Site icon Vistara News

PSI Scam : ಪಿಎಸ್‌ಐ ಹಗರಣದ ಎಫ್‌ಐಆರ್‌, ಎಲ್ಲ ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಆದೇಶ

PSI Scam

ಬೆಂಗಳೂರು: ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣಕ್ಕೆ (PSI Scam) ಸಂಬಂಧಿಸಿದಂತೆ ಇದುವರೆಗೆ ದಾಖಲಾಗಿರುವ ಎಫ್‌ಐಆರ್‌ ಹಾಗೂ ತನಿಖೆಗೆ ಸಂಬಂಧಿಸಿದ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಗುರುವಾರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ನೇಮಕಾತಿ ದಳದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ಪಿಎಸ್‌ಐ (ಸಿವಿಲ್) ನೇಮಕಾತಿ ಸಮಿತಿಯ ಅಧ್ಯಕ್ಷರು ಹಾಗೂ ಸಿಐಡಿ ಪರವಾಗಿ ನೋಟಿಸ್‌ ಸ್ವೀಕರಿಸಲು ಸರ್ಕಾರದ ವಕೀಲ ಲಕ್ಷ್ಮಿಕಾಂತ್‌ ಅವರಿಗೆ ಸೂಚಿಸಿರುವ ಪೀಠವು ಪ್ರಕರಣದ ಹಾಲಿ ಸ್ಥಿತಿಗತಿ ಒಳಗೊಂಡು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ. ಅಲ್ಲದೇ, ನಾಲ್ಕು ವಾರಗಳ ಬಳಿಕ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ಆದೇಶಿಸಿದೆ.

ವಕೀಲ ಕೆ ಅಭಿಷೇಕ್‌ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು ಇಡೀ ಹಗರಣದ ಕುರಿತು ಸ್ಥೂಲವಾಗಿ ಪೀಠಕ್ಕೆ ವಿವರಿಸಿದರು. ಇದನ್ನು ಪರಿಗಣಿಸಿದ ಪೀಠವು ನೋಟಿಸ್‌ ಜಾರಿ ಮಾಡಿತು.

ಪ್ರಕರಣವು ಹಿಂದಿನ ಬಾರಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರಿರುವ ವಿಭಾಗೀಯ ಪೀಠದ ಮುಂದೆ ಪಟ್ಟಿಯಾದಾಗ ಅರ್ಜಿ ವಿಚಾರಣೆಯಿಂದ ಪೀಠವು ಹಿಂದೆ ಸರಿದಿತ್ತು. “ಕ್ಷಮಿಸಿ, ಈ ಪೀಠದ ಮುಂದೆ ಬೇಡ. ನಾವಿಬ್ಬರೂ ಇಲ್ಲದಿರುವ ಪೀಠದ ಮುಂದೆ ಅರ್ಜಿ ಪಟ್ಟಿಮಾಡಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.

ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ ಇಲ್ಲಿಯವರೆಗೆ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ ಮತ್ತು ದೂರುಗಳಿಗೆ ಸಂಬಂಧಿಸಿದ ಸಂಪೂರ್ಣವಾದ ತನಿಖಾ ದಾಖಲೆಗಳನ್ನು ಸಲ್ಲಿಸಲು ಸಿಐಡಿಗೆ ಆದೇಶಿಸಬೇಕು. ಪ್ರಕರಣದ ತನಿಖೆ ನಡೆಸಿರುವ ಸಿಐಡಿಗೆ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮೃತ್‌ ಪೌಲ್‌ ಬಂಧನ ಬಳಿಕದ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲು ನಿರ್ದೇಶಿಸಬೇಕು. ನ್ಯಾಯಯುತ, ಸ್ವತಂತ್ರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ಮತ್ತು ಸಿಐಡಿಗೆ ನಿರ್ದೇಶಿಸಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ.

Exit mobile version