Site icon Vistara News

PSI Exam: ಭಾರಿ ಭದ್ರತೆಯಲ್ಲಿ ಪಿಎಸ್‌ಐ ಮರುಪರೀಕ್ಷೆ ಆರಂಭ

PSI Exam

ಬೆಂಗಳೂರು: ಭಾರಿ ಅಕ್ರಮ ನಡೆದಿದ್ದ ಪಿಎಸ್‌ಐ ಹುದ್ದೆಗಳ (PSI Exam) ಮರುಪರೀಕ್ಷೆ (PSI Re Exam) ಇಂದು ರಾಜಧಾನಿಯಲ್ಲಿ ನಡೆಯಲಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಬೆಂಗಳೂರಿನ 117 ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ನಡೆಯಲಿದೆ.

54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಆಸ್ಪದ ಕೊಡಬಾರದೆಂಬ ಕಾರಣಕ್ಕೆ ಭಾರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲೂ ನಾಲ್ವರು ಸಶಸ್ತ್ರ ಪೇದೆಗಳು ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಸೇರಿದಂತೆ 6 ಮಂದಿಯನ್ನು ನಿಯೋಜಿಸಲಾಗಿದೆ. 40 ಬೆಟಾಲಿಯನ್ ಪೊಲೀಸರನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

545 PSI ಹುದ್ದೆಗಳಿಗಾಗಿ ಮರು ಪರೀಕ್ಷೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಹಾಗೂ ಕೆಇಎ ನಿಗಾ ಇಟ್ಟಿವೆ. ಪರೀಕ್ಷಾ ಕೇಂದ್ರಗಳ ಸುತ್ತ ಅನುಮಾನಾಸ್ಪದವಾಗಿ ಓಡಾಡುವವರು, ಗಾಳಿಸುದ್ದಿ ಹಬ್ಬಿಸುವ ಕಿಡಿಗೇಡಿಗಳು ಮತ್ತು ಜೆರಾಕ್ಸ್ ಅಂಗಡಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬರನ್ನೂ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಲಾಗುತ್ತಿದೆ.

ಅಭ್ಯರ್ಥಿಗಳು ವಸ್ತ್ರ ಸಂಹಿತೆಯಲ್ಲಿನ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಶರ್ಟ್ ಅಥವಾ ಪ್ಯಾಂಟ್‌ಗಳಿಗೆ ಜಿಪ್ ಪ್ಯಾಕೆಟ್‌ಗಳು, ದೊಡ್ಡ ದೊಡ್ಡ ಗುಂಡಿಗಳು, ಎಕ್ಸ್ಟ್ರಾ ಡಿಸೈನ್ ಇರುವಂತಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಹಾಲ್‌ಗೆ ಶೂ ಹಾಕಿಕೊಂಡು ಹೋಗುವಂತಿಲ್ಲ. ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚಿಸಲಾಗಿದೆ. ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸಲು ನಿಷೇಧವಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್ ಇರುವಂತಿಲ್ಲ. ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರ ಹಾಲ್‌ಗೆ ಪ್ರವೇಶವಿಲ್ಲ.

ಯಾವುದೇ ರೀತಿಯಾದ ಅಹಾರ, ನೀರಿನ ಬಾಟಲಿಗೆ ಅವಕಾಶ ಇಲ್ಲ. ಬದಲಿಗೆ ಪರೀಕ್ಷಾ ಕೇಂದ್ರದಲ್ಲಿಯೇ ನೀರು ಕುಡಿಯಲು ವ್ಯವಸ್ಥೆ ಇದೆ. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್‌ಗಳು ಪರೀಕ್ಷಾ ಕೇಂದ್ರಕ್ಕೆ ನಿಷೇಧ. ಹ್ಯಾಟ್, ಮಾಸ್ಕ್ ಧರಿಸದಂತೆ ಸೂಚನೆ ನೀಡಲಾಗಿದೆ. ಪ್ರವೇಶ ಪತ್ರ, ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ ಕಡ್ಡಾಯ. ಕೊನೆಯ ಬೆಲ್ ಹೊಡೆಯೋವರೆಗೂ ಪರೀಕ್ಷಾ ಹಾಲ್​ನಿಂದ ಅಭ್ಯರ್ಥಿಗಳು ಹೊರ ಹೋಗುವಂತಿಲ್ಲ.

ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗ ಸೂಚಿ ನೀಡಲಾಗಿದೆ. ದೊಡ್ಡ ದೊಡ್ಡ ಡಿಸೈನ್, ಬಟನ್, ಹೂಗಳು ಇರುವ ಬಟ್ಟೆ ಧರಿಸುವಂತಿಲ್ಲ. ಪೂರ್ಣ ತೋಳಿನ ಬಟ್ಟೆ ಬಳಸದಂತೆ, ಮುಜುಗರವಾಗದಂತೆ ಅರ್ಧ ತೋಳಿನ‌ ಬಟ್ಟೆ, ಟಾಪ್ ಬಳಸಲು ಸೂಚನೆ ನೀಡಲಾಗಿದೆ. ಹೈ ಹೀಲ್ಸ್ ಚಪ್ಪಲಿ-ಶೂ ನಿಷೇಧ ಹೇರಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೂ ಯಾವುದೇ ರೀತಿಯ ಲೋಹ, ಚೈನ್ ಬಳಸದಂತೆ ಸೂಚನೆ ಕೊಡಲಾಗಿದ್ದು, ಮಂಗಳ ಸೂತ್ರ, ಕಾಲುಂಗುರ ಮಾತ್ರ ಬಳಸಲು ಅನುಮತಿ ಇದೆ.

ಇದನ್ನೂ ಓದಿ: PSI Exam: ಜ. 23ರಂದು ಪಿಎಸ್ಐ ಮರುಪರೀಕ್ಷೆ; ಬೆಂಗಳೂರಿನ 117 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ

Exit mobile version