ಬೆಂಗಳೂರು: 2021ರಲ್ಲಿ ನಡೆದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ (PSI Exam) ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಆಯೋಜಿಸಲಾದ ಮರುಪರೀಕ್ಷೆ (PSI ReExam) ಮಂಗಳವಾರ ಬೆಂಗಳೂರಿನಲ್ಲಿ ಆರಂಭಗೊಂಡಿದೆ. 545 ಹುದ್ದೆಗಳಿಗಾಗಿ 54000 ಅಭ್ಯರ್ಥಿಗಳು ರಾಜಧಾನಿಯ 117 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಆರಂಭಿಸಿದ್ದಾರೆ. ಈ ಪರೀಕ್ಷೆಗಾಗಿ ಪೊಲೀಸರು ಹಾಗು ಸಿಬ್ಬಂದಿ ಬಿಗಿ ಭದ್ರತಾ ಕ್ರಮಗಳನ್ನು ಆಯೋಜಿಸಿದ್ದಾರೆ. ಅದರ ನಡುವೆಯೂ ಮಾನವೀಯತೆಯನ್ನು ಮೆರೆದಿದ್ದಾರೆ. ಪರೀಕ್ಷೆ ಬರೆಯಲು ಬಂದ ತುಂಬು ಗರ್ಭಿಣಿಯೊಬ್ಬರು ಗೇಟಿನ ಬಳಿ ಕಾಯುತ್ತಿದ್ದಾಗ ಅವರಿಗೆ ಚೇರ್ ತಂದುಕೊಟ್ಟು ಸೌಜನ್ಯ ಮೆರೆದಿದ್ದಾರೆ (Pregnant woman given Chair).
ಇಡೀ ರಾಜ್ಯದಲ್ಲಿ ಬೆಂಗಳೂರಿನ 117 ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ನಡೆಯಲಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲೂ ನಾಲ್ವರು ಸಶಸ್ತ್ರ ಪೇದೆಗಳು ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಸೇರಿದಂತೆ 6 ಮಂದಿಯನ್ನು ನಿಯೋಜಿಸಲಾಗಿದೆ. 40 ಬೆಟಾಲಿಯನ್ ಪೊಲೀಸರನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಪರೀಕ್ಷೆ ಬರೆಯಲು ಬಂದ ತುಂಬು ಗರ್ಭಿಣಿ
ಈ ನಡುವೆ, ಪಿಎಸ್ಐ ಪರೀಕ್ಷೆ ಬರೆಯಲು ತುಂಬು ಗರ್ಭಿಣಿಯೊಬ್ಬರು ಬಂದಿದ್ದರು. ಬಾಗಲಗುಂಟೆಯ ರೋಜಾಶ್ರೀ ಎಂಬವರೇ ಈ ರೀತಿ ಪರೀಕ್ಷೆ ಬರೆಯಲು ಬಂದವರು. 2021ರಲ್ಲಿ ನಡೆದಿದ್ದ ಪಿಎಸ್ಐ ಪರೀಕ್ಷೆಯಲ್ಲಿ ಕೂಡ ಭಾಗಿಯಾಗಿದ್ದ ಅಭ್ಯರ್ಥಿ ರೋಜಾಶ್ರೀ ಅವರು ಈ ಬಾರಿ ಮತ್ತೆ ಪರೀಕ್ಷೆಗೆ ಬಂದಿದ್ದರು. ಅವರು ಆರ್.ಸಿ. ಕಾಲೇಜಿಗೆ ಬಂದು ಗೋಡೆಗಾನಿಸಿಕೊಂಡು ನಿಂತು ಕಷ್ಟಪಡುತ್ತಿದ್ದುದನ್ನು ಗಮನಿಸಿದ ಆರ್‌ಸಿ ಕಾಲೇಜಿನ ಸಿಬ್ಬಂದಿ ಕೂಡಲೇ ಒಂದು ಚೇರ್ ತಂದುಕೊಟ್ಟು ಕುಳ್ಳಿರಿಸಿದರು.
ʻʻನಾನು ಬಾಗಲಗುಂಟೆಯಿಂದ ಪರೀಕ್ಷೆ ಬರೆಯಲು ಬಂದಿದ್ದೇನೆ.. ಕಳೆದ ಬಾರಿ ಕೆಲವರು ಮಾಡಿದ ಯಡವಟ್ಟಿನಿಂದ ಈ ರೀತಿ ಆಗಿದೆ, ಈ ಬಾರಿ ಓದೋಕೆ ಟೈಮ್ ಸಿಕ್ತು.. ಈ ಬಾರಿ ಸ್ವಲ್ಪ ಟಫ್ ರೂಲ್ಸ್ ಮಾಡಿದಾರೆ.. ಸಜ್ಜಾಗಿ ಬಂದಿದ್ದೀನಿ.. ಪರೀಕ್ಷೆ ಬರೆಯುತ್ತೇನೆʼʼ ಎಂದು ಪರೀಕ್ಷಾರ್ಥಿ ರೋಜಾ ಶ್ರೀ ಹೇಳಿದ್ದಾರೆ.
ಈ ಬಾರಿ ಕಠಿಣ ನಿಯಮಗಳು ಜಾರಿ
1.ಶರ್ಟ್ ಅಥವಾ ಪ್ಯಾಂಟ್‌ಗಳಿಗೆ ಜಿಪ್ ಪ್ಯಾಕೆಟ್‌ಗಳು, ದೊಡ್ಡ ದೊಡ್ಡ ಗುಂಡಿಗಳು, ಎಕ್ಸ್‌ಟ್ರಾ ಡಿಸೈನ್ ಇರುವಂತಿಲ್ಲ.
2. ಅಭ್ಯರ್ಥಿಗಳು ಪರೀಕ್ಷಾ ಹಾಲ್‌ಗೆ ಶೂ ಹಾಕಿಕೊಂಡು ಹೋಗುವಂತಿಲ್ಲ. ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚಿಸಲಾಗಿದೆ.
3.ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸಲು ನಿಷೇಧವಿದೆ.
4.ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್ ಇರುವಂತಿಲ್ಲ. ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರ ಹಾಲ್‌ಗೆ ಪ್ರವೇಶವಿಲ್ಲ.
5. ಯಾವುದೇ ರೀತಿಯಾದ ಅಹಾರ, ನೀರಿನ ಬಾಟಲಿಗೆ ಅವಕಾಶ ಇಲ್ಲ. ಬದಲಿಗೆ ಪರೀಕ್ಷಾ ಕೇಂದ್ರದಲ್ಲಿಯೇ ನೀರು ಕುಡಿಯಲು ವ್ಯವಸ್ಥೆ ಇದೆ.
6.ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್‌ಗಳು ಪರೀಕ್ಷಾ ಕೇಂದ್ರಕ್ಕೆ ನಿಷೇಧ. ಹ್ಯಾಟ್, ಮಾಸ್ಕ್ ಧರಿಸದಂತೆ ಸೂಚನೆ ನೀಡಲಾಗಿದೆ.
7.ಪ್ರವೇಶ ಪತ್ರ, ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ ಕಡ್ಡಾಯ. ಕೊನೆಯ ಬೆಲ್ ಹೊಡೆಯೋವರೆಗೂ ಪರೀಕ್ಷಾ ಹಾಲ್ನಿಂದ ಅಭ್ಯರ್ಥಿಗಳು ಹೊರ ಹೋಗುವಂತಿಲ್ಲ.
8. ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗ ಸೂಚಿ ನೀಡಲಾಗಿದೆ. ದೊಡ್ಡ ದೊಡ್ಡ ಡಿಸೈನ್, ಬಟನ್, ಹೂಗಳು ಇರುವ ಬಟ್ಟೆ ಧರಿಸುವಂತಿಲ್ಲ.
9.ಪೂರ್ಣ ತೋಳಿನ ಬಟ್ಟೆ ಬಳಸದಂತೆ, ಮುಜುಗರವಾಗದಂತೆ ಅರ್ಧ ತೋಳಿನ ಬಟ್ಟೆ, ಟಾಪ್ ಬಳಸಲು ಸೂಚನೆ ನೀಡಲಾಗಿದೆ. ಹೈ ಹೀಲ್ಸ್ ಚಪ್ಪಲಿ-ಶೂ ನಿಷೇಧ ಹೇರಲಾಗಿದೆ.
10.ಮಹಿಳಾ ಅಭ್ಯರ್ಥಿಗಳಿಗೂ ಯಾವುದೇ ರೀತಿಯ ಲೋಹ, ಚೈನ್ ಬಳಸದಂತೆ ಸೂಚನೆ ಕೊಡಲಾಗಿದ್ದು, ಮಂಗಳ ಸೂತ್ರ, ಕಾಲುಂಗುರ ಮಾತ್ರ ಬಳಸಲು ಅನುಮತಿ ಇದೆ.
ಜೀನ್ಸ್ ಪ್ಯಾಂಟ್ ಹಾಕಿಕೊಂಡವರು ವಾಪಸ್
1. ಪರೀಕ್ಷಾರ್ಥಿಗಳಲ್ಲಿ ಕೆಲವರು ಕೈಗೆ ಹಾಕಿದ ದಾರ, ಬಂಗಾರ ಓಲೆ ಹಾಕಿಕೊಂಡು ಬಂದಿದ್ದರು. ಅವುಗಳನ್ನು ಸಿಬ್ಬಂದಿ ಕತ್ತರಿಸಿದ್ದಾರೆ.
2.ಈ ಬಾರಿ ಗುಲ್ಬರ್ಗ, ರಾಯಚೂರು ಭಾಗದ ಶಿಕ್ಷಕರನ್ನ ಪರೀಕ್ಷೆಗೆ ಬಳಕೆ ಮಾಡಿಲ್ಲ. ಆ ಭಾಗದಲ್ಲಿ ಪರೀಕ್ಷಾ ಅಕ್ರಮ ನಡೆದ ಕಾರಣ ಶಿಕ್ಷಕರ ಬಳಕೆಯೂ ನಿಷೇಧ. ಕೇವಲ ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆ ಭಾಗದ ಶಿಕ್ಷಕರು ಮಾತ್ರ ಪರೀಕ್ಷೆಗೆ ಬಳಕೆ ಮಾಡಲಾಗಿದೆ.
3. ಜೀನ್ಸ್ ಪ್ಯಾಂಟ್ ಹಾಕಿದವರನ್ನು ಪೊಲೀಸ್ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ. ಅಭ್ಯರ್ಥಿಗಳು ಜೀನ್ಸ್ ಪ್ಯಾಂಟ್ ತೆಗೆದು ಬೇರೆ ಪ್ಯಾಂಟ್ ಹಾಕಿಕೊಂಡು ಬಂದರು.