ತಿಳಿಸಬೇಕು. ಇಲ್ಲದೇ ಹೋದರೆ ಹೋರಾಟ ಖಚಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮೀಸಲಾತಿ ದೊರಕಿದರೆ ಬೃಹತ್ ಜನಸಮೂಹದಲ್ಲಿ ಸರ್ಕಾರಕ್ಕೆ ಸನ್ಮಾನ ನೆರವೇರಿಸಲಾಗುವುದು. ಮುಖ್ಯಮಂತ್ರಿಗಳಿಗೆ ಶೇಂಗಾ ಹೋಳಿಗೆ ತಿನಿಸಿ, ಕಲ್ಲು ಸಕ್ಕರೆ ತುಲಾಭಾರ ನೆರವೇರಿಸಲಾಗುವುದು. ಇಲ್ಲದಿದ್ದರೆ ಬೆಂಗಳೂರಿನಲ್ಲಿ 25 ಲಕ್ಷ ಜನ ಸೇರಿಸಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು. ಇನ್ನೂ ಪಂಚಮಸಾಲಿಯ 80% ಜನರು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತಾರೆ. ಪಂಚಮಸಾಲಿ ಸಮಾಜವನ್ನು ಕೇವಲ ಮತ ಬ್ಯಾಂಕಿಗೆ ಬಳಸುತ್ತಿದ್ದಾರೆ. ಮೀಸಲಾತಿ ಸಿಗದೇ ಹೋದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಇದನ್ನೂ ಓದಿ | ಸರ್ಕಾರದ ಹೊರಗುತ್ತಿಗೆ ಹುದ್ದೆಗಳಲ್ಲಿಯೂ ಮಹಿಳೆಯರಿಗೆ ಶೇ.33 ಮೀಸಲು ಜಾರಿ