ಬೆಂಗಳೂರು: ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಪಿಎಸ್‌ಐ ಹಗರಣದಲ್ಲಿ(PSI Scam) ಮತ್ತೊಬ್ಬನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಹರೀಶ್ ಬಂಧಿತ.
545 ಪಿಎಸ್‌ಐಗಳ ನೇಮಕಾತಿ ಹಗರಣದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿ ಅನೇಕರನ್ನು ಬಂಧಿಸಲಾಗಿದೆ. ಹರೀಶ್‌ನನ್ನೂ ಈ ಹಿಂದೆ ಸಿಐಡಿ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು. ಇದೀಗ ಆರೋಪದ ಕುರಿತು ಬಲವಾದ ಸಾಕ್ಷಿ ಲಭಿಸಿದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.
ಹರೀಶ್, ಐಟಿಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಸ್ವಂತ ಊರು ಚಿಕ್ಕಕಲ್ಯದವನು. 2019ರಿಂದ ಪಿಎಸ್‌ಐ ಆಗಿರುವ ಈತ, ಈಗಾಗಲೆ ಪ್ರಕರಣದಲ್ಲಿ 14ನೇ ಆರೋಪಿಯಾದ ದಿಲೀಪ್ ಎಂಬಾತ ಆಯ್ಕೆಯಾಗಲು ಸಹಕರಿಸಿದ್ದ. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ವಿಚಾರಣೆ ನಂತರ ಮತ್ತಷ್ಟು ಮಾಹಿತಿ ಬೆಳಕಿಗೆ ಬರಲಿದೆ.
ಈಗಾಗಲೆ ಅನೇಕರನ್ನು ಬಂಧಿಸಲಾಗಿರುವ ಹಗರಣದಲ್ಲಿ ಕಳೆದ ವಾರವಷ್ಟೆ ಕುಶಾಲ್ ಎಂಬಾತನನ್ನು ಬಂಧಿಸಲಾಗಿತ್ತು. ಪಿಎಸ್‌ಐ ಅಂತಿಮ ಆಯ್ಕೆ ಪಟ್ಟಿಯಲ್ಲಿ ಈತ ಮೊದಲ ರ‍್ಯಾಂಕ್ ಪಡೆದಿದ್ದ. ಕುಶಾಲ್ ಮಾಗಡಿಯ ಜುಟ್ಟನಹಳ್ಳಿಯವನು. 200 ಅಂಕಗಳಿಗೆ 168 ಅಂಕ ಪಡೆದಿದು ಫಸ್ಟ್ ರ‍್ಯಾಂಕ್ ಪಡೆದಿದ್ದ. ಕುಶಾಲ್, ಸರ್ಕಾರದ ಸಚಿವರೊಬ್ಬರ ದೂರದ ಸಂಬಂಧಿ ಎಂಬ ಮಾತೂ ಕೇಳಿಬರುತ್ತಿತ್ತು. ಕುಶಾಲ್ ತಂದೆ ಸ್ಥಳೀಯ ರಾಜಕಾರಣಿಯಾಗಿದ್ದು, ಜುಟ್ಟನಹಳ್ಳಿ ಜಯರಾಮಣ್ಣ ಎಂದು ಪರಿಚಿತರು.
ಈ ಹಿಂದೆಯೇ ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಗಡಿ ಮೂಲದ ದರ್ಶನ್ ಗೌಡ ಹಾಗೂ ಕುಶಾಲ್ ಇಬ್ಬರೂ ಸ್ನೇಹಿತರು. ಇದೀಗ ಬಂಧಿತನಾಗಿರುವ ಹರೀಶ್ ಕೂಡ ಸಚಿವರ ಗ್ರಾಮದವನೇ ಆದ ಕಾರಣ ಪ್ರತಿಪಕ್ಷಗಳಿಗೆ ಆಹಾರ ಸಿಕ್ಕಂತಾಗಿದೆ.
ಇದನ್ನೂ ಓದಿ | PSI Scam | ಸಚಿವರ ಹೆಸರು ಹೇಳಿ ತಪ್ಪಿಸಿಕೊಂಡಿದ್ದ ಅಭ್ಯರ್ಥಿ ಬಂಧನ