Site icon Vistara News

ಮಂಡ್ಯ ಎಸ್‌ಪಿಗೆ ತಟ್ಟಿದ ಪ್ರತಿಭಟನೆ‌ ಬಿಸಿ; ಕಾಲ್ನಡಿಗೆಯಲ್ಲೇ ಡಿಸಿ ಕಚೇರಿಗೆ ತಲುಪಿದರು

ಮಂಡ್ಯ

ಮಂಡ್ಯ: ವಿವಿಧ ಸಂಘಟನೆಗಳಿಂದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್.ಯತೀಶ್ ಕಾರು ಬಿಟ್ಟು ಕಾಲ್ನಡಿಗೆಯಲ್ಲಿಯೇ ಜಿಲ್ಲಾಧಿಕಾರಿ ಕಚೇರಿಗೆ ತಲುಪಬೇಕಾದ ಅನಿವಾರ್ಯತೆ ಎದುರಾಯಿತು.

ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಹಿಂದುಪರ ಸಂಘಟನೆಗಳು ನಗರದಲ್ಲಿ ಸರ್ಕಾರಿ ಬಾಲಕಿಯರ ಕಾಲೇಜಿನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದವು. ಮತ್ತೊಂದೆಡೆ ರೈತರಿಂದ ಬೆಲ್ಲದ ಮೇಲಿನ ಜಿಎಸ್‍ಟಿ ವಾಪಸ್ ಪಡೆಯುಲು, ಟನ್‍ ಕಬ್ಬಿಗೆ 4500 ರೂ. ವೈಜ್ಞಾನಿಕ ಬೆಲೆ ನಿಗದಿ ಹಾಗೂ ಎಪಿಎಂಸಿಯಲ್ಲಿ ಪಾರದರ್ಶಕ ವಹಿವಾಟಿಗೆ ಕ್ರಮಕ್ಕೆ ಒತ್ತಾಯಿಸಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿದರು.

ಇದನ್ನೂ ಓದಿ | ಸಂಜಯ್‌ ರಾವತ್‌ ಬಂಧನ ವಿರೋಧಿಸಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಲು ಶಿವಸೇನೆ ಸಿದ್ಧತೆ

ಮುಖ್ಯರಸ್ತೆಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಆದ್ದರಿಂದ ಎಸ್‌ಪಿ ಎನ್.ಯತೀಶ್ ಕಾರು ಬಿಟ್ಟು ವಿನೋಬಾ ರಸ್ತೆಯಿಂದ 600 ಮೀ. ನಡೆದುಕೊಂಡು ಹೋಗಿ ಡಿಸಿ ಕಚೇರಿಗೆ ತಲುಪಿದರು.

ಇದಿಷ್ಟೇ ಅಲ್ಲದೆ ಸಿಐಟಿಯು ಸಂಘಟನೆಯಿಂದ ಸಾವಿರಾರು ಕಾರ್ಯಕರ್ತರು ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಡಿಸಿ ಕಚೇರಿವರೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಸಂಜಯ್ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದಲ್ಲಿ ನಡೆದ ಈ ಸರಣಿ ಪ್ರತಿಭಟನೆಗಳಿಂದ ಸಾರ್ವಜನಿಕರು ಒಂದೆಡೆ ಪರದಾಡುವ ಸ್ಥಿತಿ ನಿರ್ಮಾಣವಾದರೆ, ಮತ್ತೊಂದೆಡೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.

ಇದನ್ನೂ ಓದಿ | OBC Reservation | ಪಟ್ಟುಹಿಡಿದ ವೀರಶೈವ ಸಮುದಾಯದಿಂದ ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ

Exit mobile version