ಬೆಂಗಳೂರು: ರಾಜ್ಯದಲ್ಲಿರುವ ಸ್ಮಶಾನ ಮತ್ತು ಖಬರಸ್ಥಾನಗಳಿಗೆ ಮೂರು ತಿಂಗಳಲ್ಲಿ ಜಾಗ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸೂಚಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಡಿಸಿ ಮತ್ತು ಜಿಪಂ ಸಿಇಒಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಧರ್ಮ ಮತ್ತು ಜಾತಿಯವರು ಸ್ಮಶಾನ ಅಥವಾ ಖಬರಸ್ಥಾನಗಳಿಗೆ ಜಾಗ ಒದಗಿಸುವಂತೆ ಕೋರಿದರೆ, ಅದಕ್ಕೆ ಸರ್ಕಾರಿ ಜಾಗದ ವ್ಯವಸ್ಥೆ ಮಾಡಬೇಕು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿಯವರಿಂದ ಜಾಗ ಖರೀದಿಸಿ ನೀಡಬೇಕು ಸೂಚನೆ ನೀಡಿದ್ದಾರೆ.
ಇನ್ನು ಅಲ್ಪಸಂಖ್ಯಾತರ ವಸತಿ ಶಾಲೆಗಳ ಉನ್ನತೀಕರಣ ಹಾಗೂ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜು ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ 65 ಕಡೆಗಳಲ್ಲಿ ನಿವೇಶನ ಒದಗಿಸಲು ಹಾಗೂ ನಾಲ್ಕು ಕಡೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ವಕ್ಫ್ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ 400 ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಒತ್ತುವರಿ ತೆರವು ಗೊಳಿಸಲು ಸೂಚಿಸಿದರು.
ಇದನ್ನೂ ಓದಿ | Shakti Scheme : ಶಕ್ತಿ ಯೋಜನೆಗೆ 3 ತಿಂಗಳು; 1,352 ಕೋಟಿ ರೂಪಾಯಿ ಮೌಲ್ಯದಲ್ಲಿ ಮಹಿಳಾ ಸಂಚಾರ!
ಮೂರು ತಿಂಗಳ ನಂತರ ಮತ್ತೆ ಸಭೆ ಕರೆಯುತ್ತೇವೆ. ಅಷ್ಟರಲ್ಲಿ ಈ ಎರಡು ದಿನಗಳ ಕಾಲ ಇಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಚರ್ಚೆಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ಪರಿಶೀಲಿನೆ ಮಾಡಲಾಗುವುದು. ಜಿಲ್ಲಾಧಿಕಾರಿಗಳು, ಸಿ.ಇ.ಒ.ಗಳು ಮನಸು ಮಾಡಿದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಆಡಳಿತಾತ್ಮಕವಾಗಿ ರಾಜ್ಯದ ಚಿತ್ರಣವನ್ನೇ ಬದಲಿಸಲು ಸಾಧ್ಯ ಎಂದು ಸಿಎಂ ತಿಳಿಸಿದರು.
ಗ್ಯಾರಂಟಿಗಳನ್ನು ಜನರಿಗೆ ತಲುಪಿಸಬೇಕು
ಐದು ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 32 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಸೇರಿದರೆ ಒಬ್ಬರಿಗೆ 80 ಸಾವಿರ ರೂ. ನೀಡಲಾಗುತ್ತಿದೆ ಅನ್ನಭಾಗ್ಯ ಯೋಜನೆಯಡಿ ಹಣ ನೀಡಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ 600 ಕೋಟಿಗೂ ಹೆಚ್ಚು ಹಣ ನೀಡಲಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ 1.26 ಕೋಟಿ ಕುಟುಂಬಗಳಿಗೆ 2,000 ರೂ. ನೀಡಲಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬಲು ಈ ಯೋಜನೆಗಳ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗ್ಯಾರಂಟಿಗಳಿಂದ ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ವಾರ್ಷಿಕ ವರಮಾನ ಹೆಚ್ಚಾಗುತ್ತದೆ ಅಂತೆಯೇ ಜಿಡಿಪಿ ಬೆಳವಣಿಗೆಯಾಗುತ್ತದೆ. ಸರ್ಕಾರ ಇಷ್ಟೆಲ್ಲ ಹಣ ವೆಚ್ಚ ಮಾಡುವಾಗ ಜನರ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಸುಧಾರಣೆಯಾಗಲೇ ಬೇಕು. ಹೀಗಾಗಿ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಇವುಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳಿಗೆ ಸಿಎಂ ಕೊಟ್ಟ ಸೂಚನೆಗಳು
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ ಅಂಶಗಳಲ್ಲಿ ಹಲವು ಜಿಲ್ಲೆಗಳಲ್ಲಿ ಲಿಂಗಾನುಪಾತ ಕಡಿಮೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಪ್ರತಿ ಮೂರು ತಿಂಗಳಿಗೊಮ್ಮೆ ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯನ್ವಯ ಸ್ಕ್ಯಾನಿಂಗ್ ಕೇಂದ್ರಗಳ ತಪಾಸಣೆ ನಡೆಸಲು ಸೂಚಿಸಿದರು.
- ಗರ್ಭಿಣಿಯರ ದತ್ತಾಂಶದ ಮೇಲೆ ಜಿಲ್ಲಾಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಸೂಚಿಸಿದರು.
- 2015 ರಲ್ಲಿ ಉತ್ತಮ ಸೂಚ್ಯಂಕ ಹೊಂದಿದ್ದ ಕೆಲವು ಜಿಲ್ಲೆಗಳು 2022 ರಲ್ಲಿ ಕುಸಿತ ಕಂಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಣ್ಣುಮಕ್ಕಳು ಹಾಗೂ ಮಹಿಳೆಯರಲ್ಲಿ ಅನಿಮಿಯಾ ಮತ್ತು ಅಪೌಷ್ಟಿಕತೆಯ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಆಸ್ಪತ್ರೆಗಳಲ್ಲಿಯೇ ಹೆರಿಗೆಯಾಗುವುದನ್ನು ಖಾತರಿಪಡಿಸಬೇಕು ಎಂದು ಸೂಚಿಸಿದರು.
- ತಾಯಿ ಮರಣ ತಪಾಸಣೆಯನ್ನು (Death Audit) ಜಿಲ್ಲಾಧಿಕಾರಿಗಳು ನಿಯಮಿತವಾಗಿ ನಡೆಸಬೇಕು. ಲಸಿಕೆ ಕಾರ್ಯಕ್ರಮಗಳಲ್ಲಿಯೂ ಸಾಧನೆ ಉತ್ತಮ ಪಡಿಸಬೇಕೆಂದು ತಿಳಿಸಿದರು.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಹಾಸ್ಟೆಲ್ಗಳಿಗೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಲಾಯಿತು.
- 2443 ಹಾಸ್ಟೆಲುಗಳಲ್ಲಿ ಕೇವಲ 981 ಹಾಸ್ಟೆಲ್ಗಳಿಗೆ ಮಾತ್ರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ 1462 ಹಾಸ್ಟೆಲುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
- ಪ್ರತಿ ತಿಂಗಳು ಹಾಸ್ಟೆಲ್ಗಳಿಗೆ ದಿಢೀರ್ ಭೇಟಿ ಮಾಡಬೇಕು. ಇದರಿಂದ ಹಾಸ್ಟೆಲ್ಗಳ ಕುಂದುಕೊರತೆ, ಆಹಾರದ ಗುಣಮಟ್ಟ ಮತ್ತಿತರ ಸಮಸ್ಯೆಗಳು ಅರಿವಿಗೆ ಬರುತ್ತವೆ. ನಗರ ಸ್ಥಳೀಯ ಸಂಸ್ಥೆಗಳು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೀಟ್ ಪಂಪ್ಗಳನ್ನು ಒದಗಿಸಲು ಸೂಚಿಸಿದರು.
- ಹಾಸ್ಟೆಲ್ಗಳ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಹಾಸ್ಟೆಲ್ಗಳ ಕಟ್ಟಡ ನಿರ್ಮಾಣಕ್ಕಾಗಿ 120 ನಿವೇಶನಗಳನ್ನು ಒದಗಿಸಲು ಕೂಡಲೇ ಕ್ರಮ ವಹಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
- ಹಾಸ್ಟೆಲುಗಳಿಗೆ ತಡೆಗೋಡೆ ಆವರಣ ನಿರ್ಮಿಸಲು ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.
ಇದನ್ನೂ ಓದಿ | Cauvery Water Dispute: ಸಿಡಬ್ಲ್ಯುಆರ್ಸಿ ಆದೇಶ ಮರು ಪರಿಶೀಲಿಸುವಂತೆ ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಸಿಎಂ ಪತ್ರ
ಉನ್ನತ ಶಿಕ್ಷಣ ಇಲಾಖೆ
- ರಾಜ್ಯದ 21 ಪದವಿ ಕಾಲೇಜುಗಳಿಗೆ ಜಮೀನು ಒದಗಿಸಲು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
- ಗ್ರಾಮೀಣ ಪ್ರದೇಶದಲ್ಲಿ ಜಾಗ ಒದಗಿಸಬಹುದು. ನಗರ ಪ್ರದೇಶದಲ್ಲಿ ನಿಗದಿತ ಮಾನದಂಡಗಳಂತೆ ಜಾಗ ಒದಗಿಸುವುದು ಕಷ್ಟವಾಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಇತರ ಇಲಾಖೆಗಳ ವ್ಯಾಪ್ತಿಯಲ್ಲಿ ನಿರುಪಯುಕ್ತವಾಗಿ ಖಾಲಿ ಜಾಗ ಲಭ್ಯವಿದ್ದಲ್ಲಿ, ಅದನ್ನು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಸತಿ ಇಲಾಖೆ ಮತ್ತು ಉನ್ನತ ಶಿಕ್ಷಣ - 2940 ಕೋಟಿ ಹಂಚಿಕೆ ಮಾಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಖಾತೆಯಲ್ಲಿ 1900 ಕೋಟಿಗೂ ಹೆಚ್ಚು ಅನುದಾನ ಲಭ್ಯವಿದ್ದು, ಆರ್ಥಿಕ ಪ್ರಗತಿ ಸಾಧಿಸಲು ಸಿಇಓಗಳಿಗೆ ಸೂಚಿಸಲಾಯಿತು.
- ಈ ವರ್ಷ 3.11 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಗುರಿ ಸಾಧಿಸಲು ಸೂಚಿಸಲಾಯಿತು.
- ಗಣಿಗಾರಿಕೆ ಪುನಶ್ಚೇತನ ನಿಗಮದಿಂದ ವಸತಿ ಯೋಜನೆಗಳಿಗೆ 1493 ಕೋಟಿ ರೂ. ಅನುದಾನ ಲಭ್ಯವಿದ್ದು, ಗಣಿ ಬಾಧಿತ ಪ್ರದೇಶಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜಾಗ ಗುರುತಿಸಲು ಸೂಚಿಸಲಾಯಿತು.
- ಕೊಳೆಗೇರಿ ನಿರ್ಮೂಲನ ಮಂಡಳಿ ವತಿಯಿಂದ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮನೆಗಳನ್ನು ನಿರ್ಮಿಸಲು ಜಾಗ ಗುರುತಿಸಲು ಸೂಚಿಸಲಾಯಿತು.