ಬೆಳಗಾವಿ: ಮಂಡ್ಯದ ಬಳಿಕ ಬೆಳಗಾವಿಗೂ ಧ್ವಜ ದಂಗಲ್ ಕಾಲಿಟ್ಟಿದೆ. ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಗ್ರಾಮದಲ್ಲಿ ಪೊಲೀಸರು ಭಗವಾಧ್ವಜ (Bhagwa Dhwaj Row) ತೆರವು ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ತೆರವು ಮಾಡಿರುವ ಭಗವಾಧ್ವಜ ಮರುಸ್ಥಾಪನೆಗೆ ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಭಾನುವಾರ ಬಸ್ ನಿಲ್ದಾಣ ಎದುರಿನಿಂದ ಹನುಮ ಮಂದಿರವರೆಗೆ ಪಾದಯಾತ್ರೆ ನಡೆಸಿ, ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಭಗವಾಧ್ವಜ ಮರು ಅಳವಡಿಕೆಗೆ ಅವಕಾಶ ನೀಡುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವಿ ಬಾಗಲಕೋಟೆ ಅವರಿಗೆ ಸ್ಥಳೀಯ ನಿವಾಸಿಗಳ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಾಧಿಕಾರಿಗಳು, ಮೇಲಧಿಕಾರಿಗಳ ಗಮನಕ್ಕೆ ತಮ್ಮ ನಿಲುವು ಸ್ಪಷ್ಟಪಡಿಸುವುದಾಗಿ ಮಾಹಿತಿ ನೀಡಿದ್ದಾರೆ. ಯಾರೂ ಉದ್ವೇಗಕ್ಕೆ ಒಳಗಾಗಬಾರದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೂರಕ್ಕೂ ಅಧಿಕ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ.
ಪಟ್ಟಣದ ಸಂಬಣ್ಣನವರ ಓಣಿಯಲ್ಲಿ ಭಗವಾಧ್ವಜ ಅಳವಡಿಕೆಗೆ ಪಟ್ಟಣದ ನಿವಾಸಿಗಳ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಧ್ವಜಸ್ತಂಭ ಇರುವ ಸಂಬಣ್ಣವರ ಓಣಿಗೆ ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ನೀಡಿ, ಸ್ಥಳೀಯರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ.
ಇಸ್ಲಾಂ ಧ್ವಜ ತೆರವಾಗಿದ್ದಕ್ಕೆ ಭಗವಾಧ್ವಜ ತೆರವು
ಕಳೆದ ವಾರ ಮಸೀದಿ ಎದುರು ಅಳವಡಿಸಿದ್ದ ಇಸ್ಲಾಂ ಧ್ವಜ ಏಕಾಏಕಿ ತೆರವು ಮಾಡಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಹಿಂದು ಯುವಕರೇ ಇಸ್ಲಾಂ ಧ್ವಜ ತೆರವು ಮಾಡಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಗ್ರಾಮದಲ್ಲಿನ ಎಲ್ಲ ಇಸ್ಲಾಂ ಹಾಗೂ ಭಗವಾಧ್ವಜಗಳನ್ನು ಪೊಲೀಸರು ತೆರವು ಮಾಡಿದ್ದರು.
ಆದರೆ, ಟಿಪ್ಪರ್ ತಾಗಿ ಇಸ್ಲಾಂ ಧ್ವಜ ತೆರವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ ತೆರವು ಮಾಡಲಾಗಿರುವ ಭಗವಾಧ್ವಜ ಅಳವಡಿಕೆಗೆ ಗ್ರಾಮಸ್ಥರು ಒತ್ತಯಿಸುತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ | Partition of India: ಡಿಕೆ ಸುರೇಶ್ ʼದೇಶ ವಿಭಜನೆʼ ಹೇಳಿಕೆ; ಡಿಕೆ ಬ್ರದರ್ಸ್ ಮನೆಯತ್ತ ನುಗ್ಗಿದ ಬಿಜೆಪಿ
ಅಧಿಕಾರ ಮದದಿಂದ ಕಾಂಗ್ರೆಸ್‌ನವರು ಹೀಗೆ ಮಾಡಿದ್ದಾರೆ ಎಂದ ಬಿ.ವೈ. ವಿಜಯೇಂದ್ರ
ಎಂ.ಕೆ. ಹುಬ್ಭಳ್ಳಿಯಲ್ಲಿ ಭಗವಾಧ್ವಜ ತೆರವು ಬಗ್ಗೆ ಪ್ರತಿಕ್ರಿಯಿಸಿರುವ ಬಿ.ವೈ. ವಿಜಯೇಂದ್ರ ಅವರು, ಮಂಡ್ಯದಲ್ಲಿ ಭಗವಾಧ್ವಜ ಗಲಾಟೆ ಕಾಂಗ್ರೆಸ್ ಸರ್ಕಾರದ ಪಿತೂರಿಯಾಗಿತ್ತು. ಹನುಮ ಧ್ವಜ ಹಾರಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಧ್ವಜ ಸ್ತಂಭ ನಿರ್ಮಾಣ ಮಾಡಲಾಗಿತ್ತು. ಈ ಘಟನೆ ನಾವು ಭಾರತದಲ್ಲಿದ್ದೇವೆಯೇ ಅಥವಾ ಬೇರೆ ದೇಶದಲ್ಲಿದ್ದೇವಾ ಎಂಬ ಅನುಮಾನ ಉಂಟು ಮಾಡಿತ್ತು.
ಅಲ್ಪಸಂಖ್ಯಾತ ಓಲೈಕೆ ಕಾರಣದಿಂದ ಹನುಮ ಧ್ವಜ ಹಾರಿಸುವುದನ್ನು ಅವರು ಪ್ರಶ್ನೆ ಮಾಡುತ್ತಾರೆ. ಕಾಂಗ್ರೆಸ್‌ನವರು ಅಧಿಕಾರ ಮದದಿಂದ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.