Site icon Vistara News

ಯಡೇಹಳ್ಳಿ ಪಿಡಿಒ ನಿಯೋಜನೆ ಗಲಾಟೆ; ವಿರೋಧಿಸಿ ಪಾದಯಾತ್ರೆ, ಪರವಾಗಿ ಧರಣಿ

protest

ಸಾಗರ: ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಪಿಡಿಒ ನಿಯೋಜನೆ ಮತ್ತು ವರ್ಗಾವಣೆ ಸಂಬಂಧ ನಾ ಕೊಡೆ ನೀ ಬಿಡೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಪರ-ವಿರೋಧ ಪ್ರತಿಭಟನೆಗಳು ಸಹ ನಡೆದಿವೆ.

ಪಂಚಾಯಿತಿ ಪಿಡಿಒ ಇಂದಿರಾಜ್ಯೋತಿ ಅವರ ನಿಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ನೇತೃತ್ವದಲ್ಲಿ ಪಂಚಾಯ್ತಿ ಅಧ್ಯಕ್ಷ ಗಣಪತಿ ಇರುವಕ್ಕಿ ಇನ್ನಿತರರು ಪ್ರತಿಭಟನೆ ನಡೆಸಿದ್ದಲ್ಲದೆ, ಸೋಮವಾರ ಯಡೇಹಳ್ಳಿಯಿಂದ ಸಾಗರದವರೆಗೆ ಹಕ್ಕೊತ್ತಾಯದ ಪಾದಯಾತ್ರೆಯನ್ನೂ ನಡೆಸಿದ್ದಾರೆ. ಪಿಡಿಒ ನಿಯೋಜನೆ ಮಾಡಿರುವ ತಾಲೂಕು ಪಂಚಾಯಿತಿ ಇಒ ವಿರುದ್ಧ ಇದೇ ಸಂದರ್ಭದಲ್ಲಿ ಕಿಡಿಕಾರಿದ್ದಾರೆ.


ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದು, “ಇಒ ಹಠಾವೋ, ಗ್ರಾಮ ಪಂಚಾಯ್ತಿ ಬಚಾವೋ” ಎಂಬ ಘೋಷಣೆಯನ್ನು ಕೂಗಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, “ಕೆಲವು ಬಿಜೆಪಿ ಪ್ರಮುಖರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇಂದಿರಾಜ್ಯೋತಿ ಅವರನ್ನು ಪಿಡಿಒ ಆಗಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆನಂದಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪಿಡಿೊ ಇಂದಿರಾ ಜ್ಯೋತಿ ಮೇಲೆ ಸಾಕಷ್ಟು ದೂರುಗಳಿದ್ದವು. ಅಂತಹ ಪಿಡಿಒ ಅವರನ್ನು ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ನಿಯೋಜನೆ ಮಾಡುವುದು ಬೇಡ ಎಂದು ನಾವು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ನಿಯೋಜನೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದ್ದ ಇಒ ಈತನಕ ಮೌನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಪಿಡಿಒ ಇಂದಿರಾಜ್ಯೋತಿ ನಿಯೋಜನೆ ರದ್ದು ಮಾಡಬೇಕು. ಬೇಡಿಕೆ ಈಡೇರುವ ತನಕ ತಾಲೂಕು ಪಂಚಾಯಿತಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ರತ್ನಾಕರ ಹೊನಗೋಡು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿ ಕುಗ್ವೆ, ಗಣಪತಿ ಇರುವಕ್ಕಿ, ಜ್ಯೋತಿ ಕೋವಿ, ಪ್ರಕಾಶ್ ಲ್ಯಾವಿಗೆರೆ, ಭರ್ಮಪ್ಪ ಅಂದಾಸುರ, ನಟರಾಜ ಗೇರುಬೀಸು, ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಇದನ್ನೂ ಓದಿ : Midday Meal Scheme Protest | ಸಿಎಂ ಭರವಸೆಗೆ ಪ್ರತಿಭಟನೆ ಕೈಬಿಟ್ಟ ಬಿಸಿಯೂಟ ನೌಕರರು

ನಿಯೋಜನೆ ಪರವೂ ಧರಣಿ:

ಇತ್ತ ಯಡೇಹಳ್ಳಿ ಪಂಚಾಯಿತಿ ಎದುರು ಪಿಡಿಒ ಇಂದಿರಾಜ್ಯೋತಿ ನಿಯೋಜನೆ ಸ್ವಾಗತಿಸಿ, ಹಾಲಿ ಪಿಡಿಒ ಕುಮಾರ್ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಧರಣಿ ನಡೆದಿದೆ. ಸೋಮವಾರ ಆರು ಗ್ರಾಮ ಪಂಚಾಯಿತಿ ಸದಸ್ಯರು ಯಡೇಹಳ್ಳಿ ಗ್ರಾಮ ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಅರುಣ್‍ಕುಮಾರ್ ಮಾತನಾಡಿ, ಇಂದಿರಾ ಜ್ಯೋತಿ ವರ್ಗಾವಣೆಯಾಗಿ ಬಂದ ತಕ್ಷಣ ಅವರು ಕರ್ತವ್ಯ ಸರಿಯಾಗಿ ಮಾಡುತ್ತಿಲ್ಲ ಎಂದು ಕೆಲವರು ಆರೋಪ ಮಾಡುತ್ತಿರುವುದು ಸರಿಯಲ್ಲ. ಒಂದೊಮ್ಮೆ ಇಂದಿರಾಜ್ಯೋತಿ ಸಾರ್ವಜನಿಕರಿಗೆ ಸ್ಪಂದಿಸದೆ ಇದ್ದಲ್ಲಿ ಪ್ರತಿಭಟನೆ ನಡೆಸಲಿ. ಅನಗತ್ಯವಾಗಿ ಅವರ ವಿರುದ್ಧ ಆರೋಪ ಮಾಡಿ ನಿಯೋಜನೆ ತಡೆಯುವುದರ ಹಿಂದೆ ರತ್ನಾಕರ ಹೊನಗೋಡು ಇನ್ನಿತರರ ವೈಯಕ್ತಿಕ ಹಿತಾಸಕ್ತಿ ಅಡಗಿದೆ. ಈ ಎಲ್ಲ ಘಟನೆಗಳ ಹಿಂದೆ ಪಿಡಿಒ ಕುಮಾರ್ ಪಾತ್ರ ಇದ್ದು, ತಕ್ಷಣ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.

ಗ್ರಾಪಂ ಸದಸ್ಯ ನಾರಿ ಲೋಕಪ್ಪ ಮಾತನಾಡಿ, ಇಂದಿರಾಜ್ಯೋತಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವವರು ಸೂಕ್ತ ದಾಖಲೆ ಬಿಡುಗಡೆ ಮಾಡಲಿ. ತಮ್ಮ ಮಾತು ನಡೆಯುವುದಿಲ್ಲ ಎಂಬ ಕಾರಣಕ್ಕೆ ನಿಷ್ಠೆಯಿಂದ ಕೆಲಸ ಮಾಡುವ ಇಂದಿರಾ ಜ್ಯೋತಿಯವರನ್ನು ಯಡೇಹಳ್ಳಿಗೆ ಬರಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಸದಸ್ಯರಾದ ಜ್ಯೋತಿ ಹೆಬ್ಬೋಡಿ, ನಾಗರತ್ನ, ಚೇತನ್, ಶಿವಕುಮಾರ್ ಹಾಜರಿದ್ದರು.

ಇದನ್ನೂ ಓದಿ : KPTCL protest | ಟವರ್‌ ಹಾಕಲು ಜಾಗ ಕೊಟ್ಟ ರೈತರಿಗೆ ಪರಿಹಾರ ಕೊಡದ ಕೆಪಿಟಿಸಿಎಲ್; ಟವರ್‌ ಏರಿ ಪ್ರತಿಭಟನೆ!

Exit mobile version