Site icon Vistara News

Viral News: ಹೆಂಡಕ್ಕಾಗಿ ಹೋರಾಟ! ಬಸ್‌ಗಳಲ್ಲಿ ಡಿಫೆನ್ಸ್‌ ಮದ್ಯ ಒಯ್ಯೋಕೆ ಬೇಕು ಪರ್ಮಿಶನ್; ನಾರಿಯರ ಪ್ರತಿಭಟನೆ

protest to carry liquor from Army canteens in buses at gadag

ಗದಗ: ಶ್‌..! ಇದು ಎಣ್ಣೆಯ ವಿಷ್ಯ!!! ಇದರ ಬಗ್ಗೆ ಮಾತನಾಡಬೇಕಾದರೆ ಇರಲಿ ಎಚ್ಚರ. “ನೀವು ಕ್ಷಣಕ್ಕೊಂದು ರೂಲ್ಸ್‌ ಬದಲಾವಣೆ ಮಾಡಿದರೆ ಹೇಗೆ? ನಾವು ಮದ್ಯವನ್ನು ಹೇಗೆ ತೆಗೆದುಕೊಂಡು ಹೋಗಬೇಕು? ಅರ‍್ರೇ, ಬಸ್‌ನಲ್ಲಿ ಮದ್ಯ ಸಾಗಾಟ ಮಾಡಬಾರದು ಎಂದರೆ ಹೇಗೆ? ನಾವೆಲ್ಲಿಗೆ ಹೋಗಬೇಕು? ಅದೆಲ್ಲಾ ಆಗಲ್ಲ, ನೀವು ನಮಗೆ ಪರ್ಮಿಶನ್‌ ಕೊಡ್ಲೇಬೇಕು!” ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಮುಂದೆ ಹೀಗೊಂದು ಬೇಡಿಕೆಯನ್ನೂ ಇಟ್ಟಿದ್ದಾರೆ. ಈ ಸುದ್ದಿ ಈಗ ವೈರಲ್‌ (Viral News) ಆಗಿದೆ.

ಬಸ್’ಗಳಲ್ಲಿ ಆರ್ಮಿ ಕ್ಯಾಂಟೀನ್‌ನಿಂದ ಖರೀದಿಸಿ ತಂದಿರುವ ಮದ್ಯ ಒಯ್ಯಲು ಅವಕಾಶ ನೀಡುತ್ತಿಲ್ಲ. ಇದು ಸರಿಯಾದ ಕ್ರಮ ಅಲ್ಲ. ಹೀಗಾಗಿ ಅವಕಾಶ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಮಹಿಳೆಯರ ಪ್ರತಿಭಟನೆ

ಗದಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ಪದಾಧಿಕಾರಿಗಳು, ಬಸ್‌ ಉಚಿತ ಎಂದು ಮಾಡಿದ ಮೇಲೆ ನೀವು ಒಮ್ಮಿಂದ ಒಮ್ಮೆಗೆ ಹೇಗೆ ನೀತಿಯನ್ನು ಬದಲಾವಣೆ ಮಾಡುತ್ತೀರಿ? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: New fungus: ತುಮಕೂರಿನ ಮಕ್ಕಳ ಕಾಲು, ಕೈಯಲ್ಲಿ ಮೂಡುತ್ತಿವೆ ಚುಕ್ಕೆಗಳು; ಹೊಸ ಫಂಗಸ್‌ಗೆ ಜನ ಕಂಗಾಲು!

ಆರ್ಮಿ ಕ್ಯಾಂಟೀನ್‌ನಿಂದ ಕೊಡ ಮಾಡುವ ಮದ್ಯವನ್ನು ಸೈನಿಕರು ದೇಶದ ಎಲ್ಲಿಯಾದರೂ ಸಾಗಾಟ ಮಾಡುವ ಅವಕಾಶವನ್ನು ಹೊಂದಿದ್ದಾರೆ. ದೇಶವ್ಯಾಪಿ ಅವಕಾಶವಿದ್ದರೂ ಬಸ್‌ನಲ್ಲಿ ಏಕಿಲ್ಲ ಎಂಬುದು ಈಗ ಪ್ರತಿಭಟನಾಕಾರರ ತಕರಾರಾಗಿದೆ.

ಟ್ರೈನ್ ಮತ್ತು ವಿಮಾನದಲ್ಲಿ ಸಾಗಾಟಕ್ಕೆ ಅವಕಾಶವನ್ನು ನೀಡಲಾಗಿದೆ. ಆದರೆ, ಇಲ್ಲಿ ಬಸ್‌ನಲ್ಲಿ ಏಕೆ ಅವಕಾಶ ಕೊಡುತ್ತಿಲ್ಲ? ಇಲ್ಲಿಯೂ ಅನುಮತಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಬಸ್‌ನಲ್ಲಿ ಧಾರವಾಡ ಸಿಎಸ್‌ಡಿ ಕ್ಯಾಂಟೀನ್‌ನಿಂದ ತಂದರೆ ಏನು ತೊಂದರೆ? ಎಂದು ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ.

ಎರಡು ವಾರದ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯ ತರುವಾಗ ಮಹಿಳೆಯರಿಗೆ ಅವಮಾನ ಮಾಡಲಾಗಿದೆ. ಮದ್ಯದ ಬಾಟಲ್‌ಗಳನ್ನು ಪ್ರಯಾಣಿಕರಿಗೆ ತೋರಿಸಿ ನಿರ್ವಾಹಕರು ಅವಮಾನಿಸಿದ್ದಾರೆ ಎಂದ ಮಾಜಿ ಸೈನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ಮದ್ಯ ಸಾಗಾಟಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ಗದಗ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಆಗಿದ್ದೇನು?

ಗದಗ ಮೂಲದ ಇಬ್ಬರು ಮಹಿಳೆಯರು ಹುಬ್ಬಳ್ಳಿಯಿಂದ ಮದ್ಯದ ಬಾಟಲ್‌ ಹಿಡಿದುಕೊಂಡು ಬಸ್‌ ಹತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ನಿರ್ವಾಹಕ ತಕರಾರು ಎತ್ತಿದ್ದಾನೆ. ಹುಬ್ಬಳ್ಳಿಯಿಂದ ಗದಗಕ್ಕೆ ಹೋಗುತ್ತಿದ್ದ ಈ ಬಸ್‌ನಲ್ಲಿದ್ದ ಮದ್ಯ ಹಿಡಿದ ಮಹಿಳೆಯರನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದ.

ಈ ಮಹಿಳೆಯರು ಹುಬ್ಬಳ್ಳಿಯ ಆರ್ಮಿ ಕ್ಯಾಂಟೀನ್‌ನಿಂದ ಮದ್ಯದ ಬಾಟಲ್ ತರುತ್ತಿದ್ದರು. ತಮಗೆ ಮದ್ಯ ಒಯ್ಯಲು ಅವಕಾಶ ನೀಡದೆ ಇದ್ದದ್ದು ಮಾತ್ರವಲ್ಲ, ಬಸ್ಸಿನಿಂದ ಕೆಳಗೆ ಇಳಿಸಿದ್ದರಿಂದ ಸಿಟ್ಟುಗೊಂಡ ಮಹಿಳೆಯರು ಕೂಡಲೇ ಗದಗ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದರು. ಅವರಿಗೆ ನಿವೃತ್ತ ಯೋಧರ ಸಂಘ ಸಾಥ್ ನೀಡಿದೆ.

ʻʻನಾವು ಈ ಹಿಂದೆ ಹಲವು ಬಾರಿ ಮದ್ಯ ತೆಗೆದುಕೊಂಡು ಬಂದಿದ್ದೇವೆ. ಅವತ್ತು ಇಲ್ಲದ ರೂಲ್ಸ್ ಇವತ್ಯಾಕೆ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ʻʻಹಾಗಿದ್ದರೆ ಮದ್ಯ ತರಲು ನಮಗೆ ಸರ್ಕಾರ ಯಾವುದಾದರೂ ದಾರಿ ತೋರಿಸಲಿʼʼ ಎಂದು ಹೇಳಿದ್ದಾರೆ.

ʻʻಬಸ್ಸಿನಲ್ಲಿ ಕುಡಿದು ಬಂದವರಿಗೆ ಅವಕಾಶ ಕೊಡ್ತೀರಿ. ಆದರೆ, ಮನೆಗೆ ಮದ್ಯದ ಬಾಟಲ್ ತರಲು ಅವಕಾಶ ಯಾಕಿಲ್ಲ. ನಾವೇನು ಬಸ್ಸಿನಲ್ಲಿ ಕುಡಿದು ಗಲಾಟೆ ಮಾಡಿದ್ದೇವಾ?ʼʼ ಎಂದು ಅವರು ಪ್ರಶ್ನಿಸಿದ್ದರು. ಗದಗ ಟೌನ್ ಪೊಲೀಸ್ ಠಾಣೆ ಮುಂದೆ ಸೇರಿದ ಮಹಿಳೆಯರು ಗದಗ ಡಿಪೋ ಕಂಡಕ್ಟರ್ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ: ಶಾಸಕರಿಗೆ ಮನವಿ ಕೊಡೋಕೆ ಬಂದ ಪ್ರಿನ್ಸಿಪಾಲ್ ಫುಲ್‌ ಟೈಟ್;‌ ಕುಡಿದಿದ್ದು ಸಾಬೀತಾಗುತ್ತಿದ್ದಂಗೆ ಅಮಾನತು!

ನಿವೃತ್ತ ಯೋಧರಿಗೆ ಆರ್ಮಿ ಕ್ಯಾಂಟೀನ್‌ಗಳಲ್ಲಿ ಅಗ್ಗದ ದರದಲ್ಲಿ ಮದ್ಯ ಪೂರೈಕೆ ಮಾಡಲಾಗುತ್ತದೆ. ಅದನ್ನು ನಿವೃತ್ತ ಯೋಧರು, ಇಲ್ಲವೇ ಅವರು ನಿಯೋಜಿಸಿದ ಮನೆಯ ಸದಸ್ಯರು ಬಂದು ಕೊಂಡೊಯ್ಯಲು ಅವಕಾಶವಿದೆ. ಈ ಹಿಂದೆ ಬಸ್ಸು ಸೇರಿದಂತೆ ನಾನಾ ವಾಹನಗಳ ಮೂಲಕ ಅವುಗಳನ್ನು ಮನೆಯವರು ಒಯ್ಯುತ್ತಿದ್ದರು. ಆದರೆ, ಈ ಬಾರಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದುದು ಬಸ್‌ ಕಂಡಕ್ಟರ್‌ಗೆ ತಿಳಿದು ಈ ಕಿರಿಕ್‌ ಉಂಟಾಗಿತ್ತು. ಬಸ್ಸಿನಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ಇಲ್ಲ ಎಂಬ ಮಾರ್ಗಸೂಚಿ ಇದೆಯಾದರೂ ಇದು ಎಲ್ಲ ಸಂದರ್ಭದಲ್ಲಿ ಪಾಲನೆ ಆಗುವುದಿಲ್ಲ.

Exit mobile version