ಬೆಂಗಳೂರು: ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನಡೆದಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ತನಿಖೆ ನಡೆಸುತ್ತಿರುವ ಸರ್ಕಾರ, ಮರು ಪರೀಕ್ಷೆ ಮಾಡಲು ನಿರ್ಧಾರ ಮಾಡಿದೆ.
ಚುನಾವಣಾ ವರ್ಷದಲ್ಲಿ ಬೆಳಕಿಗೆ ಬಂದಿರುವ ಹಗರಣ ರಾಜ್ಯ ಸರ್ಕಾರವನ್ನು ಈಗಾಗಲೆ ಇಕ್ಕಟ್ಟಿಗೆ ಸಿಲುಕಿಸಿದೆ. ಒಬ್ಬರ ಹಿಂದೊಬ್ಬರಂತೆ ಇದೀಗ 18 ಆರೋಪಿಗಳು ಬಂಧಿತರಾಗಿರುವ ಹಗರಣದ ಆಳ ಬಹಳಷ್ಟಿದ್ದು, ಸಾಕಷ್ಟು ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವ ಸಾದ್ಯತೆಯಿದೆ. ಹೀಗಾಗಿ ಮರುಪರೀಕ್ಷೆ ನಡೆಸುವುದೇ ಉತ್ತಮ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಈ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಡಿಜಿಐಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಅನೇಕರ ಜತೆಗೆ ಶುಕ್ರವಾರ ಸಭೆ ನಡೆಸಿದರು.
ಸಭೆಯ ನಂತರ ಮಾತನಾಡಿದ ಆರಗ ಜ್ಞಾನೇಂದ್ರ, 545 ಪಿಎಸ್‌ಐ ಹುದ್ದೆಗೆ ಪರೀಕ್ಷೆ ನಡೆಸಲಾಗಿತ್ತು. ಈಗಾಗಲೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ ಅನೇಕರನ್ನು ಬಂಧಿಸಲಾಗಿದೆ. ಹೆಚ್ಚು ಅಂಕ ಪಡೆದ ಕೆಲವರು ಕೆಲಸಕ್ಕೆ ಸೇರ್ಪಡೆಯೂ ಆಗಿದ್ದರು. ಅಷ್ಟರೊಳಗೆ ಹಗರಣ ಬೆಳಕಿಗೆ ಬಂದಿದೆ. ತನಿಖೆಯಲ್ಲಿ, ಮತ್ತಷ್ಟು ಅಕ್ರಮಗಳು ಪತ್ತೆಯಾಗುವ ಅಂದಾಜಿದೆ. ಹಾಗಾಗಿ ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಒಟ್ಟು 54,289 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದರು. ಇವರಲ್ಲಿ ಆರೋಪಿಗಳನ್ನು ಹೊರತುಪಡಿಸಿ ಮತ್ತೆಲ್ಲರಿಗೂ ಮರು ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಹೆಚ್ಚಿನ ಓದಿಗಾಗಿ | PSI Scam | 18 ದಿನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ದಿವ್ಯಾ ಹಾಗರಗಿ ಅರೆಸ್ಟ್: ಒಟ್ಟು 18 ಆರೋಪಿಗಳ ಬಂಧನ
ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಬಳಸಿ ಅಕ್ರಮ ಎಸಗಿದ್ದಾರೆ ಎಂದು ತಿಳಿಸಿದ ಆರಗ ಜ್ಞಾನೇಂದ್ರ, ಯಾವ ರೀತಿ ಅಕ್ರಮ ನಡೆಸಲಾಗಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರೆ ಅವರ ವಿರುದ್ಧವೂ ನಿರಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಎಷ್ಟು ಕೇಂದ್ರಗಳಲ್ಲಿ ಮರುಪರೀಕ್ಷೆ ನಡೆಸಬೇಕು, ಇಲಾಖೆಯಿಂದಲೇ ಪರೀಕ್ಷೆ ನಡೆಸಬೇಕೆ ಅಥವಾ ಯಾವುದಾದರೂ ಸಂಸ್ಥೆಯಿಂದ ನಡೆಸಬೇಕೆ ಎಂಬ ಕುರಿತು ಶೀಘ್ರದಲ್ಲೇ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆಗೆ 2021ರ ಆಗಸ್ಟ್ 3ರಂದು ರಾಜ್ಯಾದ್ಯಂತ ಪರೀಕ್ಷೆಗಳು ನಡೆದಿದ್ದವು. 2022ರ ಜನವರಿ 19 ರಂದು ಹೊರಬಂದಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯ ನಂತರ ವಿವಾದ ಭುಗಿಲೆದ್ದಿತ್ತು. ಪರೀಕ್ಷೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ರೀತಿ ಅನೇಕ ಅಭ್ಯರ್ಥಿಗಳು ದೂರು ನೀಡಿದ್ದರಿಂದ ಪ್ರಕರಣದ ವಿಚಾರಣೆಯನ್ನು ಸಿಐಡಿಗೆ ಗೃಹ ಇಲಾಖೆ ವಹಿಸಿತ್ತು. ಹಗರಣಕ್ಕೆ ಉದಾಹರಣೆಯಾಗಿ ಹೇಳುವುದಾದರೆ, ವೀರೇಶ್ ಎಂಬ ಅಭ್ಯರ್ಥಿ ಪರೀಕ್ಷೆಯಲ್ಲಿ 21 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದ. ಆದರೆ ಈತನಿಗೆ ಪರೀಕ್ಷೆಯಲ್ಲಿ 121 ಅಂಕ ಲಭಿಸಿತ್ತು. ಅಂದರೆ ಈತ ಪರೀಕ್ಷೆ ಬರೆದ ನಂತರ ಈತನ ಉತ್ತರ ಪತ್ರಿಕೆಯನ್ನು ಯಾರೋ ತಿದ್ದಿ ಸರಿಯುತ್ತರ ಬರೆದಿದ್ದರು. ಈತ ಪರೀಕ್ಷೆ ಬರೆದ ಶಹಬಜಾರ್ ಬಿಡಿಎ ಲೇಔಟ್‌ನಲ್ಲಿರುವ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೊಠಡಿ ಮೇಲ್ವಿಚಾರಕಿಯೇ ಉತ್ತರ ಪತ್ರಿಕೆಯನ್ನು ತಿದ್ದಿದ್ದರು ಎನ್ನಲಾಗಿತ್ತು.
18 ದಿನಗಳಿಂದ ತಲೆ ಮರೆಸಿಕೊಂಡಿದ್ದ ದಿವ್ಯಾ ಹಾಗರಗಿಯನ್ನು ಮಹಾರಾಷ್ಟ್ರದ ಪುಣೆಯಿಂದ ಶುಕ್ರವಾರ ಬಂಧಿಸಲಾಗಿದ್ದು, ಇಲ್ಲಿವರೆಗೆ ಒಟ್ಟು 18 ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಆರೋಪಿಗಳಲ್ಲಿ, ಅಕ್ರಮವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳೂ ಇದ್ದಾರೆ. ಅಂತಿಮ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿದ್ದ ಎಲ್ಲ ಅಭ್ಯರ್ಥಿಗಳೂ ವಿಚಾರಣೆಗೆ ಹಾಜರಾಗುವಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ಪೊಲೀಸರು ಈಗಾಗಲೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | ಖಡಕ್ CM ಅಂದರೆ ಏನು?: ಪ್ರತಿಪಕ್ಷಗಳಿಗೆ ಬಸವರಾಜ ಬೊಮ್ಮಾಯಿ ಪ್ರಶ್ನೆ