Site icon Vistara News

PSI Scam | ಶಾಸಕ ದಡೇಸುಗೂರು ವಿರುದ್ಧ ವಿಡಿಯೊ ಬಾಂಬ್‌ ಸಿಡಿಸಿದ ಕಾಂಗ್ರೆಸ್‌, ನಾಳೆ ಸ್ಫೋಟವಾಗುತ್ತೆ ಎಂದ ಪ್ರಿಯಾಂಕ ಖರ್ಗೆ

PSI Scam

ಬೆಂಗಳೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪಿಎಸ್‌ಐ ನೇಮಕಾತಿ (PSI Scam) ಅಕ್ರಮಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಹಗರಣದಲ್ಲಿ ದುಡ್ಡು ಕೊಟ್ಟು ಕಳೆದುಕೊಂಡಿದ್ದೇನೆ ಎನ್ನಲಾದ ಸಂತ್ರಸ್ತ ವಿದ್ಯಾರ್ಥಿಯ ಪೋಷಕರೊಬ್ಬರು ನೀಡಿರುವ ವಿಡಿಯೊ ಹೇಳಿಕೆ ಇದಾಗಿದ್ದು, ಇದರಲ್ಲಿ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ವಿರುದ್ಧ ನೇರ ಆರೋಪ ಮಾಡಲಾಗಿದೆ.

ಈ ಬಗ್ಗೆ ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಜಂಟಿ ಸುದ್ದಿಗೋಷ್ಠಿ ನಡೆಸಿ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಮಂಗಳವಾರ ಅಧಿವೇಶನದಲ್ಲಿ ಸರ್ಕಾರ ಇದಕ್ಕೆ ಉತ್ತರ ನೀಡಬೇಕು. ಈ ಪ್ರಕರಣದ ತನಿಖೆಯನ್ನು ನ್ಯಾಯಾಂಗಕ್ಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಿಎಸ್‌ಐ ಹಗರಣವನ್ನು ನಾನು ಹೊರತಂದಿದ್ದಕ್ಕೆ ಎರಡು, ಮೂರು ನೋಟಿಸ್‌ ಕೊಡುವ ಸರ್ಕಾರ, ಈಗ ಅವರ ಪಕ್ಷದ ಶಾಸಕರೊಬ್ಬರು ಡೀಲ್ ಬಗ್ಗೆ ಮಾತನಾಡಿದರೆ ಅವರನ್ನು ಯಾಕೆ ಬಂಧಿಸಿಲ್ಲ? ಈಗಾಗಲೇ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಎಲ್ಲರ ಹೆಸರು ಹೇಳಲು ಮುಂದಾಗಿದ್ದರೂ ಬಿಡುತ್ತಿಲ್ಲ. ಈ ಮೂಲಕ ಒಬ್ಬ ಪ್ರಭಾವಿ ಸಚಿವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ವಿಡಿಯೊದಲ್ಲೇನಿದೆ?

ಪರಸಪ್ಪ

ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಳ್ಳುವ ಪರಸಪ್ಪ ಎಂಬುವವರು ವಿಡಿಯೊದಲ್ಲಿ ಮಾತನಾಡಿದ್ದು, “ಪಿ‌ಎಸ್‌ಐ ಆಗಬೇಕೆಂದು ನನ್ನ ಮಗ ಅಂದುಕೊಂಡಿದ್ದ. ಶಾಸಕ ದಡೇಸುಗೂರು ಕಡೆಯವರು ಪಿಎಸ್‌ಐ ಮಾಡಿಸುವುದಾಗಿ ಹಣವನ್ನು ನಿಗದಿ ಮಾಡಿದ್ದಾರೆ. ಅದಾದ ನಂತರ ಪರಸಪ್ಪನವರಿಂದ ಶಾಸಕರ ಭವನಕ್ಕೆ ಬರಲು ಹೇಳಿದ್ದಾರೆ. ಶಾಸಕರ ಫಾರ್ಚುನರ್ ಕಾರ್‌ನಲ್ಲಿ ಶಾಸಕರ ಭವನದೊಳಗೆ ಕರೆದೊಯ್ದು 30 ಲಕ್ಷಕ್ಕೆ ಡೀಲ್ ಮಾಡಲಾಗುತ್ತದೆ. ಮೊದಲ ಕಂತು 15 ಲಕ್ಷ ರೂಪಾಯಿಯನ್ನು ನೀಡಲಾಗಿದೆ” ಎಂಬಿತ್ಯಾದಿ ವಿಷಯವನ್ನು ಪರಸಪ್ಪ ಹೇಳಿಕೆ ನೀಡಿದ್ದಾರೆ.

ಈ ವಿಡಿಯೊ ಬಿಡುಗಡೆ ಮಾಡಿದ ಪ್ರಿಯಾಂಕ್‌ ಖರ್ಗೆ, ವಿಧಾನಸೌಧದ ಮುಂದೆಯೆ ಡೀಲ್ ಮಾಡಲಾಗಿದೆ. ವಿಧಾನಸೌಧ ಏನು ವ್ಯಾಪರಕ್ಕಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದರಲ್ಲಿ ಗೃಹಸಚಿವರೂ ಶಾಮೀಲಾಗಿದ್ದಾರೆಯೇ? ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಕ್ಷವಾಗಿದೆ. ಶಾಸಕರು ಬ್ರೋಕರ್‌ಗಳಾಗಿದ್ದಾರೆ. ಬಿಜೆಪಿ ಬ್ರೋಕರ್ ಜನತಾ ಪಕ್ಷವಾಗಿ ಬದಲಾಗುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಆರೋಪ ಮಾಡಿದ್ದಾರೆ.

ಸಮಗ್ರ ತನಿಖೆಯಾಗಲಿ- ತಂಗಡಗಿ
ಈ ಹಿಂದೆ ಮಹಿಳೆಯೊಬ್ಬರ ಜತೆ ಶಾಸಕ ಬಸವರಾಜ ದಡೇಸುಗೂರು ಆಡಿಯೊ ಬಿಡುಗಡೆಗೊಂಡಿತ್ತು. ಆಗ ನಾನು ಅದರ ಬಗ್ಗೆ ಮಾತನಾಡಲಿಲ್ಲ. ಅನ್ಯಾಯಕ್ಕೊಳಗಾದ ಮಹಿಳೆ ಬಂದು ನ್ಯಾಯ ಕೇಳಿದ್ದರೆ ಮಾತನಾಡುತ್ತಿದ್ದೆ. ಆದರೆ, ಈ ವಿಚಾರವನ್ನು ಹಾಗೇ ಬಿಡಲಾಗುವುದಿಲ್ಲ. ಬಡಮಕ್ಕಳಿಗೆ ಅನ್ಯಾಯ ಆಗುವುದನ್ನು ಬಿಡಲು ಆದೀತೇ? ಈ ಪಿಎಸ್‌ಐ ಹಗರಣದ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದರು.

ಇದನ್ನೂ ಓದಿ | PSI Scam | ಪೊಲೀಸ್‌ ನೇಮಕಾತಿ ಹಗರಣದ ಮತ್ತೊಬ್ಬ ಆರೋಪಿ ಅರೆಸ್ಟ್‌, 40 ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದ!

ಕ್ಷೇತ್ರದಲ್ಲಿದ್ದಾರೆ 15 ಸಂತ್ರಸ್ತ ಅಭ್ಯರ್ಥಿಗಳು
ಸರ್ಕಾರ ಸರಿಯಾಗಿ ತನಿಖೆ ನಡೆಸಿದದಲ್ಲಿ ನಮ್ಮ ಕ್ಷೇತ್ರದಲ್ಲಿಯೇ ಸುಮಾರು 15 ಮಂದಿ ದುಡ್ಡು ಕೊಟ್ಟವರು ಸಿಗುತ್ತಾರೆ. ಬಡವರು ಜಮೀನು ಮಾರಿ ದೊಡ್ಡು ಕೊಟ್ಟಿದ್ದಾರೆ. ಮಾಧ್ಯಮಗಳ ಮುಂದೆ ಬರುವುದಕ್ಕೆ ಹೆದರುತ್ತಿದ್ದಾರೆ. ನನ್ನ ಬಳಿಯೇ ಮೂರು ಜನ ಬಂದಿದ್ದರು. ಪಾಪ ಹಣ ಪಡೆದುಕೊಂಡವರಿಗೆ ಕೊನೇ ಪಕ್ಷ ನಿಮ್ಮ ನಲವತ್ತು ಪರ್ಸೆಂಟ್‌ ಕಡಿತ ಮಾಡಿಕೊಂಡಾದರೂ ಹಣ ಕೊಡಿ ಎಂದು ವ್ಯಂಗ್ಯವಾಡಿದ ತಂಗಡಗಿ, ನಾನು ಯಾವ ವಿಡಿಯೊವನ್ನೂ ಎಡಿಟ್‌ ಮಾಡಿಲ್ಲ ಎಂದು ತಿಳಿಸಿದರು.

ಶಾಸಕರು ಆಡಿಯೊ ಒಪ್ಪಿಕೊಂಡರೂ ಕ್ರಮವಿಲ್ಲ
ಮಾಧ್ಯಮದಲ್ಲಿ ಸತತ ಒಂದು ವಾರದಿಂದ ನಮ್ಮ ಕ್ಷೇತ್ರದ ಶಾಸಕ ದಡೇಸುಗೂರು ಆಡಿಯೋ ವೈರಲ್ ಆಗಿದೆ. ಕುಷ್ಟಗಿಯ ಕಾನ್ಸ್‌ಟೇಬಲ್ ಪರಸಪ್ಪ ನಡುವಿನ ಆಡಿಯೋ ವೈರಲ್ ಆಗಿತ್ತು. ಸೆಪ್ಟೆಂಬರ್ 5ರಂದು ಆಡಿಯೋ ಬಿಡುಗಡೆ ಆಗಿತ್ತು. ಅಲ್ಲದೆ, ಇದು ತಮ್ಮದೇ ಆಡಿಯೋ ಎಂದು ಶಾಸಕರೂ ಒಪ್ಪಿಕೊಂಡಿದ್ದರು. ಆದರೆ, ಇಲ್ಲಿಯವರೆಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಕೊಪ್ಪಳದಲ್ಲಿ ಪ್ರತಿಭಟನೆ
ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಶಾಸಕ ಬಸವರಾಜ್‌ ದಡೇಸುಗೂರು ಹಣ ಪಡೆದಿದ್ದಾರೆ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾರಟಗಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕಾರಟಗಿ ಎಪಿಎಂಸಿ ಬಳಿ ಧರಣಿ ಕುಳಿತ ಕಾಂಗ್ರೆಸ್ ಕಾರ್ಯಕರ್ತರು, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ದೂರಿನ ಪ್ರತಿ ಸಲ್ಲಿಸಿದ್ದಾರೆ. ಆಡಿಯೊ ಬಹಿರಂಗವಾಗಿ ವಾರ ಕಳೆದರೂ ತನಿಖೆ ನಡೆಸದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | PSI scam | ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ವಿರುದ್ಧ ಕ್ರಮದ ಸುಳಿವು ನೀಡಿದ ಸಿಎಂ

Exit mobile version