ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣವು (PSI Scam) ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅಕ್ರಮದ ಮತ್ತೊಬ್ಬ ಕಿಂಗ್‌ಪಿನ್ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಹೆಡ್ ಮಾಸ್ಟ್ ಕಾಶೀನಾಥ್ ಚಿಲ ಮತ್ತು ಸಿಐಡಿ ಡಿವೈಎಸ್‌ಪಿ ಶಂಕರಗೌಡ ಮಾತಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗುತ್ತಿದೆ. ಸಿಐಡಿ ತನಿಖಾಧಿಕಾರಿಗಳ ಮೇಲೆ ಸಂಶಯ ಸೃಷ್ಟಿಸುವಂತೆ ಮಾಡಿದೆ.
ಎರಡ್ಮೂರು ದಿನಗಳ ಹಿಂದೆಯಷ್ಟೇ ತನಿಖಾಧಿಕಾರಿ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾದ ಆಡಿಯೊ, ವಿಡಿಯೊವನ್ನು ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಬಿಡುಗಡೆ ಮಾಡಿದ್ದ. ಇದರ ಜಾಡು ಹಿಡಿದ ಅಧಿಕಾರಿಗಳಿಗೆ ವರ್ಗಾವಣೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಇದೀಗ ಅಕ್ರಮದ ಮತ್ತೊಬ್ಬ ಕಿಂಗ್‌ಪಿನ್‌ನಿಂದ ಆಡಿಯೊ ಬಿಡುಗಡೆ ಆಗಿದೆ. ಸಿಐಡಿ ತನಿಖಾಧಿಕಾರಿಗಳ ಮೇಲೆ ಈಗ ಸಂಶಯ ಹುಟ್ಟುಹಾಕಿದೆ.
ಕಳೆದ ಕೆಲ ದಿನಗಳಿಂದ ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಜಾಮೀನು ಪಡೆದು ಹೊರ ಬಂದಿದ್ದ ಆರೋಪಿ ಆರ್.ಡಿ ಪಾಟೀಲ್ ನ್ಯಾಯಾಲಯಕ್ಕೆ ಶರಣಾಗುವ ಮುನ್ನ ಒಂದೊಂದಾಗಿ ವಿಡಿಯೊಗಳನ್ನು ಹರಿಬಿಟ್ಟಿದ್ದಾನೆ.
ಬ್ಯಾಂಕ್‌ನಿಂದ ಯಾವುದೇ ಹಣ ವರ್ಗಾವಣೆ ಆಗಿಲ್ಲ
ಸಿಐಡಿ ತನಿಖಾಧಿಕಾರಿ ಶಂಕರಗೌಡ ಪಾಟೀಲ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾದ ಆಡಿಯೊ ಜತೆ ವಿಡಿಯೊ ಒಂದನ್ನು ಕಿಂಗ್‌ಪಿನ್ ಆರ್.ಡಿ ಪಾಟೀಲ್ ಹರಿಬಿಟ್ಟಿದ್ದಾನೆ. ಮಾತ್ರವಲ್ಲದೆ ಬ್ಯಾಂಕ್ ಆಫ್ ಬರೋಡಾದಲ್ಲಿ 2022ರ ಜುಲೈ 1ರಿಂದ ಡಿ.31ರಲ್ಲಿ ಹಣ ಡ್ರಾ ಮಾಡಿ ಸುಮಾರು 76 ಲಕ್ಷ ರೂ. ಸಹ ನೀಡಿದ್ದೇನೆ ಎಂದು ವಿಡಿಯೊದಲ್ಲಿ ಹೇಳಿಕೆ ನೀಡಿದ್ದ. ಇದರ ತನಿಖೆಗೆ ಇಳಿದಿದ್ದ ಅಧಿಕಾರಿಗಳು ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳ ಬಳಿ ಆರ್.ಡಿ ಪಾಟೀಲ್ ಅಕೌಂಟ್ ಡೀಟೈಲ್ ನೀಡುವಂತೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರ ನೀಡಿದ್ದ ಬ್ಯಾಂಕ್ ಅಧಿಕಾರಿಗಳು 2022ರ ಜುಲೈ 1ರಿಂದ ಡಿ 31 ರವರೆಗೆ ಯಾವುದೇ ಹಣ ವರ್ಗಾವಣೆಯಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: PSI Scam : ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್.ಡಿ ಪಾಟೀಲ್ ನ್ಯಾಯಾಲಯಕ್ಕೆ ಶರಣು
ಒಟ್ಟಾರೆ, ಪ್ರಕರಣದ ಆರೋಪಿ ಆರ್.ಡಿ ಪಾಟೀಲ್ ಸುಳ್ಳಿನ ಸರಮಾಲೆ ಹಾಕುತ್ತಾ ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈ ಹಾಕಿರಬಹುದೆಂಬ ಅನುಮಾನಗಳು ಇವೆ. ಮತ್ತೊಂದು ಕಡೆ ತನಿಖಾಧಿಕಾರಿಗಳ ಮೇಲೆ ಸಂಶಯ ಹುಟ್ಟಿಸುವಂತಹ ಆಡಿಯೊಗಳು ವೈರಲ್ ಆಗುತ್ತಿವೆ.