Site icon Vistara News

Haliyala bandh: ಗ್ರಾಮದೇವಿ ಜಾಗದಲ್ಲಿ ನಮಾಜ್‌ಗೆ ಸಂಚು, ಬ್ಯಾರಿಕೇಡ್‌ ಮುರಿದು ಕೇಸರಿ ಬಾವುಟ ಹಾರಾಟ, ಹಳಿಯಾಳ ಉದ್ವಿಗ್ನ

#image_title

ಹಳಿಯಾಳ (ಉ.ಕನ್ನಡ): ಹಳಿಯಾಳ ಪಟ್ಟಣದ ಗ್ರಾಮ ದೇವಿ ದೇವಸ್ಥಾನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಮಾಜ್‌ಗೆ ಅವಕಾಶ ನೀಡಲು ಸಂಚು ನಡೆಯುತ್ತಿದೆ ಎಂದು ಆರೋಪಿಸಿ ಹಿಂದು ಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದಲ್ಲದೆ, ಪೊಲೀಸರ ಬ್ಯಾರಿಕೇಡ್‌ ಮುರಿದು ಕೇಸರಿ ಬಾವುಟ ನೆಟ್ಟ ಘಟನೆ ಶುಕ್ರವಾರ ನಡೆದಿದೆ. ಹೀಗಾಗಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದೇವಿ ಜಾಗ ಒತ್ತುವರಿ ಮಾಡಿರುವ ಹಳಿಯಾಳ ಪುರಸಭೆ ವಿರುದ್ಧ ಹಿಂದು ಪರ ಸಂಘಟ‌ನೆ ಕಾರ್ಯಕರ್ತರು ಹಳಿಯಾಳ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು. ಪೊಲೀಸರು ವಿವಾದಿತ ಜಾಗಕ್ಕೆ ಬ್ಯಾರಿಕೇಡ್‌ ಹಾಕಿ ರಕ್ಷಣೆ ನೀಡಿದ್ದರು. ಈ ನಡುವೆ, ಪ್ರತಿಭಟನಾಕಾರರು ಪೊಲೀಸರನ್ನು ಲೆಕ್ಕಿಸದೆ ಬ್ಯಾರಿಕೇಡ್ ಮುರಿದು ಒಳ ನುಗ್ಗಿದ ಹಿಂದೂಪರ ಕಾರ್ಯಕರ್ತರು ಆ ಜಾಗದಲ್ಲೇ ಹಿಂದೂ ಕೇಸರಿ ಬಾವುಟ ಹಾರಿಸಿದರು. ಮೊದಲೇ ಉದ್ವಿಗ್ನವಾಗಿದ್ದ ಪರಿಸ್ಥಿತಿ ನಂತರ ಬಳಿಕ ವಿಕೋಪಕ್ಕೆ ತಿರುಗಿತು.

ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕೋಮು ಸಂಘರ್ಷದ ವಾತಾವರಣ ದಟ್ಟವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವ ಹಾಗೆ ಪಟ್ಟಣದ ಗ್ರಾಮದೇವಿ ದೇವಸ್ಥಾನದ ಖಾಲಿ ಬಿಟ್ಟ ಜಾಗದಲ್ಲಿ ಪುರಸಭೆ ತನಗೆ ಬೇಕಾದ ಹಾಗೆ ಕಾಮಗಾರಿ ನಡೆಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಪಟ್ಟಣದ ಗ್ರಾಮ ದೇವಿಯ ಜಾಗಕ್ಕೆ ಹೊಂದಿಕೊಂಡು ಈದ್ಗಾ ಮೈದಾನ ಇದೆ. ಈ ಗ್ರಾಮದೇವಿ ಜಾಗದಲ್ಲಿ ಪುರಸಭೆಯು ಇಂಟರ್ ಲಾಕ್ ಹಾಕಿ ನಮಾಜ್‌ಗೆ ಅವಕಾಶ ಮಾಡಿಕೊಡಲು ಹೀಗೆ ತಂತ್ರ ರೂಪಿಸುತ್ತಿದೆ ಎಂಬ ಆರೋಪ ಈಗ ಹಿಂದು ಪರ ಸಂಘಟನೆಯಿಂದ ಬಲವಾಗಿ ಕೇಳಿ ಬರುತ್ತಿದೆ.

ಈ ನಿಟ್ಟಿನಲ್ಲಿ ದೇವಾಲಯದ ಆಡಳಿತ ಮಂಡಳಿಯ ವಿರೋಧ ಇದ್ದರೂ ಏಕಾಏಕಿ ಇಂಟರ್ ಲಾಕ್ ಹಾಕಿ ವಿವಿಧ ಕಾಮಗಾರಿಯನ್ನು ಪುರಸಭೆ ಕೈಗೊಂಡಿದೆ. ಹೀಗಾಗಿ ಹಿಂದು ಪರ ಸಂಘಟನೆ ಇದನ್ನು ವಿರೋಧಿಸಿ ಶುಕ್ರವಾರ ಹಳಿಯಾಳ ಬಂದ್‌ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ನಡೆಸಿತ್ತು. ಆದರೆ, ಕರೆ ಕೊಟ್ಟಿದ್ದ ಬಂದ್ ಮತ್ತು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆದು ಲಾಠಿ ಚಾರ್ಜ್ ಕೂಡಾ ನಡೆದಿದೆ. ಇತ್ತ ಗ್ರಾಮದೇವಿ ಜಾಗದಲ್ಲಿ ಹಾಕಿದ್ದ ಇಂಟರ್ ಲಾಕ್ ಅನ್ನು ಪ್ರತಿಭಟನಾಕಾರರು ಕಿತ್ತೆಸೆದರು, ಪರಿಸ್ಥಿತಿ ಹತೋಟಿಗೆ ತರಲು ಪೋಲಿಸರು ಹರಸಾಹಸ ಪಡುವಂತಾಯಿತು.

ಏನಿದು ಪುರಸಭೆ ಒತ್ತುವರಿ

ಶಕ್ತಿ ದೇವತೆ ಗ್ರಾಮದೇವಿ ಜಾಗ ದೇವಾಲಯದ ಆವರಣವಾಗಿದೆ. ಇದು ನೂರಾರು ವರ್ಷದಿಂದ ಹಾಗೆ ಖಾಲಿ ಬಿಡಲಾಗಿತ್ತು. ಇದಕ್ಕೆ ಹೊಂದಿಕೊಂಡ ಈದ್ಗಾ ಮೈದಾನ ಇದೆ. ಈಗ ಪುರಸಭೆ ಆಡಳಿತದಲ್ಲಿ ಅಜರ್ ಬಸರಕಟ್ಟಿ ಅಧ್ಯಕ್ಷರಾದ ಬಳಿಕ ಆ ಜಾಗದಲ್ಲಿ ಇಂಟರ್ ಲಾಕ್ ಹಾಕಲಾಗಿದೆ.

ಹೀಗಾಗಿ ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆರೋಪಿಸಿರುವ ದೇವಾಲಯದ ಆಡಳಿತ ಮಂಡಳಿ, ದೇವಾಲಯದ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸುವುದು ಬೇಡವೆಂದು ಕೆಲ ಹಿಂದು ಪರ ಸಂಘಟನೆ ಮುಖಂಡರು ಮತ್ತು ದೇವಸ್ಥಾನ ಟ್ರಸ್ಟಿಯವರು ಪುರಸಭೆ ಮೆಟ್ಟಿಲೇರಿದ್ದರು. ಆದರೆ ಪುರಸಭೆ ಕಾರ್ಯ ಹಾಗೇ ಮುಂದುವರಿದಿತ್ತು. ಇದನ್ನು ವಿರೋಧಿಸಿದ ಹಿಂದು ಪರ ಸಂಘಟನೆಯವರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಬೂದಿ ಮುಚ್ಚಿದ ಕೆಂಡದಂತಾದ ಹಳಿಯಾಳ

ಹಳಿಯಾಳದಲ್ಲಿ ಪತಿಸ್ಥಿತಿ ಕುರಿತು ಮಾತಾನಾಡಿದ ಎಸ್‌ಪಿ ವಿಷ್ಣುವರ್ಧನ, ಪಟ್ಟಣದ ಮರಡಿಗುಡ್ಡ ಪ್ರದೇಶದಲ್ಲಿ ದರ್ಗಾಕ್ಕೆ ಹೊಂದಿಕೊಂಡಿರುವ ದೇವಸ್ಥಾನಕ್ಕೆ ಸೇರಿದ್ದ ದೇವಿ ಗದ್ದುಗೆ ಪ್ರದೇಶದಲ್ಲಿ ನಮಾಜ್‌ಗೆ ಅನುಕೂಲವಾಗುವಂತೆ ಹುಲ್ಲುಹಾಸು ಹಾಗೂ ಇಂಟರ್‌ಲಾಕ್ ಅಳವಡಿಕೆಗೆ ಪುರಸಭೆ ಮುಂದಾಗಿತ್ತು. ಇದನ್ನು ವಿರೋಧಿಸಿ ಸ್ಥಳೀಯರು ಕಾಮಗಾರಿ ಪ್ರದೇಶಕ್ಕೆ ಮುತ್ತಿಗೆ ಹಾಕಿದ್ದಾರೆ. ಕಾಮಗಾರಿಗೆ ಹಾಕಲಾಗಿದ್ದ ಇಂಟರ್‌ಲಾಕ್ ಹಾಗೂ ಸಿಮೆಂಟ್‌ನ್ನು ಕಿತ್ತೊಗೆದಿದ್ದರು.

ಈ ವೇಳೆ ಪೊಲೀಸರು ಉದ್ರಿಕ್ತರನ್ನ ನಿಯಂತ್ರಿಸಲು ಮುಂದಾಗಿದ್ದರಾದರೂ ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಪ್ರತಿಭಟನಾಕಾರರನ್ನು ನಿಯಂತ್ರಿಸಲಾಗಿದೆ. ಅಹಿತಕರ ಘಟನೆಗಳು ನಡೆಯದ ನಿಟ್ಟಿನಲ್ಲಿ ಎರಡು ಡಿಎಆರ್ ತುಕಡಿಯನ್ನು ನೇಮಕ ಮಾಡಲಾಗಿದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 150ಕ್ಕೂ ಅಧಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: 7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

ಫೆ.17ರ ವರೆಗೆ 144 ಸೆಕ್ಷನ್‌ ಜಾರಿ

ಹಳಿಯಾಳದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಫೆ.17ರವರೆಗೆ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಮರಡಿಗುಡ್ಡ ಸಮೀಪ ಒಂದು ಕಿಮೀ. ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಳಿಯಾಳ ತಹಸೀಲ್ದಾರ ಪ್ರಕಾಶ ಗಾಯಕವಾಡ ಆದೇಶ ಹೊರಡಿಸಿದ್ದಾರೆ.

Exit mobile version